Advertisement

ರೈಲ್ವೇ ಸಮಸ್ಯೆ ನಿವಾರಣೆಗೆ ಜಂಟಿ ಸಭೆ: ನಳಿನ್‌ ಕುಮಾರ್‌ ಕಟೀಲು

03:40 AM Jul 07, 2017 | Team Udayavani |

ಮಂಗಳೂರು: ಪ್ರಿಪೇಯ್ಡ್ ರಿಕ್ಷಾ ಕೌಂಟರ್‌, ರೈಲ್ವೇ ಲೆವೆಲ್‌ ಕ್ರಾಸಿಂಗ್‌, ಆರ್‌ಒಬಿ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಪಟ್ಟು ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜಂಟಿ ಸಭೆಯನ್ನು ಜು. 22ರಂದು ಮಂಗಳೂರಿನಲ್ಲಿ ಆಯೋಜಿಸಲು ಗುರುವಾರ ಜರಗಿದ ರೈಲ್ವೇ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ನಿರ್ಧರಿಸಲಾಯಿತು. ರೈಲ್ವೇ ಇಲಾಖೆಗೆ ಸಂಬಂಧಪಟ್ಟಂತೆ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ರೈಲ್ವೇ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ದ.ಕ. ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕ ಅಧಿಕಾರಿಗಳ ಸಭೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ನೇತೃತ್ವದಲ್ಲಿ ಜರಗಿತು.

Advertisement

ಕಂಕನಾಡಿ ಜಂಕ್ಷನ್‌ ಹಾಗೂ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಗಳಲ್ಲಿ ಪ್ರೀಪೇಯ್ಡ್ ರಿಕ್ಷಾ ಕೌಂಟರ್‌ ಸಮಸ್ಯೆಗಳು ಬಗ್ಗೆ ಆರ್‌ಟಿಒ, ಪೊಲೀಸ್‌ ಹಾಗೂ ರೈಲ್ವೇ ಅಧಿಕಾರಿಗಳ ಜತೆ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ರೈಲು ನಿಲ್ದಾಣಗಳಲ್ಲಿರುವ ಸಮಸ್ಯೆಗಳು, ಮೂಲಸೌಕರ್ಯ, ಮಹಾನಗರ ಪಾಲಿಕೆ, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಪಟ್ಟಂತೆ ರೈಲ್ವೇ ಇಲಾಖೆಯಿಂದ ಆಗಬೇಕಾಗಿರುವ ಪೂರಕ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ರೈಲ್ವೇಯ ಪಾಲ್ಗಾಟ್‌, ಮೈಸೂರು ಹಾಗೂ ಕೊಂಕಣ ರೈಲ್ವೇಯ ವಿಭಾಗೀಯ ಪ್ರಬಂಧಕರು, ಎನ್‌ಎಚ್‌ಐಎ, ಪಾಲಿಕೆ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸುತ್ತಾರೆ ಎಂದರು.

ಪರಿಶೀಲನೆ
ಸಭೆಯ ಬಳಿಕ ಮಂಗಳೂರಿನಿಂದ ಸುಬ್ರಹ್ಮಣ್ಯವರೆಗೆ ರೈಲು ಹಳಿಯಲ್ಲಿ ಸಂಚರಿಸಿ ರೈಲುಮಾರ್ಗದಲ್ಲಿರುವ ಲೆವೆಲ್‌ ಕ್ರಾಸಿಂಗ್‌, ಮೇಲ್ಸೇತುವೆ, ಕೆಳಸೇತುವೆಗಳು, ನಿಲ್ದಾಣಗಳಲ್ಲಿ ಸ್ಥಿತಿ, ಮೂಲ ಸೌಕರ್ಯಗಳು, ರೈಲ್ವೇ ಜಾಗಗಳ ಅತಿಕ್ರಮಣ ದೂರುಗಳು ಮುಂತಾದುವುಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದ ಸಂಸದರು ಸಂಬಂಧಪಟ್ಟ ವಿಭಾಗಗಳ ವಿಭಾಗೀಯ ರೈಲ್ವೇ ಪ್ರಬಂಧಕರು ಜತೆಗಿರಬೇಕು ಎಂದು ಸೂಚಿಸಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೇ ಪ್ರಬಂಧಕರು ರೈಲ್ವೆ ಅಧಿಕಾರಿಗಳ ಜತೆ ಸಂಸದರ ಸಭೆಗೆ ಹಾಜರಾಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಳಿನ್‌ ಕುಮಾರ್‌ ಕಟೀಲು ಅವರು ಕಳೆದ 8 ವರ್ಷಗಳಿಂದ ನಾನು ನಡೆಸುತ್ತಿರುವ ಸಭೆಗೆ ಒಂದು ಬಾರಿಯೂ ಮೈಸೂರು ವಿಭಾಗದ ಡಿಆರ್‌ಎಂಗಳು ಬಂದಿಲ್ಲ. ಕೊಂಕಣ ಹಾಗೂ ಪಾಲ್ಗಾಟ್‌ ವಿಭಾಗದಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದ ಅವರು ಜು.22ರ ಸಭೆಗೆ ಮೈಸೂರು ವಿಭಾಗದ ಡಿಆರ್‌ಎಂ ಉಪಸ್ಥಿತರಿರಬೇಕು. ಈ ಬಗ್ಗೆ ಮುಂಚಿತವಾಗಿ ತಿಳಿಸಬೇಕು. ಉಪಸ್ಥಿತರಿರಲು ಸಮ್ಮತಿಸದಿದ್ದರೆ ರೈಲು ಸಚಿವರ ಗಮನಕ್ಕೆ ಇದನ್ನು ತರುತ್ತೇನೆ ಎಂದವರು ಹೇಳಿದರು.

