Advertisement
ರವಿವಾರ ಬಿ.ಸಿ.ರೋಡ್ ನಲ್ಲಿ ನಡೆದ ಇಂದಿರಾ ಕ್ಯಾಂಟನ್ ಉದ್ಘಾಟನೆ ಮತ್ತು ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಶಾಸಕ ರಾಜೇಶ್ ನಾಯ್ಕ್, ಸಚಿವ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ್ ರೈ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಪರಸ್ಪರ ಘೋಷಣೆಗಳನ್ನು ಕೂಗುತ್ತಾ, ಮಾತಿನ ಚಕಮಕಿ ನಡೆದು ನಂತರ ಬಿಜೆಪಿ ಸಂಸದರು ಶಾಸಕರು ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಘಟನೆಯೂ ನಡೆಯಿತು.
ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಯು .ಟಿ.ಖಾದರ್ ಅವರ ಆಹ್ವಾನದ ಮೇರೆಗೆ ಈ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಬಂದಿದ್ದು, ಆದರೆ ಕಾರ್ಯಕ್ರಮದಲ್ಲಿ ಅವಮಾನ ಮಾಡಲಾಗಿದೆ. ಇದು ಒಂದು ಸರಕಾರಿ ಕಾರ್ಯಕ್ರಮ ಆದರೆ ಇದನ್ನು ಕಾಂಗ್ರೆಸ್ ಕಾರ್ಯಕ್ರಮದ ರೀತಿಯಲ್ಲಿ ಮಾಡಲಾಗಿದೆ. ಕಾಂಗ್ರೆಸ್ ನ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಶೇಖರ್ ಶೆಟ್ಟಿ ಮತ್ತು ತಂಡದವರು ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಮಾಡಿದ್ದಾರೆ, ಸಂಸದರು, ಶಾಸಕರಿಗೆ ಅಧಿಕಾರಿಗಳಿಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸರು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಅವರು ಕೆಲ ರಾಜಕಾರಣಿಗಳ ಕೈ ಗೊಂಬೆ ಯಾಗಿರುವುದನ್ನು ಸೂಚಿಸುತ್ತದೆ. ಈ ಘಟನೆ ಬಗ್ಗೆ ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಹೋರಾಟ ನಡೆಸಲಿದ್ದಾರೆ. ಈ ಘಟನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಯಾಗುತ್ತಾರೆ ಎಂದರು.