Advertisement

ಭಾರತದ ಪ್ರಾಚೀನ ವಿದ್ಯಾಕೇಂದ್ರ ನಾಲಂದಾ

02:52 PM Nov 02, 2021 | Team Udayavani |
-ಡಾ| ಶ್ರೀಕಾಂತ್‌ ಸಿದ್ದಾಪುರನಾಲಂದಾದಲ್ಲಿ ಆಸಕ್ತರಿಗೆ ಅನುಕೂಲವಾದ ವಿಷಯಗಳನ್ನು ಆಯ್ದುಕೊಂಡು ಕಲಿಯುವ ಅವಕಾಶವಿತ್ತು. ಎಲ್ಲ ವಿಷಯಗಳನ್ನು ಬೋಧಿಸಲು ಅರ್ಹರಾದ ಪಂಡಿತರಿದ್ದರು. ಖಗೋಳ, ಗಣಿತ, ಆಯುರ್ವೇದ, ವೇದವಿಚಾರ, ಜ್ಯೋತಿಷ, ಯೋಗ, ಸಾಂಖ್ಯ, ಬೌದ್ಧ ಸಾಹಿತ್ಯ, ತರ್ಕಶಾಸ್ತ್ರ, ವ್ಯಾಕರಣ ವಿಚಾರ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಕಲಿಕೆ ಸಾಗುತ್ತಿತ್ತು. ಹುಯೆನ್‌ ತ್ಸಾಂಗ್‌ ಹೇತುವಿದ್ಯಾ, ಶಬ್ದವಿದ್ಯಾ, ಚಿಕಿತ್ಸಾ ವಿದ್ಯಾ ಮೊದಲಾದ ಹೆಸರುಗಳಿಂದ ಕರೆದಿರುತ್ತಾನೆ. ಇಲ್ಲಿ ಕಲಿಸುವ ಕೆಲವು ಗ್ರಂಥಗಳ ವಿಚಾರವನ್ನೂ ಇನ್ನೋರ್ವ ಪ್ರವಾಸಿ ಇ - ತ್ಸಿಂಗ್‌ ಪ್ರಸ್ತಾವಿಸಿದ್ದಾನೆ. ಪತಂಜಲಿ ರಚಿತ ವೃತ್ತಿಸೂತ್ರ ಅಥವಾ ಕೂರ್ಣಿ. ಇದನ್ನು ಕಲಿಯಲು ಮೂರು ವರ್ಷಗಳು ಬೇಕು...
Now pay only for what you want!
This is Premium Content
Click to unlock
Pay with

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರಕಾರವು ಈ ಸಾಲಿನಿಂದ ಅನುಷ್ಠಾನ ಮಾಡಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಈ ಘಟ್ಟದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿರುವುದು ಭಾರತದ ಪ್ರಾಚೀನ ವಿದ್ಯಾಕೇಂದ್ರವಾದ ನಾಲಂದಾ (ನಾಳಂದಾ) ವಿಶ್ವವಿದ್ಯಾನಿಲಯದ ಗತವೈಭವ.

