Advertisement

ನಳ ಕಾರ್ಕೋಟಕ ಹೊಸ ಸಾಧ್ಯತೆಗೆ ಸಾಕ್ಷಿ 

11:08 AM Sep 01, 2017 | |

ಯಕ್ಷಗಾನ ರಂಗಭೂಮಿಯಲ್ಲಿ ಹುಟ್ಟಿದ ಬ್ಯಾಲೆ ಪ್ರಕಾರ ಒಂದು ಕಾಲದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಇದರ ರೂವಾರಿಗಳು ಕಡಲತಡಿಯ ಭಾರ್ಗವ ಡಾ| ಶಿವರಾಮ ಕಾರಂತರು. ಯಕ್ಷಗಾನದತ್ತ ಆಕರ್ಷಿತರಾದ ಕಾರಂತರು ಗೆಜ್ಜೆ ಕಟ್ಟಿ ಕುಣಿದರು. ಯಕ್ಷಗಾನದ ಕುಣಿತಕ್ಕಾಗಿಯೇ ಸಂಗೀತಾಭ್ಯಾಸ, ನೃತ್ಯಾಭ್ಯಾಸ ಮಾಡಿ, ರಂಗಸ್ಥಳಕ್ಕೆ ಇಳಿದರು. ಯಕ್ಷಗಾನದಲ್ಲಿ ತನ್ನದೇ ಆದ ಪ್ರಯೋಗಗಳನ್ನು ಮಾಡಿದರೂ ಸಾಂಪ್ರದಾಯಿಕವಾದ ವೇಷ, ನಾಟ್ಯಗಳನ್ನು ಅವರು ಕೈಬಿಟ್ಟವರಲ್ಲ.  ಸಂಪ್ರದಾಯವಾದಿಗಳ ವಿರೋಧಗಳ ನಡುವೆಯೂ ಬ್ಯಾಲೆಯಲ್ಲಿ ಸ್ಯಾಕ್ಸೋಫೋನು, ಪಿಟೀಲನ್ನು ಬಳಸಿ ಸ್ವತಃ ಗೆಜ್ಜೆಕಟ್ಟಿ ಕುಣಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಕಲೆಗೆ ವಿಶಿಷ್ಟ ಮೌಲ್ಯವನ್ನು ತಂದುಕೊಟ್ಟರು. 

Advertisement

ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ, ಗುರು ಸಂಜೀವ ಸುವರ್ಣರ ವಿನ್ಯಾಸ ಮತ್ತು ನಿರ್ದೇಶನದ “ನಳ ಕಾರ್ಕೊಟಕ’ ಎಂಬ ವಿನೂತನ ಪರಿಕಲ್ಪನೆಯ ಯಕ್ಷರೂಪಕ ಯಕ್ಷಗಾನ ರಂಗದಲ್ಲಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕಿದೆ. ಮಂಗಳೂರು ಕೇದಿಗೆ ಪ್ರತಿಷ್ಠಾನದ ಆಶ್ರಯದಲ್ಲಿ ಈ ರೂಪಕ ಇತ್ತೀಚೆಗೆ ಯಶಸ್ವಿಯಾಗಿ ಸಾಕಾರಗೊಂಡಿತ್ತು.

ಕಲಾವಿದರು ಭಾವಾಭಿನಯದಿಂದ ಮನೋಜ್ಞವಾಗಿ ಕಥೆಯನ್ನು ಪ್ರೇಕ್ಷಕರಿಗೆ ಮುಟ್ಟಿಸಿ ಸೈ ಎನಿಸಿ ಕೊಂಡರು. ಇಲ್ಲಿ ನಾಟ್ಯಕ್ಕೆ ಕಡಿಮೆ ಒತ್ತನ್ನು ನೀಡಿ, ಅಭಿನಯಕ್ಕೆ ಹೆಚ್ಚಿನ ಪ್ರಾಧ್ಯಾನವನ್ನು ನೀಡಲಾಗಿದೆ. ಪದ್ಯಾಭಿನಯಗಳ ಮೂಲಕವೇ ಸಂಭಾಷಣೆಗಳನ್ನು ಭಾವನಾತ್ಮಕವಾಗಿ ನಿರ್ದೇಶಕರು ಕಲಾವಿದರ ಮೂಲಕ ಹೊರತಂದದ್ದು ಎದ್ದು ಕಾಣುತ್ತಿತ್ತು. ಪದ್ಯಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಇದೇ ಕಥಾನಕವನ್ನು ಕಾರಂತರು 1982ರ ಕಾಲಘಟ್ಟದಲ್ಲಿ ಆಡಿಸಿದ್ದರು. ಇದಕ್ಕಿಂತ ಸ್ವಲ್ಪ ಭಿನ್ನವಾಗಿ, ಯಕ್ಷಗಾನದ ಸಂಪ್ರದಾಯವನ್ನು ಮೀರದೆ ನಳ ಕಾರ್ಕೊàಟಕ ರೂಪಕವನ್ನು ರಂಗಕ್ಕಿಳಿಸಿದ್ದು ವಿಶೇಷವಾಗಿತ್ತು. 

