ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದೆ. ಕೇಂದ್ರದ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟವಾಗಿ ಹೋರಗೆ ಹೋಗುವರ ಸಂಖ್ಯೆ ಹೆಚ್ಚಾಗಿದೆ. ಚಿಂತನಾ ಶಿಬಿರ ಪ್ರಾರಂಭವಾದ ಬಳಿಕ 60 ಜನ ಕಾಂಗ್ರೆಸ್ ಬಿಟ್ಟಿದ್ದಾರೆ. ರಾಜ್ಯದಲ್ಲೂ ಇದೇ ರೀತಿಯ ಪರಿಣಾಮ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಒಳಜಗಳ ಆತ್ಮವಿಶ್ವಾಸ ಕುಗ್ಗಿಸಿದೆ. ಮುಖ್ಯಮಂತ್ರಿ ಚಂದ್ರು, ಬ್ರಿಜೆಶ್ ಕಾಳಪ್ಪ, ಸುದರ್ಶನ ಕಾಂಗ್ರೆಸ್ ಬಿಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ತಮ್ಮ ಹಿಡಿತ ಹೆಚ್ಚು ಮಾಡಲು ಸಿದ್ದರಾಮಯ್ಯ ದಿನಕ್ಕೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ ಎಂದರು.
ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ನಡುವೆ ಹೊಂದಾಣಿಕೆ ಇಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಹೊಂದಾಣಿಕೆಯಾಗಲೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಸಿದ್ದರಾಮಯ್ಯ ಅದಕ್ಕೆ ವಿರುದ್ಧವಾಗಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗುವ ವಿಚಾರಕ್ಕೆ ಕಾಂಗ್ರೆಸ್ ನಲ್ಲಿ ಗೊಂದಲವಿದೆ. ಒಳಜಗಳ ಇತ್ಯರ್ಥಕ್ಕೆ ಚಿಂತನಾ ಶಿಬಿರ ಮಾಡಿದ್ದರು. ಆದರೆ ಚಿಂತನಾ ಶಿಬಿರ ವಿಚಿತ್ರ ಶಿಬಿರವಾಯಿತು. ಅಂದೇ ರಾಜ್ಯಸಭೆ ಚುನಾವಣೆ ಗಲಾಟೆ ನಡೆಯಿತು ಎಂದರು.
ಇದನ್ನೂ ಓದಿ:ನಿಮಗೆ ನಾಚಿಕೆ ಅಗೋದಿಲ್ವಾ?: ಆರ್ ಎಸ್ಎಸ್ ಮುಖಂಡರ ವಿರುದ್ಧ ವಿಶ್ವನಾಥ್ ಆಕ್ರೋಶ
ಇವರು ಸರ್ಕಾರ ಮಾಡುವುದು ಬಿಡಿ ಪಕ್ಷದ ಪೂರ್ಣ ತಂಡ ರಚನೆ ಮಾಡಲು ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎರಡು ವರ್ಷದಿಂದ ಪಕ್ಷದ ಪಧಾದಿಕಾರಿಗಳ ನೇಮಕ ಮಾಡಿಲ್ಲ. ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಇದರ ಪರಿಣಾಮ ಸಮಾಜದ ಮೇಲೆ ಬಿರಲು ಯತ್ನ ನಡೆಸಿದೆ. ದಿನಕ್ಕೆ ಒಂದು ಹೇಳಿಕೆ ಕೊಟ್ಟು ಅರಾಜಕತೆ ಸೃಷ್ಟಿ ಮಾಡಲು ಪ್ರಯತ್ನ ಮಾಡುತ್ತಿದೆ. ಗಲಭೆ ಸೃಷ್ಟಿಗೆ ಪ್ರೇರಣೆ ಕೊಡುವ ಕೆಲಸ ಮಾಡುತ್ತಿದೆ ಎಂದು ನಳಿನ್ ಕಟೀಲ್ ಟೀಕೆ ಮಾಡಿದರು.