Advertisement

ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆ ಬಿದ್ದೀತು ಜೋಕೆ!

09:48 AM May 30, 2019 | Team Udayavani |

ನಾಲತವಾಡ: ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆಯಾಗಿ ನಿರ್ಮಿಸಲಾದ ತಾಳಿಕೋಟೆ ಸಮೀಪದ ಶಿವಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು ಇಂದು ನಾಳೆಯೋ ಕುಸಿಯುವಂತಿದೆ.

Advertisement

ಈಚೆಗೆ 15 ವರ್ಷಗಳಿಂದಷ್ಟೇ ಕಬ್ಬಿಣದ ಕಾಲಂಗಳನ್ನು ನಿರ್ಮಿಸದೇ 7 ಕೊಠಡಿಗಳನ್ನು ಮನಸೋ ಇಚ್ಚೆಯಿಂದ ನಿರ್ಮಿಸಿ ಕೈ ತೊಳೆದುಕೊಂಡಿದ್ದರಿಂದ ಶಾಲೆ ಸುತ್ತಲೂ ಬಿರುಕು ಕಾಣಿಸಿಕೊಂಡಿದೆ. ಕೊಠಡಿಗಳಲ್ಲಿ ಭಾರಿ ಪ್ರಮಾಣ ಬಿರುಕು ಬಿಟ್ಟಿವೆ. ಶಾಲೆಯಲ್ಲಿ 290ಕ್ಕೂ ಹೆಚ್ಚು ಮಕ್ಕಳು ಹಾಗೂ 9 ಶಿಕ್ಷಕರಲ್ಲಿ ಶಾಲೆ ದುಸ್ಥಿತಿ ಜೀವ ಭಯ ಹುಟ್ಟಿಸಿದೆ.

ಬಯಲಲ್ಲೇ ಪಾಠ: ಈಗಲೋ ಆಗಲೋ ಕುಸಿಯುವ ಕೊಠಡಿಗಳ ದುಸ್ಥಿತಿ ಶಿಕ್ಷಕರಲ್ಲಿ ಭೀತಿ ಹುಟ್ಟಿಸಿದ ಕಾರಣ ಸಿಕ್ಕ ಸ್ಥಳದಲ್ಲೇ ನಿತ್ಯ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದ್ದು ಉತ್ತಮ ವಾತಾವರಣ ಮಾತ್ರ ಮಕ್ಕಳಿಗೆ ಸಿಗುತ್ತಿಲ್ಲ.

ಕಳಪೆ ಹಾಗೂ ನೀರು ನಿರ್ವಹಣೆ ಮಾಡದೇ ಹಾಗೂ ಭದ್ರ ಬುನಾದಿ ಹಾಕದೇ ತರಾತುರಿಯಲ್ಲಿ ನಿರ್ಮಿಸಿದ ಕೊಠಡಿಗಳ ಪೈಕಿ ಕಳೆದ ಒಂದು ವರ್ಷದ ಹಿಂದಷ್ಟೇ ಶಾಲೆ ಕೊನೆಯ ಕೊಠಡಿ ಛಾವಣಿಯೊಂದು ಏಕಾ ಏಕಿ ಕುಸಿಯಿತು. ಕುಸಿದ ಕೊಠಡಿಯ ಪಕ್ಕದ ಕೊಠಡಿಯಲ್ಲಿಯೇ ಮಕ್ಕಳ ಪಾಠ ಬೋಧನೆ ನಡೆದಿತ್ತು. ಕುಸಿದ ಕೊಠಡಿಯಲ್ಲಿ ಅಂದು ಯಾವ ಮಕ್ಕಳು ಇರಲಿಲ್ಲ, ಒಂದು ವೇಳೆ ಅವಘಡದ ಕೊಠಡಿಯಲ್ಲಿಯೇ ಪಾಠ ಚಟುವಟಿಕೆಗಳು ನಡೆದಿದ್ದೇಯಾದಲ್ಲಿ ವಿದ್ಯಾರ್ಥಿಗಳ ಪ್ರಾಣ ಹೋಗುತ್ತಿತ್ತು.

ತೆರವುಗೊಳಿಸಿಲ್ಲ: ಸದ್ಯ ಕುಸಿದ ಕೊಠಡಿ ಕಾಲಂ ಒಂದರ ಆಸರೆಯಲ್ಲಿ ನಿಂತಿದ್ದು, ಕೊಠಡಿ ಕುಸಿದು ಒಂದು ವರ್ಷ ಕಳೆದರೂ ಶಾಲೆ ಮುಖ್ಯಸ್ಥರು ಈವರೆಗೂ ಕಲ್ಲು ಕಬ್ಬಿಣದ ತುಕುಡಿಗಳನ್ನು ತೆರವುಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಕುಸಿದ ಕೊಠಡಿಯನ್ನು ಸಂಪೂರ್ಣ ತೆರವುಗೊಳಿಸದೇ ಹೋದಲ್ಲಿ ಪಕ್ಕದ ಕೊಠಡಿಗೂ ಧಕ್ಕೆ ಉಂಟಾಗುವ ಲಕ್ಷಣಗಳಿವೆ.

Advertisement

ಶಾಲೆ ಮುಂಬಾಗದಲ್ಲಿ ನಿರ್ಮಿಸಲಾದ ಮುಖ್ಯಗುರುಗಳ ಕೊಠಡಿಯೂ ಸಹ ಕಳಪೆ ಮಟ್ಟದಲ್ಲಿ ನಿರ್ಮಿಸಿದ್ದು ಸುತ್ತಲೂ ಬಿರುಕುಗೊಂಡಿದೆ. ತಳ ಮಟ್ಟದಲ್ಲೂ ಬಿರುಕು ಕಾಣಿಸಿಕೊಂಡಿದ್ದು ಈಗಲೋ ಆಗಲೋ ಕುಸಿಯುವ ಸ್ಥಿತಿ ತಲುಪಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಶಿವಪುರ ಶಾಲೆ ಕೊಠಡಿಯ ಛಾವಣಿ ಕುಸಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕಳಪೆ ಕಾಮಗಾರಿಯಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ಸದ್ಯ ಕೊಠಡಿ ಮತ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಆದೇಶಿಸುತ್ತೇನೆ.
ಎಸ್‌.ಡಿ. ಗಾಂಜಿ,
ಬಿಇಒ, ಮುದ್ದೇಬಿಹಾಳ

ಶಾಲೆ ದುಸ್ಥಿತಿ ಮನಗಂಡು ಬಿಇಒ ಭೇಟಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮದ ಶಾಲೆಗೆ ಮತ್ತೆರಡು ಕೊಠಡಿಗಳ ಮಂಜೂರಾತಿ ದೊರಕಿದೆ. ಇನ್ನು ಕೆಲ ದಿನಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತದೆ. ಶಿಥಿಲ ಕೊಠಡಿಗಳಲ್ಲಿ ಪಾಠ ಮಾಡದಂತೆ ಸೂಚಿಸಿದ್ದೇವೆ.
ಗಜಾನನ ಸೋನಾರ್‌, ಸಿಆರ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next