Advertisement

ಇದು ಕ್ರಿ.ಶ 427 ರಿಂದ 1197 ರ ತನಕ ಜಾಗತಿಕ ಮನ್ನಣೆ ಪಡೆದ ವಿದ್ಯಾಲಯ. ಆ ಕಾಲದಲ್ಲಿ ನಾಲಂದಾದ ಕೀರ್ತಿಗೆ ಮಾರುಹೋಗಿ ಜಗತ್ತಿನ ಬೇರೆ ಬೇರೆ ಭಾಗಗಳಿಂದ ಜ್ಞಾನದಾಹಿಗಳಾಗಿ ಸಾವಿರಾರು ಜನರು ಭಾರತದತ್ತ ಮುಖ ಮಾಡುತ್ತಿದ್ದರು. ನಾಲಂದಾದಲ್ಲಿ ಓದಿದವನಿಗೆ ಜ್ಞಾನಕ್ಷೇತ್ರದಲ್ಲಿ ಜಾಗತಿಕ ಮನ್ನಣೆ. ಹಾಗೆ ಓದುವುದೇ ಅವರಿಗೆ ಒಂದು ಹೆಮ್ಮೆಯ ಸಂಗತಿ. ಆದರೆ ಅವುಗಳನ್ನೆಲ್ಲ ಕಣ್ಣಾರೆ ಕಾಣದ ನಾವು ಅದರ ವೈಭವವನ್ನು ಬೇರೆ ಮೂಲಗಳಿಂದ ಅರಿತುಕೊಳ್ಳಬೇಕಾಗಿದೆ. ಅಂಥ ಮೂಲಗಳಲ್ಲಿ ಒಂದು ಆ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಪ್ರವಾಸ ಕಥನ. ಪ್ರತ್ಯಕ್ಷವಾಗಿ ನಾಲಂದಾವನ್ನು ಕಂಡು, ಅಲ್ಲಿಯೇ ವಿದ್ಯಾಭ್ಯಾಸ ಮಾಡಿ ಅಲ್ಲಿನ ತಮ್ಮ ಅನುಭವಗಳನ್ನು ಪ್ರವಾಸೀಕಥನಗಳಲ್ಲಿ ದಾಖಲಿಸಿದ್ದಾರೆ. ಅವರಲ್ಲೂ ಚೀನದ ಹುಯೆನ್‌-ತ್ಸಾಂಗ್‌ ಪ್ರಮುಖನಾಗುತ್ತಾನೆ. ಆತನು ಭಾರತಕ್ಕೆ ಬಂದು ಸಂಸ್ಕೃತವನ್ನು ಕಲಿತು ನಾಲಂದಾದಲ್ಲಿ ಯೋಗವಿದ್ಯೆಯನ್ನು ಅಭ್ಯಸಿಸಿದ‌ನು. ಕ್ರಿ. ಶ. 630 ರಿಂದ 644 ರ ತನಕ ಅಂದರೆ ಸುಮಾರು 14 ವರ್ಷಗಳ ಕಾಲ ಭಾರತದಲ್ಲಿದ್ದು, ಅಧ್ಯಯನ ಕೈಗೊಂಡನು. ಭಾರತದಿಂದ ಮರಳುವಾಗ ಆತನ ಬಳಿ 657 ಪುಸ್ತಕಗಳಿದ್ದವು.

ನಾಲಂದಾ ಎಂದರೆ ನೀಡಿದಷ್ಟೂ ತೃಪ್ತಿ ಇಲ್ಲ, ಜ್ಞಾನಕ್ಕೆ ಮಿತಿಯಿಲ್ಲ ಎಂಬಿತ್ಯಾದಿ ಅರ್ಥವೈಭವಗಳನ್ನು ವಿದ್ವಾಂಸರು ನೀಡಿದ್ದಾರೆ. ವಸತಿ ಸೌಕರ್ಯಗಳನ್ನು ಕಲ್ಪಿಸಿ ಬೋಧಿಸಿದ ಪ್ರಪಂಚದ ಮೊದಲ ವಿದ್ಯಾಕೇಂದ್ರ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಮೂಲತ: ಬೌದ್ಧ ವಿಹಾರದ ರೂಪದಲ್ಲಿದ್ದರೂ ವೇದ ಮೊದಲಾದ ಎಲ್ಲ ಜ್ಞಾನಶಾಖೆಗಳನ್ನೂ ಇಲ್ಲಿ ಬೋಧಿಲಾಗುತ್ತಿತ್ತು.

