ಮುಂಬಯಿ: ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಫೋರ್ಟ್ ಚಾರಿಟೆಬಲ್ ಟ್ರಸ್ಟ್ ಇದರ ಶ್ರೀ ನಾಗದೇವರ ಪ್ರತಿಷ್ಠಾ ಮಹೋತ್ಸವವು ಜೂ. 18 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಲಸೋಪರ ಪಶ್ಚಿಮದ ಶ್ರೀ ಪ್ರಸ್ಥರೋಡ್ ಕ್ರಮಾಂಕ -4, ನಲಸೋಪರ ವಿರಾರ್ ಲಿಂಕ್‌ರೋಡ್ ರಸ್ತೆ, ಎಚ್. ಪಿ. ಪೆಟ್ರೋಲ್ ಪಂಪ್ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಶನೀಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.
ಕೊಯ್ಯೂರು ಬ್ರಹ್ಮಶ್ರೀ ನಂದ ಕುಮಾರ ತಂತ್ರಿ ಅವರ ನೇತೃತ್ವದಲ್ಲಿ ಬೆಳಗ್ಗೆ ಪ್ರತಿಷ್ಠಾ ಹೋಮ, ಶ್ರೀ ನಾಗದೇವರ ಪ್ರತಿಷ್ಠೆ, ಪ್ರಾಯಶ್ಚಿತ್ತ ಹೋಮ, ಕಲಶಾರಾಧನೆ, ಕಲಶಾಭಿಷೇಕ, ಅಶ್ಲೇಷ ಬಲಿ, ಪೂರ್ವಾಹ್ನ 11.30ರಿಂದ ವೇದಮೂರ್ತಿ ಶ್ರೀ ಗೋಪಾಲಕೃಷ್ಣ ಸಾಮಗ ಸಗ್ರಿ ಅವರಿಂದ ನಾಗದರ್ಶನ ನಡೆಯಿತು.
ಶ್ರೀ ನಾಗದೇವರ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿಯಾಗಿ ಜೂ. 17ರಂದು ಸಂಜೆ 6ರಿಂದ ನಾಗರೂಢ ಪ್ರತಿಗೃಹ, ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ಬಿಂಬಶುದ್ಧಿ, ಬಿಂಬಾಧಿವಾಸ ಮೊದಲಾದ ವೈಧಿಕ ವಿಧಿ-ವಿಧಾನಗಳಲ್ಲಿ ಅನಂತ ಸಾಮಗ, ಗೋ ಪಾಲ್ ಭಟ್, ದೇವರಾಜ ನೆಲ್ಲಿ, ಶ್ರೀನಿವಾಸ ಭಟ್, ಉದಯ ಶಂಕರ್ ಭಟ್, ರಂಗ ನಾಥ್‌ಭಟ್, ಮಧ್ವರಾಜ್ ಭಟ್, ರಮೇಶ್‌ಭಟ್, ಮಂಜು ನಾಥ ಭಟ್ ಮತ್ತಿತರರು ಸಹಕರಿಸಿದರು.
ಪರಿಸರದ ಉದ್ಯಮಿಗಳು, ಸೇವಾಗಣ್ಯರು, ರಾಜಕೀಯ ನೇತಾರರು, ವಿವಿಧ ಸಂಘಟನೆಗಳ ಪ್ರಮುಖರು ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಶ್ರೀ ನಾಗದೇವರ ಪ್ರತಿಷ್ಠಾ ಮಹೋತ್ಸವದಲ್ಲಿ ಉಪಸ್ಥಿತರಿದ್ದು ಆಶೀರ್ವಾದ ಪಡೆದರು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಟ್ರಸ್ಟಿಗಳು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಪೂಜಾ ಸಮಿತಿ, ಅನ್ನದಾನ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಹೊಟೇಲ್, ಕ್ಯಾಂಟೀನ್ ಹಾಗೂ ಸಣ್ಣಪುಟ್ಟ ಕಚೇರಿಗಳಲ್ಲಿ ದುಡಿದು ಅಲ್ಪಸ್ವಲ್ಪ ಉಳಿತಾಯದೊಂದಿಗೆ ಬೆರಳೆಣಿಕೆಯ ಸದಸ್ಯರು ಒಂದಾಗಿ ಸ್ಥಾಪಿಸಿದ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಫೋರ್ಟ್ ಸಂಸ್ಥೆಗೆ ಪ್ರಸ್ತುತ ಅಮೃತ ಮಹೋತ್ಸವ ಸಂಭ್ರಮ. ಸ್ಥಳಾವಕಾಶದ ಕೊರತೆಯಿಂದ ನಲಸೋಪರ ಪಶ್ಚಿಮದಲ್ಲಿ ಏಳು ವರ್ಷಗಳ ಹಿಂದೆ 14 ಗುಂಟಾ ಜಾಗವನ್ನು ಸಂಸ್ಥೆಯು ಖರೀದಿಸಿದೆ. ಜಾಗದಲ್ಲಿ ಶ್ರೀ ಶನೀಶ್ವರ ದೇವಸ್ಥಾನಕ್ಕೆ ಪೇಜಾವರ ಶ್ರೀಗಳು ಶಂಕುಸ್ಥಾಪನೆ ಮಾಡಿ ಇದೊಂದು ಪವಿತ್ರ ಕ್ಷೇತ್ರವಾಗಿ ರಾರಾಜಿಸಲಿ ಎಂದು ಹಾರೈಸಿದ್ದಾರೆ. ಶ್ರೀ ಶನೀಶ್ವರ ದೇವಸ್ಥಾನ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಆಕರ್ಷಕ ಶಿಲ್ಪಕೆತ್ತನೆಯೊಂದಿಗೆ ಮೂಡಿ ಬರಲು ಸಜ್ಜಾಗುತ್ತಿದೆ. ಪರಿವಾರ ದೇವರುಗಳಾದ ಶ್ರೀ ದುರ್ಗೆ, ಗಣಪತಿ ದೇವರಿಗೆ ಪ್ರತ್ಯೇಕವಾದ ಗುಡಿಗಳು ನಿರ್ಮಾಣವಾಗುತ್ತಿವೆ. ಶ್ರೀ ನಾಗದೇವರಿಗೆ ತನು-ತಂಬಿಲ, ಆಶ್ಲೇಷ ಬಲಿ, ನಾಗರ ಪಂಚಮಿಯಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಆರ್ಥಿಕ ಹಿನ್ನಡೆಯಿಂದ ಕೆಲಸಕಾರ್ಯಗಳು ಕುಂಟುತ್ತ ಸಾಗುತ್ತಿದ್ದು, ಅದಕ್ಕಾಗಿ ಭಕ್ತರ, ದಾನಿಗಳ ಸಹಕಾರ ಅಗತ್ಯವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಜನವರಿಯಲ್ಲಿ ಬ್ರಹ್ಮಕಲಶೋತ್ಸವದೊಂದಿಗೆ ನೂತನ ಮಂದಿನ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀ ಶನೀಶ್ವರ ಪೂಜಾ ಸಮಿತಿ ಫೋರ್ಟ್ ಚಾರಿಟೇಬಲ್ ಟ್ರಸ್ಟ್ ಹೊಂದಿದೆ.
ಚಿತ್ರ-ವರದಿ : ರಮೇಶ್ ಅಮೀನ್