Advertisement
ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರಾಜಾಂಗಣದಲ್ಲಿ ಡಿ.24ರಂದು ಪ್ರದರ್ಶಿಸಿದ ನಳ ದಮಯಂತಿ ನೃತ್ಯರೂಪಕ ಜನಮನ್ನಣೆ ಗಳಿಸಿತು. ಪ್ರೊ| ಉದ್ಯಾವರ ಮಾಧವ ಆಚಾರ್ಯರ ಸುಂದರ ಪರಿಕಲ್ಪನೆ, ಸಮರ್ಥ ನಿರ್ದೇಶನವಿತ್ತು. ತೆಲುಗು ಮೂಲದ ಜಾನಪದ ಕವಿ ರಾಘವಯ್ಯ ರಚಿಸಿ, ಕವಿ ಕೆಂಪಯ್ಯ ಕನ್ನಡಿಸಿದ ನಳಚರಿತ್ರೆ ಯಕ್ಷಗಾನ ಆಧಾರಿತವಾದದ್ದು, ಈ ನೃತ್ಯರೂಪಕ ನಳದಮಯಂತಿ. ನಿಷಧ ಪುರಾಧಿಪತಿ ನಳ ಮಹಾರಾಜ ಹಾಗೂ ವಿದರ್ಭ ರಾಜ್ಯದ ಭೀಮರಾಯನ ಸುಪುತ್ರಿ ಸುರಸುಂದರಿ ದಮಯಂತಿ ಇವರಿಬ್ಬರನ್ನೂ ಹಂಸಪಕ್ಷಿಗಳು ವಿವಿಧ ವೃತ್ತಾಂತ ವರ್ಣನೆ, ಶುಭ ಸಂದೇಶಗಳ ಮೂಲಕ ಪ್ರೇಮಿಗಳನ್ನಾಗಿಸಿ ವಿವಾಹ ಬಂಧನದಲ್ಲಿ ಒಂದುಗೂಡಿಸುತ್ತವೆ. ಶನಿ ಪ್ರಭಾವದಿಂದ ಪುಷ್ಕರನೊಂದಿಗೆ ಜೂಜಾಡಿ ರಾಜ್ಯಕೋಶಾದಿಗಳನ್ನು ಕಳೆದುಕೊಂಡು ನಿರ್ಗತಿಕನಾದ ನಳನು ಪತ್ನಿಯೊಂದಿಗೆ ಅರಣ್ಯವಾಸಿಯಾದದ್ದು, ನಿದ್ರಿಸುತ್ತಿದ್ದ ದಮಯಂತಿಯನ್ನು ತೊರೆದದ್ದು, ಕರ್ಕೋಟಕ ಸರ್ಪವು ಕಚ್ಚಿ ಅವನು ಕುರೂಪಿ ಬಾಹುಕನಾದದ್ದು, ಋತುಪರ್ಣ ರಾಜನಲ್ಲಿ ಆಶ್ರಯ ಪಡೆದದ್ದು, ಅತ್ತ ದಮಯಂತಿ ಪತಿಗಾಗಿ ಪರಿತಪಿಸುತ್ತ ತವರುಮನೆ ಸೇರಿಕೊಂಡದ್ದು, ಅಲ್ಲಿ ಮರಳಿ ಸ್ವಯಂವರದ ವ್ಯವಸ್ಥೆ, ನಳದಮಯಂತಿಯರ ಪುನರ್ ಮಿಲನದವರೆಗಿನ ಸುರಮ್ಯ ಕಥಾನಕವು ನೃತ್ಯ ರೂಪಕದಲ್ಲೂ ಅಷ್ಟೇ ಸುರಮ್ಯ ಮತ್ತು ಚಿತ್ರವತ್ತಾಗಿ ಪಡಿಮೂಡಿದೆ ಹತ್ತೂಂಬತ್ತು ವಿದ್ಯಾರ್ಥಿನಿಯರ ತಂಡದಿಂದ.Related Articles
Advertisement
ನೃತ್ಯರೂಪಕಕ್ಕೆ ಹಳೆ ವಿದ್ಯಾರ್ಥಿಗಳ ಹಿಮ್ಮೇಳದ ಸಹಕಾರವಿತ್ತು. ವಿ| ಭ್ರಮರಿ ಶಿವಪ್ರಕಾಶ್ ಅವರು ಉತ್ತಮ ನೃತ್ಯ ಸಂಯೋಜನೆ ಮಾಡಿ ಸಮರ್ಥ ತರಬೇತಿ ನೀಡಿದ್ದರು. ಹಾಡುಗಾರಿಕೆಯಲ್ಲಿ ವಿ| ವಿನುತಾ ಆಚಾರ್ಯ, ತಬ್ಲಾದಲ್ಲಿ ಎನ್.ಮಾಧವ ಆಚಾರ್ಯ, ಪಿಟೀಲಿನಲ್ಲಿ ವಿ| ಶರ್ಮಿಳಾ ಕೃಷ್ಣಮೂರ್ತಿ, ಚೆಂಡೆಯಲ್ಲಿ ಅಜಿತ್ ಕುಮಾರ್ ಅಂಬಲಪಾಡಿ ಸಹಕರಿಸಿದರು. ಪ್ರಸಾದನದಲ್ಲಿ ಭಾಷಾ ಆರ್ಟ್ಸ್ ಉಡುಪಿ ಹಾಗೂ ಸತೀಶ್ ಉಪಾಧ್ಯ ನೆರವು ನೀಡಿದ್ದರು. ಮೂಲ ಸಂಗೀತ ಸಂಯೋಜನೆಯು ವಿದ್ವಾನ್ ಉಡುಪಿ ವಾಸುದೇವ ಭಟ್ ಅವರದ್ದು. ತರಬೇತಿ ಕಾಲದಲ್ಲಿ ಕನ್ನಡ ಪ್ರಾಧ್ಯಾಪಕ ಪ್ರೊ| ರಮಾನಂದರಾವ್ ಅವರ ನೇತೃತ್ವವಿತ್ತು.
ಸುಶೀಲಾ ಆರ್. ರಾವ್