ಪ್ರಾಕೃತಿಕ ಸೊಬಗು
ವಿದ್ಯಾಕೇಂದ್ರಗಳು ನಿರ್ಮಲವಾದ ಪ್ರದೇಶದಲ್ಲಿ ವಿಶಾಲ ಸ್ಥಳದಲ್ಲಿರಬೇಕು. ಪ್ರಕೃತಿಯ ಸುಂದರ ದೃಶ್ಯಗಳ ನಡುವೆ ಅಧ್ಯಯನ ನಡೆಯಬೇಕು. ಇದು ನಮ್ಮ ಹಿರಿಯರ ಕಲ್ಪನೆ. ನಾಲಂದಾವನ್ನು ಇದೇ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 14 ಎಕರೆ ವಿಸ್ತೀರ್ಣ ಸ್ಥಳದಲ್ಲಿ ವ್ಯಾಪಿಸಿತ್ತು. ಸುತ್ತಲೂ ಇಟ್ಟಿಗೆಗಳ ಗೋಡೆ. ಹೆಬ್ಟಾಗಿಲಿನಿಂದ ಪ್ರವೇಶಿಸಿದರೆ ಮಹಾ ವಿದ್ಯಾಮಂದಿರ. ಸುತ್ತ ಎಂಟು ಹಜಾರಗಳು. ಈ ವಿದ್ಯಾಕೇಂದ್ರದ ಕಿಟಕಿಗಳು ಹೊರಗಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಪೂರಕವಾಗಿದ್ದವು. ಕಿಟಕಿಗಳಿಂದ ಕಂಡರೆ ಎತ್ತರದ ಆಗಸ. ಆಗಸದಲ್ಲಿ ವಿವಿಧಾಕಾರದಲ್ಲಿ ಬಿತ್ತರಿಸಿದ ಮುದ ನೀಡುವ ಎತ್ತರದ ಮೋಡಗಳು. ಇದರೊಂದಿಗೆ ಮನಸ್ಸನ್ನು ರಂಜಿಸುವ ಸೂರ್ಯ ಹಾಗೂ ಚಂದ್ರರ ಉದಯಾಸ್ತಮಾನಗಳ ಸುಂದರ ದೃಶ್ಯಗಳು. ಹೊರಗೆ ತಿಳಿಯಾದ ತಿಳಿಗೊಳಗಳು. ಕೊಳಗಳಲ್ಲಿ ತಾವರೆಯ ಹೂಗಳು. ಕೆಲವು ಕೊಳಗಳ ಮೇಲೆ ಮಾವಿನ ಮರಗಳ ನೆರಳು. ಒಟ್ಟಿನಲ್ಲಿ ಪ್ರಾಕೃತಿಕವಾಗಿ ರಮ್ಯಸ್ಥಳ. ಜ್ಞಾನಾಸಕ್ತರ ಮನಸ್ಸಿನ ಕೇಂದ್ರೀಕರಣ, ಅಧ್ಯಯನ, ಅಧ್ಯಾಪನ ಹಾಗೂ ಧ್ಯಾನಕ್ಕೆ ಪೂರಕವಾದ ಪರಿಸರ.

ಇದನ್ನೂ ಓದಿ:ರಷ್ಯಾ ಲಸಿಕೆ ಅಭಿಯಾನ ಫ್ಲಾಪ್‌? ಸ್ಫುಟ್ನಿಕ್ ವಿ ಕೋವಿಡ್‌ ಲಸಿಕೆ ಬಗ್ಗೆ ಜನರ ನಿರ್ಲಕ್ಷ್ಯ

