ಮಂಗಳೂರು : ಇಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಒಂದು ವಿಶೇಷತೆಗೆ ಸಾಕ್ಷಿಯಾಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಧುರೀಣ ಮತ್ತು ಮಾಜೀ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರನ್ನು ಭೇಟಿಯಾಗಿ ಅವರ ಕಾಲಿಗೆರಗಿ ಆಶೀರ್ವಾದ ಪಡೆಯುವ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.
ನಳಿನ್ ಕುಮಾರ್ ಅವರು ಇಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ಸಮಯದಲ್ಲಿ ಜನಾರ್ಧನ ಪೂಜಾರಿಯವರೂ ದೇವಸ್ಥಾನದ ಕಛೇರಿಯಲ್ಲಿದ್ದರು. ಈ ವಿಷಯ ತಿಳಿದು ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಕಟೀಲ್ ಅವರು ಅಲ್ಲಿಗೆ ಹೋದರು. ಆ ಸಂದರ್ಭದಲ್ಲಿ ನಳಿನ್ ಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ
ಪೂಜಾರಿಯವರು ತಮ್ಮ ಕಾಲಿಗೆ ನಮಸ್ಕರಿಸಿದ ನಳಿನ್ ಅವರನ್ನು ಪ್ರೀತಿಯಿಂದ ತಬ್ಬಿಕೊಂಡು ‘ದೇವೆರ್ ಎಡ್ಡೆ ಮಲ್ಪಡ್’ (ದೇವರು ಒಳ್ಳೆಯದು ಮಾಡಲಿ) ಎಂದು ಶುಭ ಹಾರೈಸಿದರು. ‘ಈರೆನ ಆಶೀರ್ವಾದ ಸುರೂಟೆ ದೆತೊಂದೆ’ (ನಿಮ್ಮ ಆಶೀರ್ವಾದ ಮೊದಲಿಗೆ ತೆಗೆದುಕೊಂಡಿದ್ದೇನೆ) ಎಂದು ನಳಿನ್ ಅವರು ಪೂಜಾರಿಯವರಿಗೆ ಕೈ ಮುಗಿದರು.
ನಳಿನ್ ಕುಮಾರ್ ಕಟೀಲ್ ಅವರು 2009ರಲ್ಲಿ ಪ್ರಪ್ರಥಮ ಬಾರಿಗೆ ದ.ಕ. ಕ್ಷೇತ್ರದಿಂದ ಸಂಸದರಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜನಾರ್ಧನ ಪೂಜಾರಿಯವರೇ ಕಣದಲ್ಲಿದ್ದರು. ಅಂದು
ಪೂಜಾರಿಯವರನ್ನು ಭರ್ಜರಿಯಾಗಿ ಸೋಲಿಸಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ನಳಿನ್ ಕುಮಾರ್ ಕಟೀಲ್ ಅವರು ರಾಜಕೀಯ ವಲಯದಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು. ಮತ್ತೆ ಬಳಿಕ ಎರಡನೇ ಬಾರಿ 2014ರಲ್ಲಿಯೂ ಜನಾರ್ಧನ ಪೂಜಾರಿಯವರನ್ನೇ ಮಣಿಸಿ ಎರಡನೇ ಬಾರಿ ಸಂಸತ್ತಿಗೆ ಪ್ರವೇಶಿಸಿದ್ದರು. ಈ ಬಾರಿ
ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್ ನಿಂದ ಯುವ ಅಭ್ಯರ್ಥಿ ಮಿಥುನ್ ರೈ ಅವರು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.
ಮೋದಿ ಸಾಧನೆಯ ಆಧಾರದಲ್ಲಿ ಮತ್ತು ಎರಡು ಅವಧಿಯಲ್ಲಿ ತಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಲದಲ್ಲಿ
ನಳಿನ್ ಹ್ಯಾಟ್ರಿಕ್ ಗೆಲುವು ಸಂಪಾದಿಸುತ್ತಾರೋ ಅಥವಾ 2009ರಲ್ಲಿ ಹೊಸ ಮುಖದ ನಳಿನ್ ಗೆದ್ದಂತೆ ಈ ಬಾರಿಯೂ ಮಿಥುನ್ ಮ್ಯಾಜಿಕ್ ಮಾಡುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.
2009ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿಯೂ ನಳಿನ್ ಕುಮಾರ್ ಮತ್ತು ಜನಾರ್ಧನ ಪೂಜಾರಿಯವರು ಪ್ರಚಾರ ಸಂದರ್ಭದಲ್ಲಿ ಆಕಸ್ಮಿಕವಾಗಿ ಮುಖಾಮುಖಿಯಾಗಿದ್ದರು. ಆ ಸಂದರ್ಭದಲ್ಲಿ
ಪೂಜಾರಿಯವರಿದ್ದ ಕಾರಿನತ್ತ ತೆರಳಿ ನಳಿನ್ ಕುಮಾರ್ ಅವರು ಕಾಂಗ್ರೆಸ್ ನ ಈ ಹಿರಿಯ ನಾಯಕನ ಆಶೀರ್ವಾದವನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ರಾಜ್ಯದ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಕರಾವಳಿ ರಾಜಕಾರಣ ದ್ವೇಷರಹಿತ ಮತ್ತು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಗ್ಯಕರ ಸ್ಪರ್ಧೆಯಿಂದ ಸದಾ ಸುದ್ದಿಯಲ್ಲಿರುತ್ತದೆ.