Advertisement

ಹೆಚ್‍ಡಿಕೆ ಕುಟುಂಬ ರಾಜಕೀಯ ಕೂಪದಿಂದ ಹೊರಬಂದು ಮಾತಾಡಲಿ: ನಳಿನ್‍ ಕುಮಾರ್

07:21 PM Oct 06, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕುಟುಂಬ ರಾಜಕೀಯದ ಕೂಪ ಮಂಡೂಕದಂತಿದ್ದಾರೆ. ಕುಟುಂಬವೆಂಬ ಕೂಪದಿಂದ ಹೊರಬಂದು ಅವರು ಮಾತನಾಡುವುದು ಉಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

Advertisement

ದೇಶ ಶಕ್ತಿಶಾಲಿಯಾಗಬೇಕೆಂಬ ಮಹತ್ವದ ಚಿಂತನೆಯನ್ನು ಆರ್‍ಎಸ್‍ಎಸ್ ಹೊಂದಿದೆ. ಭಾರತ ವಿಶ್ವಗುರುವಾಗಬೇಕು ಎಂಬ ಚಿಂತನೆಯೊಂದಿಗೆ ಅದು ಕಾರ್ಯನಿರ್ವಹಿಸುತ್ತಿದ್ದು, ಸ್ವಯಂ ಸೇವಕರು ಜೀವನವನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ವಿಶ್ವದ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿರುವ ಅಲ್ಲಿ ಯಾರೂ ಸ್ವಾರ್ಥಿಗಳಲ್ಲ. ಹಾಗೆಯೇ ನಾನು ನನ್ನ ಮಕ್ಕಳು, ಮರಿಮಕ್ಕಳೇ ಈ ರಾಜ್ಯ ದೇಶ ಆಳ್ವಿಕೆ ಮಾಡಬೇಕು ಎಂಬ ಸ್ವಾರ್ಥ ಅವರಲ್ಲಿಲ್ಲ ಎಂದು ಎಂದು ಅವರು ತಿಳಿಸಿದ್ದಾರೆ.

ಜೆಡಿಎಸ್ ಹಿರಿಯ ಮುಖಂಡರಾದ ಪಿ.ಜಿ.ಆರ್.ಸಿಂಧ್ಯಾ ಅವರು ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರು. ಆರೆಸ್ಸೆಸ್ ಬಗ್ಗೆ ಅವರಿಂದ ಕುಮಾರಸ್ವಾಮಿಯವರು ಕೇಳಿ ತಿಳಿದುಕೊಳ್ಳಲಿ. ಅಥವಾ ಯಾವುದಾದರೂ ಶಾಖೆಗೆ ಬಂದು ಅಲ್ಲಿ ಮಾಹಿತಿ ಪಡೆಯಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಕೆಲವರು ಸೈನ್ಯಕ್ಕೆ ಸೇರುವವರು ಹೊಟ್ಟೆಪಾಡಿಗಾಗಿ ಸೇರುತ್ತಾರೆʼ ಎಂದು ಮಾಜಿ ಮುಖ್ಯಮಂತ್ರಿಗಳು  ಸೈನಿಕರನ್ನೇ ಅವಮಾನಿಸಿದ್ದರು. ಈ ದೇಶದ ಸೈನಿಕ ಕಷ್ಟಗಳ ಬಗ್ಗೆ ಅವರಿಗೆ ಅರಿವಿಲ್ಲ. ಸೈನಿಕರಲ್ಲಿ ದೇಶಭಕ್ತಿಯಿರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಇವರು ಒಂದು ಕೋಟಿ ರೂಪಾಯಿ ಸಂಬಳ ಕೊಟ್ಟರೂ ಇವರ ಮಕ್ಕಳನ್ನು ಸೇನೆಗೆ ಸೇರಿಸಲಾರರು. ಮಕ್ಕಳನ್ನು ಸೇನೆಗೆ ಸೇರಿಸುವ ಈ ಆಹ್ವಾನವನ್ನು ಕುಮಾರಸ್ವಾಮಿಯವರು ಸ್ವೀಕರಿಸಲಿ ಎಂದು ನಳಿನ್‍ಕುಮಾರ್ ಕಟೀಲ್ ಅವರು ಸವಾಲೆಸೆದಿದ್ದಾರೆ.

