Advertisement

ಪ್ರತೀ ಮನೆಯಲ್ಲೂ ರಾಷ್ಟ್ರ ಭಕ್ತಿಯ ಉದ್ದೀಪನ: ನಳಿನ್‌

11:03 AM Aug 14, 2022 | Team Udayavani |

ಮಂಗಳೂರು : ಪ್ರತೀ ಮನೆಯಲ್ಲೂ ರಾಷ್ಟ್ರಭಕ್ತಿಯ ಉದ್ದೀಪನವಾಗಬೇಕು. ಜಾತಿ, ಮತ ಭೇದ ಮರೆತು ತಾಯಿ ಭಾರತಿಯ ಅರ್ಚನೆ ಮಾಡಬೇಕು. ಸ್ವಾತಂತ್ರ್ಯೋತ್ಸವವನ್ನು ನಾಡಹಬ್ಬವಾಗಿ ಆಚರಿಸಿ, ಪ್ರತಿಯೊಬ್ಬರೂ ಈ ಉತ್ಸವದಲ್ಲಿ ಭಾಗಿಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಶಾಸಕ ಡಿ. ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಶನಿವಾರ ಮಂಗಳೂರಿನ ಕುದ್ಮುಲ್ ರಂಗರಾವ್‌ ಪುರಭವನದಿಂದ ಆರಂಭಗೊಂಡ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಕಲ ಚರಾಚರಗಳಲ್ಲೂ ಭಗವಂತನನ್ನು ಕಂಡ ಏಕೈಕ ನಾಡಾದ ಭಾರತವು ಜಗತ್ತಿನ ಸರ್ವ ಶ್ರೇಷ್ಠ ರಾಷ್ಟ್ರ. ಜಗತ್ತೇ ನಮ್ಮ ಕುಟುಂಬ ಎಂಬ ಸಂದೇಶವನ್ನು ಸಾರಿದ ಶ್ರೇಷ್ಠ ಸಂಸ್ಕೃತಿಯ ನೆಲ ಭಾರತ. ಜಗತ್ತಿನ ಯಾವುದೇ ದೇಶದ ಮೇಲೆ ಆಕ್ರಮಣ ಮಾಡದೇ ಇರುವ ಏಕೈಕ ದೇಶ ಭಾರತ ಎಂದರು.

ಭಾರತವನ್ನು ಗುಲಾಮಗಿರಿ ಯಯಿಂದ ಮುಕ್ತ ಮಾಡಲು ಈ ದೇಶದ ಪ್ರತಿಯೊಬ್ಬರೂ ಹೋರಾಡಿದರು. ಕ್ರಾಂತಿಕಾರಿ, ಅಹಿಂಸಾ ಚಳವಳಿಗಳು ಯಶಸ್ವಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ಇಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಉಳ್ಳಾಲದ ರಾಣಿ ಅಬ್ಬಕ್ಕ, ಕೆದಂಬಾಡಿ ರಾಮಯ್ಯ ಗೌಡ ಸೇರಿದಂತೆ ಹಲವು ಮಹನೀಯರನ್ನು ಸ್ಮರಿಸಬೇಕು. ಪಾಲಿಕೆ, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಸ್ಥಾಪನೆ ಮಾಡುವ ಶ್ರೇಷ್ಠ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ತಿರಂಗ ಯಾತ್ರೆಯಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾದರು. ಯಾತ್ರೆಯು ಕುದ್ಮುಲ್  ರಂಗರಾವ್‌ ಪುರಭವನದಿಂದ ಹೊರಟು ಹಂಪನಕಟ್ಟೆ, ಕೆ.ಎಸ್‌. ರಾವ್‌ ರಸ್ತೆ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ಮೂಲಕ ಪಿ.ವಿ.ಎಸ್‌. ಜಂಕ್ಷನ್‌ನಲ್ಲಿ ಸಮಾಪನಗೊಂಡಿತು.
ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಶಾಸಕ ಡಿ. ವೇದವ್ಯಾಸ ಕಾಮತ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೇಯರ್‌ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ, ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬಿಜೆಪಿ ಪ್ರಮುಖರಾದ ಮೋನಪ್ಪ ಭಂಡಾರಿ, ಸುಧೀರ್‌ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ರವಿಶಂಕರ ಮಿಜಾರ್‌, ಸಂತೋಷ್‌ ರೈ ಬೋಳಿಯಾರ್‌, ನಿತಿನ್‌ ಕುಮಾರ್‌, ಸುರೇಂದ್ರ ಜೆ., ವಿಜಯಕುಮಾರ್‌ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು. ರೂಪಾ ಡಿ. ಬಂಗೇರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next