Advertisement

ವಿದ್ಯಾವೈಭವ
ನಾಲಂದಾದಲ್ಲಿ ಓದಲು ದೇಶ ವಿದೇಶದ ಬೇರೆ ಬೇರೆ ಭಾಗಗಳಿಂದ ನೂರಾರು ಆಸಕ್ತರು ಬರುತ್ತಿದ್ದರು. ಅನೇಕ ಜಿಜ್ಞಾಸುಗಳು ಕೆಲವು ವಿಷಯಗಳ ಚರ್ಚೆಗೂ ಆಗಮಿಸುತ್ತಿದ್ದರು. ಹಾಗೆ ಬರುವವರು ಒಳಪ್ರವೇಶಿಸುವ ಮುನ್ನ ಅಲ್ಲಿ ಪ್ರಶ್ನಿಸುವ ದ್ವಾರಪಾಲಕನ ಪ್ರಶ್ನೆಗೆ ಮೊದಲು ಉತ್ತರಿಸಬೇಕಾಗಿತ್ತು. ಹಾಗೆ ಉತ್ತರಿಸುವುದೂ ಸುಲಭವಾಗಿರಲಿಲ್ಲ. ಅಂತೂ 10 ಜನ ಬಂದರೆ ಬೆರಳೆಣಿಕೆಯಷ್ಟು ಮಂದಿ ಒಳಪ್ರವೇಶಿಸಲು ಅರ್ಹರಾಗುತ್ತಿದ್ದರಂತೆ. ಗುರು ಹಾಗೂ ಶಿಷ್ಯರ ನಡುವೆ ಸತತ ಸಂವಾದ ನಡೆಯುತ್ತಿತ್ತು. ಹುಯೆನ್‌ ತ್ಸಾಂಗ್‌ ಕೊಡುವ ಮಾಹಿತಿಯ ಪ್ರಕಾರ ದಿನದ 24 ಗಂಟೆಯೂ ಅವರಿಗೆ ಕೆಲವೊಮ್ಮೆ ಕಡಿಮೆಯಾಗುತ್ತಿತ್ತಂತೆ. ಅಲ್ಲಿರುವ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಂಖ್ಯೆಯ ಕುರಿತೂ ವಿವರಗಳು ಲಭಿಸುತ್ತವೆ. ಒಂದು ಅಂಕಿಅಂಶದ ಪ್ರಕಾರ 10 ಸಾವಿರ ವಿದ್ಯಾರ್ಥಿಗಳು, 2,000 ಅಧ್ಯಾಪಕರಿದ್ದರಂತೆ. ನಾಲಂದಾದ ವಿಶೇಷ ಆಕರ್ಷಣೆ ಅತಿಥಿ ಸತ್ಕಾರ. ಹುಯೆನ್‌ ತ್ಸಾಂಗ್‌ ಇದನ್ನು ಶ್ಲಾ ಸಿದ್ದಾನೆ. ಅವನೇ ಹೇಳಿದ ಮಾತುಗಳನ್ನು ಪ್ರವಾಸಿ ಕಂಡ ಇಂಡಿಯಾ ಸಂಪುಟದಲ್ಲಿ ಡಾ| ನಾಗೇಗೌಡ ಅವರು ದಾಖಲಿಸಿದ್ದಾರೆ. ನಾಲಂದಾ ಎಂದರೂ ಒಂದೇ, ತಡೆಯಿಲ್ಲದ ಅತಿಥಿ ಸತ್ಕಾರ ಎಂದರೂ ಒಂದೇ. ನಾಲಂದಾದ ಗ್ರಂಥಾಲಯದ ಪುಸ್ತಕಗಳ ವೈಭವವೂ ಅದ್ಭುತವಾಗಿತ್ತು. ಒಂಬತ್ತು ಅಂತಸ್ತುಗಳ ಕಟ್ಟಡದ ಗ್ರಂಥಾಲಯ. ಅದರಲ್ಲಿ ಸುಮಾರು 5 ಲಕ್ಷ ಪುಸ್ತಕಗಳು. ಜ್ಞಾನಾಸಕ್ತರ ವಾಸ್ತವ್ಯಕ್ಕಾಗಿ ಸುಮಾರು ನಾಲ್ಕು ಅಂತಸ್ತಿನ ಮನೆಗಳು.

