Advertisement

ನಳಿನ್‌ ಹ್ಯಾಟ್ರಿಕ್‌ ಗೆಲುವು ನಿಶ್ಚಿತ

02:02 PM Apr 03, 2019 | Team Udayavani |

ಸುಳ್ಯ : ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು 2 ಲಕ್ಷ ಮತಗಳ ಅಂತರದಿಂದ ವಿಜಯಿಯಾಗುವ ಮೂಲಕ ಹ್ಯಾಟ್ರಿಕ್‌ ಗೆಲುವು ದಾಖಲಿಸುವುದು ನಿಶ್ಚಿತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತವಾಗಿ, ಅಧಿಕಾರ ದುರುಪಯೋಗಪಡಿಸದೆ, ಜನಪರ ನಿಲುವು ನೊಂದಿಗೆ ಸಂಸದನಾಗಿರುವ ನಳಿನ್‌ ಅವರಿಗೆ ಜಿಲ್ಲೆಯ ಜನರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ ಎಂದು ನುಡಿದರು.

ಜಿಲ್ಲೆಯಲ್ಲಿ ನಳಿನ್‌ ಅವರ ಸಾಧನೆ ಇಲ್ಲದ ಕಾರಣ ಮೋದಿ ಹೆಸರಿನಲ್ಲಿ ಬಿಜೆಪಿ ಮತ ಕೇಳುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಉತ್ತರಿಸಿದ ಸಂಜೀವ ಮಠಂದೂರು, ಸಮೀಕ್ಷೆಗಳಲ್ಲಿ ನಂ. 1 ಸಂಸದ, ಆದರ್ಶ ಗ್ರಾಮ ಅನುಷ್ಠಾನದಲ್ಲಿ ಸ್ಥಾನ ದೊರೆತಿರುವುದು ನಳಿನ್‌ ಸಾಧನೆಗೆ ಉದಾಹರಣೆ. ಐದು ವರ್ಷಗಳಲ್ಲಿ 16,500 ಕೋ.ರೂ. ಅನುದಾನ ತಂದಿದ್ದಾರೆ. ಕಾಂಗ್ರೆಸ್‌ ಆರೋಪದಲ್ಲಿ ಹುರುಳಿಲ್ಲ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಶಕ್ತಿ ಕುಂದಿದೆ ಎನ್ನುವುದು ಆ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯಲ್ಲಿ ಸಾಬೀತಾಗಿದೆ. ಈ ಪಕ್ಷಗಳಿಗೆ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಅನ್ನುವುದು ಸ್ಪಷ್ಟವಾಗಿದೆ. ಆದರೆ ಅವರ ಮೈತ್ರಿ ಹೋರಾಟದಿಂದ ಬಿಜೆಪಿ ಮೇಲೆ ಪರಿಣಾಮ ಬೀರದು. ಪಕ್ಷವು ಇನ್ನಷ್ಟು ಹೆಚ್ಚು ಸ್ಥಾನಗಳು ಗೆಲ್ಲಲಿದೆ ಎಂದರು.

ನಳಿನ್‌ ಸಜ್ಜನ ರಾಜಕಾರಣಿ. ಕಳಂಕವಿಲ್ಲದೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎತ್ತಿನಹೊಳೆ ಸಮಸ್ಯೆ ಬಂದಾಗ ಪಾದಯಾತ್ರೆ, ಕಂಬಳ ನಿಷೇಧದ ಅಭಿಪ್ರಾಯ ಬಂದಾಗ ಹೋರಾಟ, ಹಿಂದುಗಳ ಹತ್ಯೆಯಾದಾಗ ಪರಿವರ್ತನ ಯಾತ್ರೆ, ದೇಯಿ ಬೈದೇತಿಗೆ ಅವಮಾನವಾದಾಗ ಹೋರಾಟ ನಡೆಸಿದ್ದಾರೆ ಎಂದರು.

Advertisement

ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಿಗಾಡಾಯಿಸಿದ್ದರೂ, ಸಚಿವ ಯು.ಟಿ. ಖಾದರ್‌ ಸ್ಪಂದಿಸುತ್ತಿಲ್ಲ. ರಾಜ್ಯ ಸರಕಾರ ಪ್ರಾಕೃತಿಕ ವಿಕೋಪದಡಿ ರಸ್ತೆ ಹೊಂಡ, ಗುಂಡಿ ಮುಚ್ಚಲು ಅನುದಾನ ನೀಡಿಲ್ಲ. ಮೈತ್ರಿ ಸರಕಾರ ಅಭಿವೃದ್ಧಿಗೆ ಗಮನ ಕೊಡದೆ ಅಧಿಕಾರ ಉಳಿಸಲು ಮಾತ್ರ ಪ್ರಾಮುಖ್ಯ ನೀಡುತ್ತಿದೆ ಎಂದರು.

ಬಿಜೆಪಿ ಸೇರ್ಪಡೆ ಅಜ್ಜಾವರ ಗ್ರಾಮದ ವಿಷ್ಣುನಗರದ ಕಾಂಗ್ರೆಸ್‌ ಕಾರ್ಯಕರ್ತ ಮಂಜುನಾಥ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಜಿಲ್ಲಾಧ್ಯಕ್ಷ ಮಠಂದೂರು ಬರಮಾಡಿಕೊಂಡರು.
ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಶಾಸಕ ಎಸ್‌. ಅಂಗಾರ, ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸುರೇಶ್‌ ಕಣೆಮರಡ್ಕ, ಸುಬೋಧ್‌ ಶೆಟ್ಟಿ ಮೇನಾಲ, ಮಹೇಶ್‌ ರೈ ಮೇನಾಲ, ಶೀನಪ್ಪ ಬಯಂಬು, ಶೈಲೇಶ್‌ ಅಂಬೆಕಲ್ಲು ಉಪಸ್ಥಿತರಿದ್ದರು.

ರಮಾನಾಥ ರೈ ಶ್ವೇತಪತ್ರ ಹೊರಡಿಸಲಿ: ನಳಿನ್‌
ನಳಿನ್‌ ಕುಮಾರ್‌ ಕಟೀಲು ಏನೂ ಮಾಡಿಲ್ಲ ಎಂದು ಆರೋಪಿಸುವ ರಮಾನಾಥ ರೈ ಅವರು ಜಿಲ್ಲೆಯಲ್ಲಿ ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು. ನಾನು ಸಂಸದಾಗಿ 10 ವರ್ಷದಲ್ಲಿ ಜಿಲ್ಲೆಯಲ್ಲಿ ಮಾಡಿದ ಸಾಧನೆ, ರಮಾನಾಥ ರೈ 30 ವರ್ಷಕ್ಕೂ ಅಧಿಕ ಕಾಲ ಅಧಿಕಾರ ನಡೆಸಿ ಮಾಡಿದ ಸಾಧನೆ ಹೋಲಿಸಿದರೆ ನನ್ನ ಕೊಡುಗೆ ಅವರಿಗಿಂತ ಹೆಚ್ಚಿದೆ. ತಾಕತ್ತಿದ್ದರೆ ರೈ ಅವರ ಕೊಡುಗೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ನಾನು ನನ್ನ ಸಾಧೆನೆಯನ್ನು ಜನರ ಮುಂದಿಡುವೆ ಎಂದು ನಳಿನ್‌ ಕುಮಾರ್‌ ಕಟೀಲು ಸವಾಲೆಸೆದರು.

Advertisement

Udayavani is now on Telegram. Click here to join our channel and stay updated with the latest news.

Next