ಸೈನಿಕರು ಮಾತ್ರವಲ್ಲದೆ ಈಗ ಯುಪಿಎಸ್‍ಸಿಯ ಅಧಿಕಾರಿಗಳನ್ನು ಅವಮಾನ ಮಾಡಿರುವ ಮಾಜಿ ಮುಖ್ಯಮಂತ್ರಿಗಳು ತಮ್ಮ ಹುದ್ದೆಯ ಘನತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಕುಟುಂಬವನ್ನಷ್ಟೇ ಗಮನಿಸಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Advertisement

ಸಮಾಜದಲ್ಲಿರುವ ದೋಷಗಳಾದ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ, ಸ್ವಜನಪಕ್ಷಪಾತ ಇದು ದೂರವಾಗಬೇಕು ಎಂದು ಆರ್‍ಎಸ್‍ಎಸ್ ಬಯಸುತ್ತದೆ. ಆರ್‍ಎಸ್‍ಎಸ್‍ನ ಕನಸು ಭಾರತ ಸಶಕ್ತ ರಾಷ್ಟ್ರವಾಗಬೇಕು ಎಂಬುದಾಗಿದೆ. ಕೆಲವರು ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರವನ್ನು ಹಾಸಿಗೆ ಮಾಡಿಕೊಂಡು ಹೊದ್ದು ಮಲಗಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅನುಮಾನಿಸುತ್ತಾರೆ ಎಂದು ಅವರು ನುಡಿದಿದ್ದಾರೆ.

ಆರ್‍ಎಸ್‍ಎಸ್ ಪರಿವಾರ ಸಂಸ್ಥೆಗಳ ಮೂಲಕ ಅನಾಥಾಶ್ರಮ, ಗುರುಕುಲ, ವಿಶೇಷ ಚೇತನ ಮಕ್ಕಳಿಗೆ ಸಾವಿರಾರು ಶಾಲೆಗಳನ್ನು ನಿಸ್ವಾರ್ಥವಾಗಿ ನಡೆಸಲಾಗುತ್ತಿದೆ. ಯುದ್ಧ, ನೆರೆ ಹಾವಳಿ,  ಕೊರೊನಾ ಸಮಯದಲ್ಲಿ, ಮಲೆನಾಡಿನಲ್ಲಿ ನಕ್ಸಲರ ಹಾವಳಿ ಇದ್ದಾಗ ಅಲ್ಲಿಯ ಜನರಿಗೆ ನಿಸ್ವಾರ್ಥ ಸೇವೆ ಮಾಡಿ ದೇಶ ಸೇವೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಸ್ವಯಂಸೇವಕರಿಗೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತೆ ಬಿಟ್ಟರೆ ಅವರಿಗೆ ಬೇರೆ ಯೋಚನೆಗಳೇ ಇಲ್ಲ. ಆದರೆ, ಟೀಕೆಗಾಗಿಯೇ ಟೀಕಿಸುವವರಿಗೆ ಇವೆಲ್ಲವೂ ಅರ್ಥವಾಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಪಿಎಚ್‍ಡಿ ಮಾಡಿರುವವರು, ಡಾಕ್ಟರ್‍ಗಳು ಎಂಜಿನಿಯರ್‍ಗಳು ಆರ್‍ಎಸ್‍ಎಸ್ ಕಾರ್ಯಕರ್ತರಾಗಿ ಸೇರಿ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಆರ್‍ಎಸ್‍ಎಸ್‍ನ ಸಾವಿರಾರು ಶಾಖೆಗಳಿವೆ. ಕ್ರೀಡಾಭಾರತಿ, ವಿದ್ಯಾಭಾರತಿ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ಕಾರ್ಯಕರ್ತರು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರ್ಯತಂತ್ರವಿರುವ ಸ್ವಾರ್ಥಿಗಳಿಗೆ ಇದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಯಾವುದಾದರೂ ಒಂದು ಆರ್‍ಎಸ್‍ಎಸ್ ಶಾಖೆಗೆ ಬಂದು ಅಧ್ಯಯನ ಮಾಡಿ ಸಂಶೋಧನೆ ಮಾಡಿದರೆ ಸಂಘದ ಧೋರಣೆಗಳು ಏನು ಎಂದು ತಿಳಿಯುತ್ತದೆ ಎಂದು ಸವಾಲೆಸೆದಿದ್ದಾರೆ.

ಕೆಲವರ ಕೃಪಾಕಟಾಕ್ಷದಿಂದ 1989ರಲ್ಲಿ ಕೆಎಎಸ್‍ನಿಂದ ಐಎಎಸ್‍ಗೆ ಬಡ್ತಿ ಪಡೆದಿದ್ದ ಅಧಿಕಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ 2007ರಲ್ಲಿ ನೇಮಿಸಿ  ಕೈಗೊಂಬೆಯನ್ನಾಗಿ ಮಾಡಿಕೊಂಡು ಮಾಡಬಾರದ ಅಕ್ರಮಗಳನ್ನು ಮಾಡಿದ್ದು ನಿಮಗೆ ನೆನಪಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸೈನಿಕರ ಬಗ್ಗೆ, ಆರ್‍ಎಸ್‍ಎಸ್ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಜನರೇ ಸೂಕ್ತ ಉತ್ತರ ನೀಡಿ ಮೂಲೆಗುಂಪು ಮಾಡಲಿದ್ದಾರೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next