ವಿದ್ಯಾವಿಷಯ ಮತ್ತು ಗುರುಗಳು
ನಾಲಂದಾದಲ್ಲಿ ಆಸಕ್ತರಿಗೆ ಅನುಕೂಲವಾದ ವಿಷಯಗಳನ್ನು ಆಯ್ದುಕೊಂಡು ಕಲಿಯುವ ಅವಕಾಶವಿತ್ತು. ಎಲ್ಲ ವಿಷಯಗಳನ್ನು ಬೋಧಿಸಲು ಅರ್ಹರಾದ ಪಂಡಿತರಿದ್ದರು. ಖಗೋಳ, ಗಣಿತ, ಆಯುರ್ವೇದ, ವೇದವಿಚಾರ, ಜ್ಯೋತಿಷ, ಯೋಗ, ಸಾಂಖ್ಯ, ಬೌದ್ಧ ಸಾಹಿತ್ಯ, ತರ್ಕಶಾಸ್ತ್ರ, ವ್ಯಾಕರಣ ವಿಚಾರ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಕಲಿಕೆ ಸಾಗುತ್ತಿತ್ತು. ಹುಯೆನ್‌ ತ್ಸಾಂಗ್‌ ಹೇತುವಿದ್ಯಾ, ಶಬ್ದವಿದ್ಯಾ, ಚಿಕಿತ್ಸಾ ವಿದ್ಯಾ ಮೊದಲಾದ ಹೆಸರುಗಳಿಂದ ಕರೆದಿರುತ್ತಾನೆ. ಇಲ್ಲಿ ಕಲಿಸುವ ಕೆಲವು ಗ್ರಂಥಗಳ ವಿಚಾರವನ್ನೂ ಇನ್ನೋರ್ವ ಪ್ರವಾಸಿ ಇ – ತ್ಸಿಂಗ್‌ ಪ್ರಸ್ತಾವಿಸಿದ್ದಾನೆ. ಪತಂಜಲಿ ರಚಿತ ವೃತ್ತಿಸೂತ್ರ ಅಥವಾ ಕೂರ್ಣಿ. ಇದನ್ನು ಕಲಿಯಲು ಮೂರು ವರ್ಷಗಳು ಬೇಕು. ಭತೃಹರಿಶಾಸ್ತ್ರ ಎಂಬ ಇನ್ನೊಂದು ಗ್ರಂಥ. ಕೂರ್ಣಿಯ ಮೇಲೆ ಬರೆದ ಟೀಕಾಗ್ರಂಥ. ಇದರೊಂದಿಗೆ ನಾಲ್ಕು ವೇದಗಳು. ಹೀಗೆ ಹಲವು ಗ್ರಂಥಗಳ ಅಧ್ಯಯನಕ್ಕೆ ಪೂರಕವಾದ ಪರಿಸರವಿತ್ತು. ಇಲ್ಲಿ ಬೋಧಿಸುತ್ತಿದ್ದ ಗುರುಗಳ ಹೆಸರುಗಳನ್ನೂ ಪ್ರವಾಸಿಗರು ನೀಡುತ್ತಾರೆ. ನಾಗಾರ್ಜುನ, ಈತನ ಶಿಷ್ಯ ಆರ್ಯದೇವ, ಶಿಲಾಭದ್ರ, ಬುದ್ಧಭದ್ರ, ಧರ್ಮಪಾಲ, ಚಂದ್ರಪಾಲ, ಗುಣಮತಿ, ಸ್ಥಿರಮತಿ ಮೊದಲಾದ ಹೆಸರಾಂತ ಗುರುಗಳು. ವಿದ್ಯಾಕೇಂದ್ರದ ಪರಿಸರದಲ್ಲಿ ದೇವಸ್ಥಾನವಿದ್ದು, ಅಲ್ಲಿ ಪ್ರತಿನಿತ್ಯ ಪ್ರವಚನ ನಡೆಯುತ್ತಿತ್ತು. ಸುಮಾರು ನೂರು ಪೀಠಗಳು. ಪ್ರತಿನಿತ್ಯ ಗುರು- ಶಿಷ್ಯರು ತಪ್ಪದೇ ಹಾಜರಾಗುತ್ತಿದ್ದರು.

ಗುರು ಹಾಗೂ ಶಿಷ್ಯರು
ನಾಲಂದಾದಲ್ಲಿ ಹಲವು ನಿಯಮಗಳಿದ್ದವು. ಅವುಗಳನ್ನು ಯಾರೂ ಮೀರುವಂತಿರಲಿಲ್ಲ. ಇಲ್ಲಿರುವ ಈ ನಿಯಮಗಳು ಮತ್ತು ಅವುಗಳ ಪಾಲನೆಯ ಶಿಸ್ತನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹುಯೆನ್‌ ತ್ಸಾಂಗ್‌ ಹೇಳುತ್ತಾನೆ. ನಿಯಮಗಳನ್ನು ಮೀರಿದ ಪ್ರಕರಣಗಳೇ ಇಲ್ಲವಂತೆ. ವಿದ್ಯಾಕೇಂದ್ರದ ಪರಿಸರದಲ್ಲಿ 10 ತಿಳಿಗೊಳಗಳು. ಅಲ್ಲಿನ ಜ್ಞಾನಾಸಕ್ತರ ಸ್ನಾನಕ್ಕೆ ಮೀಸಲು. ಬೆಳಗ್ಗೆ ಬೇಗ ಗಂಟೆಯ ನಾದ. ಆ ಹೊತ್ತಿಗೆ ಎಲ್ಲರೂ ಎದ್ದು ಸ್ನಾನ ಮಾಡುತ್ತಾರೆ. ಗುರುಗಳ ಶುಶ್ರೂಷೆಗೂ ಆದ್ಯತೆ. ರಾತ್ರಿ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದ ಕೂಡಲೇ ಗುರುಸೇವೆಯನ್ನು ಮಾಡುತ್ತಾರೆ. ಶಿಷ್ಯರನ್ನು ಗುರುಗಳು ತೀರಾ ಹತ್ತಿರದಿಂದ ಗಮನಿಸುತ್ತಾರೆ. ಅಷ್ಟು ಆತ್ಮೀಯತೆ. ಶಿಷ್ಯರು ಎಡವಿದಾಗಲೆಲ್ಲ ಗುರುವು ತಪ್ಪನ್ನು ತೋರಿಸುತ್ತಾನೆ. ಅದನ್ನು ತಿದ್ದಿ ಹೇಳುತ್ತಾನೆ. ವಿದ್ಯೆಯೊಂದಿಗೆ ಜೀವನಮೌಲ್ಯವಾದ ಸನ್ನಡತೆಗಳ ಬೆಳವಣಿಗೆಗೂ ಅಷ್ಟೇ ಮಹತ್ವವಿತ್ತು.