ಪಡೀಲ್‌ : ರೈಲ್ವೇ ಕೆಳಸೇತುವೆ ಸಂಚಾರಕ್ಕೆ ತೆರವಿಗೆ ಸೂಚನೆ ಪಡೀಲ್‌ನಲ್ಲಿ ರಸ್ತೆ ಸಂಚಾರಕ್ಕೆ ಸಮಸ್ಯೆಗಳಾಗುತ್ತಿದ್ದು ಪಡೀಲ್‌ನಲ್ಲಿ ರಾ. ಹೆದ್ದಾರಿಯಲ್ಲಿ ನಿರ್ಮಿಸಿರುವ ಹೊಸ ರೈಲ್ವೇ ಕೆಳಸೇತುವೆಯನ್ನು ಶೀಘ್ರ ಸಂಚಾರಕ್ಕೆ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದರು. ಇಲ್ಲಿ ಒಂದು ಸ್ಲ್ಯಾಬ್‌ ಕಾಮಗಾರಿ ಬಾಕಿ ಇದೆ. ಇದು ಪೂರ್ತಿಯಾದ ಕೂಡಲೇ ಸಂಚಾರಕ್ಕೆ ತೆರವುಗೊಳಿಸಲಾಗುವುದು. ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿಂದ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. 

Advertisement

ಫ್ಲೈ ಓವರ್‌ ಕಾಮಗಾರಿ 
ತೊಕ್ಕೊಟ್ಟು ಹಾಗೂ ಪಂಪ್‌ವೆಲ್‌ನಲ್ಲಿ ಫ್ಲೈ ಓವರ್‌ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವ ಬಗ್ಗೆ ಕಾಮಗಾರಿ ನಿರ್ವಹಿಸುತ್ತಿರುವ ನವಯುಗ್‌ ಸಂಸ್ಥೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಂಸದರು ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಸೂಚಿಸಿದರು.ತೊಕ್ಕೊಟ್ಟು ಫ್ಲೈ ಓವರ್‌ ಕಾಮಗಾರಿ ಮುಂದಿನ ಮಾರ್ಚ್‌ ಹಾಗೂ ಪಂಪ್‌ವೆಲ್‌ನ ಕಾಮಗಾರಿ ಜೂನ್‌ನೊಳಗೆ ಪೂರ್ಣಗೊಂಡು ರಸ್ತೆಗೆ ಮುಕ್ತವಾಗಲಿದೆ ಎಂದು ನವಯುಗ್‌ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದರು.

ರೈಲ್ವೇ ಬಳಕೆದಾರರ ಸಲಹಾಸಮಿತಿ ಸದಸ್ಯ ಹನುಮಂತ ಕಾಮತ್‌, ಲಕ್ಷ್ಮೀನಾರಾಯಣ ಮುಂತಾದವರು ರೈಲ್ವೇ ಸಮಸ್ಯೆಗಳಿಗೆ ಸಂಬಂಧಪಟ್ಟು ಸಂಸದರ ಗಮನ ಸೆಳೆದರು.
ಎಡಿಸಿ ಕುಮಾರ್‌, ಮನಪಾ ಆಯುಕ್ತ ಮಹಮ್ಮದ್‌ ನಜೀರ್‌, ಪಾಲ್ಗಾಟ್‌ ವಿಭಾಗದ ಎಡಿಆರ್‌ಎಂ. ರಾಜ್‌ಕುಮಾರ್‌, ಕೊಂಕಣ ರೈಲ್ವೇಯ ವಲಯ ಎಂಜಿನಿಯರ್‌ ಆರ್‌.ಐ. ಪಾಟೀಲ್‌, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯ ಕುಮಾರ್‌ ಉಪಸ್ಥಿತರಿದ್ದರು.

ಪರಿಹಾರ ಪಡೆದಿರುವ ಕಟ್ಟಡಗಳ ಶೀಘ್ರ ತೆರವಿಗೆ ಸೂಚನೆ
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಕಾಮಗಾರಿಗೆ ಸ್ವಾಧೀನಪಡಿಸಿರುವ ಜಾಗಗಳ ಕೆಲವು ಮಾಲಕರು ಪರಿಹಾರ ಪಡೆದುಕೊಂಡು ಹಲವು ವರ್ಷಗಳಾದರೂ ಇನ್ನೂ ಜಾಗ ತೆರವುಗೊಳಿಸಿಲ್ಲ. ಇದರಿಂದ ಕಾಮಗಾರಿಗಳು ವಿಳಂಬವಾಗುತ್ತಿದೆ. ಭೂಸ್ವಾಧೀನ ಇಲಾಖೆಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಇವುಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದರು. ಸ್ವಾಧೀನಪಡಿಸಿರುವ ಕಟ್ಟಡಗಳ ತೆರವು ಕಾರ್ಯ ಚುರುಕುಗೊಳಿಸಲಾಗಿದ್ದು ತಲಪಾಡಿಯಿಂದ ಕೋಟೆಕಾರುವರೆಗೆ ಆಗಿದೆ. 2 ವಾರದೊಳಗೆ ಪಂಪ್‌ವೆಲ್‌ವರೆಗಿನ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next