ಮುಂಬಯಿ: ವಿರಾರ್ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಆಯೋಜನೆಯಲ್ಲಿ ನಲಸೋಪರದಲ್ಲಿ 5ನೇವಾರ್ಷಿಕ ಅದ್ದೂರಿ ಶ್ರೀನಿವಾಸ ಮಂಗಳ ಮಹೋತ್ಸವವು ನ. 11ರಂದು ನಲಸೋಪರ ಪಶ್ಚಿಮದ ಶ್ರೀಪ್ರಸ್ಥಾ ಗ್ರೌಂಡ್‌ನಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಚಾಲನೆಗೊಂಡಿತು.
ಓಂ ಶ್ರೀ ಧಾಮ್ ಟ್ರಸ್ಟ್ ವಿರಾರ್ ಹಾಗೂ ಸಮೂಹ ಟ್ರಸ್ಟ್‌ಗಳ ಆಯೋಜನೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದವರ ಪೌರೋಹಿತ್ಯದಲ್ಲಿ ಮತ್ತು ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಬೆಳಗ್ಗೆ 7ರಿಂದ ತಿರುಪತಿಯ ಶ್ರೀ ಬಾಲಾಜಿ ಶ್ರೀನಿವಾಸ ದೇವರಿಗೆ ಸುಪ್ರಭಾತಂ ಮೊದಲ ಪೂಜೆಯು ಓಂ ಶ್ರೀ ಲಕ್ಷ್ಮೀ ರಮಣ ವೆಂಕಟ ರಮಣ ಗೋವಿಂದಾಯ ನಮಃ ವೇದ ಘೋಷದೊಂದಿಗೆ ಪ್ರಾರಂಭಗೊಂಡಿತು.
ವಿದ್ವಾನ್ ಆನಂದ ತೀರ್ಥಾಚಾರ್ಯ ಅವರ ನೇತೃತ್ವದಲ್ಲಿ ವಿದ್ವಾನ್ ಪ್ರಹ್ಲಾದ್ ಆಚಾರ್ಯ ನಾಗರಹಳ್ಳಿ, ವಿದ್ವಾನ್ ಗೋಪಾಲ್ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಸುಪ್ರಭಾತಂ ನಡೆಯಿತು. ಮಧ್ಯೆಪುರೋಹಿತ ವರ್ಗದವರು ಸುಪ್ರಭಾತಂನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಸುಪ್ರಭಾತಂನ ವ್ರತಾಚರಣೆಯಲ್ಲಿ 1,500ಕ್ಕೂ ಅಧಿಕದಂಪತಿಗಳು ಭಾಗವಹಿಸಿದ್ದರು. ಆರಂಭದಲ್ಲಿ ತಿರುಪತಿಯಿಂದ ತಂದ ಶ್ರೀನಿವಾಸದೇವರನ್ನು ಮತ್ತು ಶ್ರೀದೇವಿ-ಭೂದೇವಿ ಯರನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಸುಪ್ರಭಾತಂನ ಪ್ರಥಮ ಪೂಜೆಯನ್ನು ನೆರವೇರಿಸಲಾಯಿತು.
ಅನಂತರ ತೋಮಾಲ ಸೇವೆಯನ್ನು ಆಯೋಜಿಸಲಾಗಿತ್ತು. ಇದು ಹೂವಿನ ಅಲಂಕಾರ ಸೇವೆಯಾಗಿದ್ದು, 108 ನಾಮಸ್ಮರಣೆಯೊಂದಿಗೆ ಶ್ರೀನಿವಾಸ ದೇವರನ್ನು ಸ್ತುತಿಸಿ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ ದೇವರ ವೇದಘೋಷವು ಮುಗಿಲು ಮುಟ್ಟಿತ್ತು. ಇದೇ ಸಂದರ್ಭದಲ್ಲಿ ಐದನೇ ವಾರ್ಷಿಕ ಶ್ರೀನಿವಾಸ ಮಂಗಳ ಮಹೋತ್ಸವದ ಮುಖ್ಯ ರೂವಾರಿ ಭಾಯಿ ಠಾಕೂರ್ ಮತ್ತು ಶಿವಸೇನೆಯ ನಾಯಕ ಸಂಸದ ಸಂಜಯ್ ರಾವುತ್ ಅವರು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳಿಗೆ ಉಪಾಹಾರ ಮತ್ತು ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಭಾಗಿಯಾದರು.
ಅನಂತರ ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮಾರ್ಚನೆ, ತುಲಾಭಾರ ಸೇವೆ ನಡೆಯಿತು. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪುರೋಹಿತ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ ದೇವರಿಗೆ ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ರಕ್ಷೆ, ಮಹಾಗಣಪತಿ ಹೋಮ ಮೊದಲಾದ ಪೂಜೆಗಳು ಶ್ರೀ ಪ್ರಸ್ಥ ಮೈದಾನದಲ್ಲಿ ನೆರವೇರಿತು. ನಗರದ ಉದ್ಯಮಿ, ಸಮಾಜ ಸೇವಕ, ಧಾರ್ಮಿಕ ಚಿಂತಕ, ಸೌತ್ ಇಂಡಿಯನ್ ಫೆಡರೇಷನ್ ಅಧ್ಯಕ್ಷ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ವಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಹಾಗೂ ಹೊಟೇಲ್ ಉದ್ಯಮಿಗಳಾದ ಹರೀಶ್ ಶೆಟ್ಟಿ, ಶೇಖರ್ ನಾಯಕ್, ಪ್ರದೀಪ್ ತೆಂಡೂಲ್ಕರ್, ಮೋಹನ್ ಭಾಯಿ, ಶ್ರೀನಿವಾಸ ನಾಯ್ಡು, ಸುನಂದಾ ಉಪಾಧ್ಯಾಯ ಮತ್ತಿತರರ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯಗಳು ಜರಗಿದವು.