ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದ ಬಳಿಕ ಕರ್ನಾಟಕದ ವಿದ್ಯಮಾನಗಳ ಬಗ್ಗೆ ವರಿಷ್ಠರು ಇದೇ ಮೊದಲ ಬಾರಿಗೆ ಲಕ್ಷ್ಯ ಹರಿಸಿದೆ. ಇನ್ನೊಂದೆಡೆ ಹುದ್ದೆ ತ್ಯಾಗಕ್ಕೆ ಪಕ್ಷದೊಳಗೆ ಒತ್ತಡ ಹೆಚ್ಚಿದರೂ ನಳಿನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮೌನವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ನಾಯಕತ್ವದ ವಿರುದ್ಧ ಈಗ ದಿನಕ್ಕೊಬ್ಬರು ಹೇಳಿಕೆ ನೀಡುತ್ತಿದ್ದಾರೆ. ಯಾರೂ ಬಹಿರಂಗ ಹೇಳಿಕೆ ನೀಡ ಕೂಡದು ಎಂದು ನಳಿನ್ ಎರಡು ದಿನಗಳಿಂದ ಮಾಡುತ್ತಿದ್ದ ಮನವಿಯನ್ನು ಹೆಚ್ಚಿನವರು ಗೌರವಿಸುತ್ತಿಲ್ಲ
ಆದರೆ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ನಳಿನ್ ಕುಮಾರ್ ಮಾತ್ರ ನೈತಿಕ ಹೊಣೆ ನಿಭಾಯಿಸುವ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಪಕ್ಷದಲ್ಲಿ ನಡೆಯುತ್ತಿರುವ ಬಣ ರಾಜಕಾರಣದ ಲಾಭ ಪಡೆದು ಅಧಿಕಾರದಲ್ಲಿ ಮುಂದುವರಿಯಲು ಅವರು ಯತ್ನಿಸುತ್ತಿದ್ದಾರೆ ಎಂದು ಪಕ್ಷದ ಒಂದು ಮೂಲ ವ್ಯಾಖ್ಯಾನಿಸುತ್ತಿದೆ. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಆರ್.ಅಶೋಕ್ “ಪಕ್ಷದ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ’ ಎಂದು ಕಟೀಲ್ ಪರ ಬ್ಯಾಟ್ ಬೀಸಿದ್ದು, ಲೋಕಸಭಾ ಚುನಾವಣೆಯವರೆಗೂ ಅವರನ್ನೇ ಹುದ್ದೆಯಲ್ಲಿ ಮುಂದುವರಿಸಬೇಕೆಂದು ಕೆಲವರು ಬಯಸುತ್ತಿದ್ದಾರೆ. ಪಕ್ಷದ ಒಟ್ಟಾರೆ ಸ್ಥಿತಿಗತಿಯ “ನೈತಿಕ ಹೊಣೆ’ ಕಟೀಲ್‌ಗೆ ಮಾತ್ರ ಸೀಮಿತವಾಗಿರಲಿ ಎಂಬುದು ಬಿಜೆಪಿಯ ಬಹುತೇಕರ ಧೋರಣೆಯಾಗಿದೆ.
ಅಶ್ವತ್ಥನಾರಾಯಣ ಮುಂಚೂಣಿಗೆ
ಇದೆಲ್ಲದರ ಮಧ್ಯೆ ಮಾಜಿ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ಅವರ ಹೆಸರು ರಾಜ್ಯಾಧ್ಯಕ್ಷ ಹುದ್ದೆಯ ಮುಂಚೂಣಿಯಲ್ಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.