Advertisement

ಎಚ್.ಕೆ.ಪಾಟೀಲರಿಂದ ಹತಾಶೆಯ ಅಪ್ರಬುದ್ಧ ಹೇಳಿಕೆ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

07:02 PM Feb 26, 2021 | Team Udayavani |

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಪ್ರಭಾವಿ ಮತ್ತು ಹಿರಿಯರಾದ ಎಚ್.ಕೆ.ಪಾಟೀಲರು ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಕುರಿತು ನೀಡಿರುವ ಹೇಳಿಕೆಯು ಬಾಲಿಶ ಮತ್ತು ಹತಾಶೆಯ ಪ್ರತಿಬಿಂಬದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

Advertisement

ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಪ್ರಧಾನಿಗಳಾದ ನರೇಂದ್ರ ಮೋದಿ ಅವರು ದೇಶದಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ತ್ರಿವಳಿ ತಲಾಖ್ ರದ್ದು, 370ನೇ ವಿಧಿ ರದ್ದು, ಕೋವಿಡ್ ಸಂಕಷ್ಟ ಕಾಲದ ಸಮರ್ಥ ನಿರ್ವಹಣೆ, ಕೋವಿಡ್ ಲಸಿಕೆ ವಿದೇಶಗಳಿಗೂ ರಫ್ತು ಮಾಡುವ ಮೂಲಕ ನರೇಂದ್ರ ಮೋದಿಯವರು ವಿಶ್ವದಾದ್ಯಂತ ಮನ್ನಣೆ ಪಡೆದಿದ್ದಾರೆ. ಅಲ್ಲದೆ, ಅವರ ಸಾರ್ಥಕ ಸೇವೆಯನ್ನು ಗುರುತಿಸಿ ಅನೇಕ ವಿಶ್ವ ಮಟ್ಟದ ಪ್ರಶಸ್ತಿಗಳನ್ನೂ ನೀಡಲಾಗಿದೆ ಎಂದು ಕಟೀಲ್ ತಿಳಿಸಿದ್ದಾರೆ.

ಕೋವಿಡ್ ಲಸಿಕೆಯನ್ನು ವಿಶ್ವದ ಅನೇಕ ದೇಶಗಳಿಗೆ ಸರಬರಾಜು ಮಾಡುವ ಮೂಲಕ ವಿಶ್ವವೇ ಒಂದು ಕುಟುಂಬ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರ ವೇಷಭೂಷಣ ಮತ್ತು ಹಾವಭಾವಗಳನ್ನು ನೆನಪಿಸಿಕೊಂಡು ಎಚ್.ಕೆ.ಪಾಟೀಲರಂಥ ಹಿರಿಯ ಕಾಂಗ್ರೆಸ್ಸಿಗರು ಕೀಳುಮಟ್ಟದ ಮಾತನ್ನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಡಿಸಿ ಕಚೇರಿ ಆವರಣದಲ್ಲೇ ಕ್ರಿಮಿನಾಶಕ ಸೇವಿಸಿದ ಖಾಸಗಿ ಶಾಲೆ ಮುಖ್ಯಸ್ಥ

ನರೇಂದ್ರ ಮೋದಿ ಅವರ ವ್ಯಕ್ತಿತ್ವ, ಸಮರ್ಥ ಕಾರ್ಯನಿರ್ವಹಣೆಯನ್ನು ಜನಸಾಮಾನ್ಯರೂ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಈ ಮಾದರಿಯ ಹೇಳಿಕೆಯಿಂದ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವುದಿಲ್ಲ. ರವೀಂದ್ರನಾಥ ಟಾಗೋರ್, ಸುಭಾಷ್‍ಚಂದ್ರ ಬೋಸ್, ಅತ್ಯುತ್ತಮ ಸಂವಿಧಾನವನ್ನು ಜನರಿಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಚರಿತ್ರೆ, ಚಿಂತನೆ ಮತ್ತು ಆದರ್ಶಗಳಿಂದ ನರೇಂದ್ರ ಮೋದಿಯವರು ಪ್ರಭಾವಿತರಾಗಿರುವುದು ಸಹಜ. ಆದರೆ, ಅವರ ಉಡುಪು, ಹಾವಭಾವಗಳ ಬಗ್ಗೆ ಗೌರವ ಇದೆ; ಅವರದೇ ಆದ ಸಿದ್ಧಾಂತ, ವಿಶಿಷ್ಟ ವ್ಯಕ್ತಿತ್ವ ಅವರಿಗಿದೆ ಎಂದು ತಿಳಿಸಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದವರಿಗೆ ಕಳೆದ ಆರೇಳು ವರ್ಷಗಳಿಂದ ಟೀಕೆ ಮಾಡಲು ನರೇಂದ್ರ ಮೋದಿ ಅವರ ಉಡುಪು, ಕೇಶವಿನ್ಯಾಸ ಮತ್ತು ಹಾವಭಾವ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂಬ ಸ್ಥಿತಿಗೆ ಕಾಂಗ್ರೆಸ್ ಮುಖಂಡರು ತಲುಪಿದ್ದಾರೆ. ಕಾಂಗ್ರೆಸ್ ಮುಖಂಡರ ತಮ್ಮ ಈ ರೀತಿಯ ನಡೆಗೆ ಕೇವಲ ಅನುಕಂಪವನ್ನಷ್ಟೇ ಅವರು ನಿರೀಕ್ಷಿಸಲು ಸಾಧ್ಯ ಎಂದೂ ಕಟೀಲ್ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next