ಆದಾಯದ ಮೂಲ
ನಾಲಂದಾದ ಶೈಕ್ಷಣಿಕ ಚಟುವಟಿಕೆಗಳ ವೆಚ್ಚಕ್ಕೆ ರಾಜನು ಸಾಕಷ್ಟು ವ್ಯವಸ್ಥೆ ಕಲ್ಪಿಸಿದ್ದನು. ಸುತ್ತಲಿನ ನೂರು ಗ್ರಾಮಗಳ ಆದಾಯವನ್ನು ಇದರ ಚಟುವಟಿಕೆಗಳಿಗೆ ಮೀಸಲಿಡಲಾಗಿತ್ತು. ಈ ಗ್ರಾಮಗಳಲ್ಲಿರುವ 200 ಗೃಹಸ್ಥರು ಪ್ರತಿದಿನವೂ ಅಕ್ಕಿ, ಹಾಲು, ಬೆಣ್ಣೆಗಳನ್ನು ಒದಗಿಸುತ್ತಿದ್ದರು. ಹುಯೆನ್‌ ತ್ಸಾಂಗ್‌ ಹೇಳುವಂತೆ ಜ್ಞಾನಾಸಕ್ತರ ಮೂಲ ಆವಶ್ಯಕತೆಗಳಾದ ಅನ್ನ, ವಸ್ತ್ರ, ಹಾಸಿಗೆ, ಔಷಧಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿತ್ತು.

ಇಂದು ಕೇವಲ ನೆನಪು ಮಾತ್ರ
ಜಗದ್ವಿಖ್ಯಾತವಾದ ನಾಲಂದಾ ತನ್ನ ವೈಭವಗಳನ್ನು ಬಹಳ ಕಾಲ ಉಳಿಸಿಕೊಳ್ಳಲಿಲ್ಲ. ಭಾರತದ ದೇವಾಲಯಗಳಂತೆ ನಾಲಂದಾವೂ ದಾಳಿಗೊಳಗಾಯಿತು. ನಾಲಂದಾದ ಶ್ರೀಮಂತ ಸಂಸ್ಕೃತಿಗೆ ಕಿಚ್ಚಿಡಲಾಯಿತು. ಈ ಬೆಂಕಿ ಮೂರು ತಿಂಗಳು ಉರಿಯುತ್ತಿತ್ತು ಎಂಬ ಐತಿಹ್ಯವೂ ಈ ಘಟನೆಯ ಸುತ್ತ ಬೆಳೆದು ಬಂದಿದೆ. ಬಹುಶಃ ಅಷ್ಟು ಶ್ರೀಮಂತ ಗ್ರಂಥಾಲಯವನ್ನು ಸುಡಲು ಕಿಚ್ಚಿಗೂ ಕಷ್ಟವಾಗಿರಬೇಕು. ಇಂದು ನಾಲಂದಾ ಕೇವಲ ನೆನಪು ಮಾತ್ರ. ಇದೇ ಮಾದರಿಯ ವಿದ್ಯಾಕೇಂದ್ರ ಮತ್ತೆ ತಲೆ ಎತ್ತಲಿ ಎಂಬ ಆಶಯ ಭಾರತೀಯರದ್ದು. ಅದು ಸಾಕಾರವಾಗಲಿ.

-ಡಾ| ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.