Advertisement

ಶಬರಿಮಲೆಯಲ್ಲಿ ತುರ್ತು ಪರಿಸ್ಥಿತಿ: ನಳಿನ್‌ ಆರೋಪ

10:04 AM Nov 22, 2018 | Team Udayavani |

ಮಂಗಳೂರು: ಶ್ರೀ ಕ್ಷೇತ್ರ ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸದ ಕೇರಳ ಸರಕಾರವು ಪೊಲೀಸರ ಮೂಲಕ ಭಕ್ತರನ್ನೇ ತಡೆಯುವ ಕೆಲಸ ನಡೆಸುತ್ತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಿಸಿದೆ ಎಂದು ಸಂಸದ ಹಾಗೂ ಕೇರಳದ ಬಿಜೆಪಿ ಸಹಪ್ರಭಾರಿ ನಳಿನ್‌ ಕುಮಾರ್‌ ಕಟೀಲು ಆರೋಪಿಸಿದ್ದಾರೆ.

Advertisement

ಶ್ರೀ ಕ್ಷೇತ್ರ ಶಬರಿಮಲೆಯ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮಂಗಳವಾರ ಅಧ್ಯಯನ ನಡೆಸಿ ಮಂಗಳೂರಿಗೆ ವಾಪಸಾದ ಅವರು ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದರು. ಶಬರಿಮಲೆ ವಿಚಾರದಲ್ಲಿ ಕೈಗೊಂಡ ಅಧ್ಯಯನದ ವಿವರವನ್ನು ಮುಂದಿನ ಲೋಕಸಭಾ ಅಧಿವೇಶನದ ಸಂದರ್ಭ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ನಾಲ್ಕು ಮಂದಿಗಿಂತ ಅಧಿಕ ಭಕ್ತರು ಹೋದರೆ ಬಂಧಿಸಲಾಗುತ್ತಿದೆ. ಹೀಗಾಗಿ ಲಕ್ಷಾಂತರ ಅಯ್ಯಪ್ಪ ಭಕ್ತರು ಇರಬೇಕಾದ ಶಬರಿಮಲೆಯಲ್ಲಿ ಈಗ ಭಕ್ತರ ಸಂಖ್ಯೆಯೇ ಕಡಿಮೆಯಿದೆ. ಭಕ್ತರಿಗೆ, ಪೊಲೀಸರಿಗೆ, ಬಸ್‌ನ ಸಿಬಂದಿ ಸಹಿತ ಸರ್ವರಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕೇರಳ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದವರು ದೂರಿದರು.

ಶೌಚಾಲಯ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗಾಗಿ ಸಾಂಕ್ರಾಮಿಕ ರೋಗ ಎದುರಾಗುವ ಭೀತಿ ಇದೆ. ಸಾನ್ನಿಧ್ಯದಲ್ಲಿ ಅನ್ನದಾನ, ಕೊಠಡಿಗಳ ಸಹಿತ ಎಲ್ಲ ಕಡೆ ಮೂಲ ವ್ಯವಸ್ಥೆಗಳೇ ಇಲ್ಲ. ಕೇಂದ್ರ ಸರಕಾರ 100 ಕೋ.ರೂ. ನೀಡಿದ್ದರೂ ಕೇವಲ 18 ಕೋ.ರೂ. ಖರ್ಚು ಮಾಡಿದ ಕೇರಳ ಸರಕಾರ ಉಳಿದ ಹಣದ ಬಗ್ಗೆ ಗಮನವೇ ನೀಡಿಲ್ಲ ಎಂದರು.

“ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಹೇಳಿದರೆ ಬಂಧನಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪ್ರಮುಖ ಸುರೇಂದ್ರನ್‌ ಸಹಿತ ಹಲವರು ಇದೇ ಕಾರಣದಿಂದ ಜೈಲು ಸೇರುವಂತಾಗಿದೆ. ಅಧ್ಯಯನ ಪ್ರವಾಸ ಆಯೋಜಿಸಿದ ಸಂದರ್ಭದಲ್ಲೂ ನಮ್ಮ ಕಣ್ಣೆದುರೇ ಸ್ವಾಮಿಯೇ ಶರಣಂ ಅಯ್ಯಪ್ಪ ಹೇಳಿದವರನ್ನು ಪೊಲೀಸರು ಬಂಧಿಸಲು ಮುಂದಾದರು. ನಾವು ವಿರೋಧಿಸಿದ್ದಕ್ಕೆ ಕೈಬಿಟ್ಟರು. ಬ್ರಿಟಿಷರ ಆಡಳಿತದ ಕಾಲದಲ್ಲಿ ಕೂಡ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದು ನಳಿನ್‌ ಹೇಳಿದರು.

Advertisement

6 ಗಂಟೆಗಿಂತ ಹೆಚ್ಚು ನಿಂತರೆ ಅರೆಸ್ಟ್‌ !
ಸಂಸ‌ದ ನಳಿನ್‌ ಮಾತನಾಡಿ, ಶ್ರೀ ಕ್ಷೇತ್ರ ಶಬರಿಮಲೆಗೆ ಹೋಗುವವರು ಪಂಪೆಯಿಂದ ಮಲೆಗೆ ತಾಸುಗಟ್ಟಲೆ ನಡೆದುಕೊಂಡು ಹೋಗಿ, ಅಲ್ಲಿ ಮೆಟ್ಟಿಲು ಏರಿ, ಅಭಿಷೇಕ ಸಹಿತ ದೇವರ ದರ್ಶನ ಮುಗಿಸಿ ಬರಲು ಹಲವು ತಾಸು ತಗಲುವುದು ಸಾಮಾನ್ಯ. ಆದರೆ ಪ್ರಸ್ತುತ 6 ಗಂಟೆಯ ಒಳಗೆ ದೇವರ ದರ್ಶನ ಮಾಡಿ ಬರಬೇಕು ಎಂಬ ನಿರ್ಬಂಧವನ್ನು ವಿಧಿಸಲಾಗಿದೆ. ಹೀಗಾಗಿ ಭಕ್ತರು ಸಮಸ್ಯೆ ಎದುರಿಸುತ್ತಿದ್ದಾರೆ. ದೇವರ ಪ್ರಾರ್ಥನೆಗೆ ಇಷ್ಟೇ ಸಮಯ ಎಂದು ನಿಗದಿ ಮಾಡುವ ಮೂಲಕ ಸರಕಾರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ. ಪಿಣರಾಯಿ ಅವರ ರಾಜಕೀಯದ ಕೊನೆಯ ಕಾಲ ಬಂದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next