Advertisement

ಮಂಗಳೂರು ಅಭಿವೃದ್ಧಿಗೆ 2000 ಕೋಟಿ ರೂ. ಅನುದಾನ: ನಳಿನ್‌

01:00 AM Mar 06, 2023 | Team Udayavani |

ಮಂಗಳೂರು: ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡುತ್ತಿದ್ದು, ಐದು ವರ್ಷಗಳಲ್ಲಿ 2,000 ಕೋಟಿ ರೂ. ಅಧಿಕ ಅನುದಾನ ನೀಡಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಹಾಗೂ ಮಂಗಳೂರು ಪಾಲಿಕೆ ವತಿಯಿಂದ ರವಿವಾರ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾ ನ್ಯಾಸದ ಬಳಿಕ ನಗರ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 700 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕೆಲಸ ನಡೆದು, ರಾಜ್ಯದಲ್ಲೇ 3ನೇ ಸ್ಥಾನದಲ್ಲಿದೆ. ಸ್ಮಾರ್ಟ್‌ಸಿಟಿ, ಅಮೃತ ಯೋಜನೆ, ಗೈಲ್‌ ಗ್ಯಾಸ್‌, ಜಲಸಿರಿಯಂತಹ ಹಲವಾರು ಯೋಜನೆಯ ಮೂಲಕ ನಗರ ಪರಿವರ್ತನೆಯಾಗುತ್ತಿದೆ ಎಂದರು.

ಪಂಪ್‌ವೆಲ್‌ ಕೆಲಸಕ್ಕೆ ಅಡ್ಡಗಾಲು ಹಾಕಿದ್ದು ಅಂದಿನ ಸರಕಾರ ಮತ್ತು ಸ್ಥಳೀಯಾಡಳಿತ. ಪಂಪ್‌ವೆಲ್‌ ಕೆಲಸ ಕ್ಲಿಯರ್‌ ಮಾಡಿದ್ದು ನಾನು. ಅಂದು ಅಭಿವೃದ್ಧಿಗೆ ತಡೆ ಒಡ್ಡಿದವರು ಇಂದು ಟೀಕೆ ಮಾಡುತ್ತಿದ್ದಾರೆ. ನಾನು ಸಂಸದನಾಗಿದ್ದ 2009-14ರ ಯುಪಿಎ ಸರಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಬಂದದ್ದು ಕೇವಲ 4,000 ಕೋಟಿ ರೂ. ಅನುದಾನ. ಬಿಜೆಪಿ ನೇತೃತ್ವದ ಒಂದನೇ ಅವಧಿಯಲ್ಲಿ 16,000 ಕೋ.ರೂ., 2ನೇ ಅವಧಿಯಲ್ಲಿ 26,000 ಕೋಟಿ ರೂ. ಅನುದಾನ ಬಂದಿದೆ ಎಂದರು.

ವೇದವ್ಯಾಸ್‌ ಇಚ್ಛಾಶಕ್ತಿಯ ರಾಜಕಾರಣಿ
ಶಾಸಕ ವೇದವ್ಯಾಸ ಕಾಮತ್‌ ಅವಧಿಯಲ್ಲಿ ನಗರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅವರು ಇಚ್ಛಾಶಕ್ತಿಯುಳ್ಳ, ಹೃದಯವಂತ ರಾಜಕಾರಣಿ. ನಿರಂತರ ಪರಿಶ್ರಮದಿಂದ ಹಲವು ಯೋಜನೆಗಳನ್ನು ಮಂಗಳೂರಿಗೆ ಪರಿಚಯಿಸಿದ್ದಾರೆ. ಜಲಾಭಿಮುಖ ಪ್ರದೇಶಗಳ ಅಭಿವೃದ್ಧಿಯ ಜತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅವಕಾಶ ನೀಡಲಾಗುತ್ತಿದೆ. ಸುಲ್ತಾನ್‌ ಬತ್ತೇರಿ-
ಬೆಂಗ್ರೆ ಪ್ರದೇಶದ ತೂಗುಸೇತುವೆ ಕನಸು ಈಗ ನನಸಾಗುತ್ತಿದೆ ಎಂದು ಸಂಸದ ನಳಿನ್‌ ತಿಳಿಸಿದರು.

