Advertisement

ಇಂದು ನಳಿನ್‌ ಪದಗ್ರಹಣ ತವರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು

12:50 AM Aug 27, 2019 | Sriram |

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪದಗ್ರಹಣ ಸಮಾರಂಭವು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 2,500ಕ್ಕೂ ಅಧಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ನಳಿನ್‌ ಅವರು ಹಾಲಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಸಂಭ್ರಮದಲ್ಲಿ ದಕ್ಷಿಣ ಕನ್ನಡದಿಂದ 2,500ಕ್ಕೂ ಅಧಿಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಸುಮಾರು 24ಕ್ಕೂ ಹೆಚ್ಚು ಖಾಸಗಿ ಬಸ್‌ಗಳಲ್ಲಿ ಅವರು ಸೋಮವಾರ ರಾತ್ರಿ ಬೆಂಗಳೂರಿಗೆ ತೆರಳಿದ್ದಾರೆ. ಇದಲ್ಲದೆ ಸ್ವಂತ ವಾಹನಗಳಲ್ಲೂ ತೆರಳಿದ್ದಾರೆ.

ನಳಿನ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಮಂಗಳವಾರ ಬೆಳಗ್ಗೆ ವಿಮಾನದಲ್ಲಿ ತೆರಳುತ್ತಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆಗಳಾಗಿದ್ದು, ಅಲ್ಲಿಂದ ವಾಹನ ಮೆರವಣಿಗೆ ನಡೆಯಲಿದೆ. ಕಾಡು ಮಲ್ಲೇಶ್ವರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಕ್ಷದ ಕಚೇರಿಗೆ ಆಗಮಿಸಲಿದ್ದು, ಬೆಳಗ್ಗೆ 10.30ರಿಂದ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next