ನಾಲತವಾಡ: ಪಟ್ಟಣದ ಜಗದೇವ ನಗರದಲ್ಲಿ ಅರ್ಧಕ್ಕೆ ನಿಲ್ಲಿಸಲಾದ ಚರಂಡಿಯಲ್ಲಿ ಸಂಗ್ರಹಗೊಂಡ ನಿವಾಸಿಗಳು ನಿತ್ಯ ಉಪಯೋಗಿಸಿದ ನೀರು ಮತ್ತು ಮಳೆ ನೀರಿನಲ್ಲಿ ಅಪಾರ ಕ್ರಿಮಿ ಕೀಟಗಳು ಉತ್ಪತ್ತಿಯಾಗಿದ್ದು ನಿವಾಸಿಗಳಲ್ಲಿ ಕಾಯಿಲೆಗಳ ಭಯ ಹುಟ್ಟಿದೆ.
ಕಳೆದ ಒಂದು ವರ್ಷದಿಂದ ಪಪಂ ನಗರೋತ್ಥಾನದಡಿ ಒಟ್ಟು ಸುಮಾರು 4,25 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ರಸ್ತೆ, ವೀರೇಶ್ವರ ವೃತ್ತದ ಮೂಲಕ ಮಾರುಕಟ್ಟೆವರೆಗೆ ಜೋಡು ರಸ್ತೆ ಪಥ ಮತ್ತು ಕುಡಿಯುವ ನೀರಿಗಾಗಿ 1.50 ಕೋಟಿ ರೂ. ಮೀಸಲಿಟ್ಟು ಟೆಂಡರ್ ಕರೆಯಲಾಗಿತ್ತು.
ಸದ್ಯ ಪಟ್ಟಣದಲ್ಲಿ ಅವಶ್ಯ ಸ್ಥಳಗಳಲ್ಲಿ ಬೃಹತ್ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು, ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಚರಂಡಿಗಳನ್ನು ಪೂರ್ಣಗೊಳಿಸಿದ್ದಾರೆ. ಮತ್ತೂಂದೆಡೆ ಜಗದೇವ ನಗರ ಮತ್ತು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಚರಂಡಿಗಳನ್ನು ಪೂರ್ಣಗೊಳಿಸದೇ ಅರ್ಧಕ್ಕೆ ನಿಲ್ಲಿಸಲಾಗಿದ್ದು ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ.
ಮುಗಿದ ಅವಧಿ: ಪಟ್ಟಣದಲ್ಲಿ ಜೋಡು ರಸ್ತೆ ಸೇರಿದಂತೆ ಚರಂಡಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಅವಧಿ ನಿಗದಿಪಡಿಸಿದ ಟೆಂಡರ್ ವಹಿಸಿಕೊಡಲಾಗಿತ್ತು. ಸದ್ಯ ಟೆಂಡರ್ ಅವಧಿ ಮುಗಿದರೂ ಪಟ್ಟಣದ ಹಿತದೃಷ್ಟಿಯಿಂದ ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿಗಳನ್ನು ಪ್ರಾರಂಭಗೊಳಿಸದ ಗುತ್ತಿಗೆದಾರರ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
ಭೀತಿಯಲ್ಲಿ ನಿವಾಸಿಗಳು: ಜಗದೇವ ನಗರದಲ್ಲಿ ಮತ್ತು ಹಟ್ಟಿ ಹಳ್ಳದ ಬಳಿ ಅರ್ಧಕ್ಕೆ ನಿಲ್ಲಿಸಿದ ಚರಂಡಿಯೊಳಗೆ ಈಗಾಗಲೇ ಕೊಳಚೆ ನೀರು ಸಂಗ್ರಹಗೊಂಡು ಅಪಾರ ಪ್ರಮಾಣದಲ್ಲಿ ಕ್ರಿಮಿ ಕೀಟಗಳು ಉತ್ಪತ್ತಿಗೊಂಡಿದ್ದು ನಿದ್ರೆಗೆಡಿಸಿದೆ. ಮತ್ತೂಂದೆಡೆ ನಾನಾ ಬಗೆ ಕಾಯಿಲೆಗಳು ಉಲ್ಬಣಗೊಳ್ಳುವ ಭೀತಿ ಎದುರಾಗಿದ್ದು ಶೀಘ್ರವೇ ಪಪಂನವರು ಎಚ್ಚೆತ್ತು ಕಾಮಗಾರಿ ಪ್ರಾರಂಭಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.