Advertisement

2025ಕ್ಕೆ ಮಂಗಳೂರಿನ ಚಿತ್ರಣ ಬದಲು
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, 2025ರ ವೇಳೆಗೆ ಮಂಗಳೂರು ನಗರದ ಸಮಗ್ರ ಚಿತ್ರಣ ಸಂಪೂರ್ಣ ಬದಲಾಗುತ್ತದೆ. ಸಾರ್ವಜನಿಕರು ಬೆಂಗ್ರೆಯಿಂದ ಮಂಗಳೂರಿಗೆ ಬರಬೇಕಾದರೆ ಸುತ್ತಿಬಳಸಿ ಬರಬೇಕಿತ್ತು. ಈಗ 45 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ತೂಗುಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಪಾಲಿಕೆಯಲ್ಲಿ ಟ್ರೇಡ್‌ ಲೈಸನ್ಸ್‌, ಸ್ವಯಂಘೋಷಿತ ಆಸ್ತಿ ತೆರಿಗೆ, ಇ-ಖಾತವನ್ನು ಆನ್‌ಲೈನ್‌ಗೊಳಿಸಿದ್ದೇವೆ. 792 ಕೋಟಿ ರೂ. ವೆಚ್ಚದಲ್ಲಿ ಜಲಸಿರಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪಿಪಿಪಿ ಮಾದರಿಯಲ್ಲಿ ಕೇಂದ್ರ ಮಾರುಕಟ್ಟೆ, ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು.

ಮೇಯರ್‌ ಜಯಾನಂದ ಅಂಚನ್‌, ಉಪಮೇಯರ್‌ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರ್‌ ಕೊಟ್ಟಾರಿ, ಶಕೀಲ ಕಾವ, ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌., ಸ್ಮಾರ್ಟ್‌ಸಿಟಿ ಅಧಿಕಾರಿಗಳಾದ ಅರುಣ್‌ ಪ್ರಭ, ಚಂದ್ರಕಾಂತ್‌, ಲಿಂಗೇಗೌಡ ಸೇರಿದಂತೆ ಸ್ಮಾರ್ಟ್‌ಸಿಟಿ, ಪಾಲಿಕೆ ಅಧಿಕಾರಿಗಳು ಇದ್ದರು.ಸುಧೀರ್‌ ಶೆಟ್ಟಿ ಕಣ್ಣೂರು ವಂದಿ ಸಿದರು. ಮಧುರಾಜ್‌ ಗುರುಪುರ ನಿರೂಪಿಸಿದರು.

ಹಲವು ಕಾಮಗಾರಿಗಳಿಗೆ ವೇಗ
ಬಿ.ಸಿ. ರೋಡ್‌-ಅಡ್ಡಹೊಳೆ ರಸ್ತೆ ಕಾಮಗಾರಿಗೆ ವೇಗ ನೀಡಲಾಗಿದ್ದು, 2024ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಪುಂಜಾಲಕಟ್ಟೆ- ಚಾರ್ಮಾಡಿ ಚತುಷ್ಪಥ ರಸ್ತೆಗೆ ಟೆಂಡರ್‌ ಕರೆಯಲಾಗಿದೆ. ಮಾಣಿ-ಮೈಸೂರು ರಸ್ತೆ ದ್ವಿಪಥಗೊಂಡಿದೆ. ಬಿಕರ್ನಕಟ್ಟೆ-ಕಾರ್ಕಳವರೆಗೆ ಚತುಷ್ಪಥ ರಸ್ತೆಗೆ ವೇಗ ನೀಡಲಾಗಿದ್ದು. 2024ರ ವೇಳೆಗೆ ಪೂರ್ಣಗೊಳ್ಳುತ್ತದೆ. 1,000 ಕೋ.ರೂ.ನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ನಿಮಾಣ, ಕೋಸ್ಟ್‌ಗಾರ್ಡ್‌ ತರಬೇತಿ ಕೇಂದ್ರ ನಿರ್ಮಾಣ ಆಗಲಿದೆ. ಮೀನುಗಾರಿಕಾ ಜೆಟ್ಟಿ ನಿರ್ಮಾಣ ಆಗುತ್ತಿದೆ. ಬೇಡಿಕೆಯಿರುವ ನಂತೂರಿನ ಪ್ಲೆ çಓವರ್‌ಗೆ ಟೆಂಡರ್‌ ಆಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುತ್ತದೆ. ಕೂಳೂರು ಸೇತುವೆ ಕಾಮಗಾರಿ ಸದ್ಯದಲ್ಲೇ ಮತ್ತೆ ಆರಂಭಿಸುತ್ತೇವೆ ಎಂದು ನಳಿನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next