ನಳ ಮಹಾರಾಜನ ರಾಜ್ಯಭಾರ, ಆತನ ಸಂಭ್ರಮ ಸಂತೋಷದ ಕ್ಷಣಗಳು, ಚೆಂಡಾಟ ಪ್ರೇಕ್ಷಕನ ಗಮನ ವನ್ನು ಸೆಳೆಯುತ್ತವೆ. ಜೂಜಾಟದ ಸನ್ನಿವೇಶ ವಿಶಿಷ್ಟವಾಗಿ ಮೂಡಿಬಂದಿದೆ. ನಳ ತನ್ನ ಪುತ್ರ ಮತ್ತು ಹೆಂಡತಿ ಯಲ್ಲಿ ಸಂಕಷ್ಟ ಹೇಳುವಾಗ ವಿಚಲಿತನಾಗದೇ ಸರ್ವಸ್ವವನ್ನೂ ತ್ಯಾಗವನ್ನು ಮಾಡುವುದು, ಮಗನ ಕೊರಳಲ್ಲಿ ಉಳಿಯುವ ಒಂದು ಸರವನ್ನು ತೆಗೆದುಕೊಳ್ಳುವ ಕ್ಷಣ ಸೂಕ್ಷ್ಮವಾಗಿ ಗಮನ ಸೆಳೆಯುತ್ತದೆ. ಯಕ್ಷಗಾನದಲ್ಲಿ ಈ ಭಾಗ ಕಾಣಸಿಗುವುದಿಲ್ಲ.   

ಶಿವರಾಮ ಕಾರಂತರ ನಿರ್ದೇಶನದಲ್ಲಿ ಬ್ಯಾಲೆ ಆಗಿ ಪ್ರಥಮ ಬಾರಿಗೆ ಈ ಕಥಾನಕ ಪ್ರದರ್ಶನವಾಗಿತ್ತು. ಆಗ ನೀಲಾವರ ರಾಮಕೃಷ್ಣಯ್ಯ ಭಾಗವತರ ಹಾಡಿಗೆ ಪದ್ಮಾಚರಣ್‌ ವಯಲಿನ್‌ ಅದ್ಭುತವಾಗಿತ್ತು. ಕಾರಂತರು ಕಿನ್ನರ ನೃತ್ಯವನ್ನು ಬಳಸಿಕೊಂಡು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಈ ರೂಪಕದಲ್ಲಿ ಯಕ್ಷಗಾನದ ಹೆಜ್ಜೆಗಳನ್ನು, ವೇಷಭೂಷಣಗಳನ್ನು ಬಳಸಿಕೊಳ್ಳಲಾಗಿದೆ. ಬ್ಯಾಲೆ ಪ್ರಕಾರದಲ್ಲಿ ಕಾರಂತರ ಕಲ್ಪನೆಯೇ ಬೇರೆ. ಅವರು ಕಾರ್ಕೋಟಕ ಪಾತ್ರ ತರುತ್ತಿರಲಿಲ್ಲ. ಇಲ್ಲಿ ಆ ಪಾತ್ರವನ್ನು ತರಲಾಗಿದೆ. ಕಾರಂತರ ಬ್ಯಾಲೆಯಲ್ಲಿ ದಮಯಂತಿಯನ್ನು ಹೆಬ್ಟಾವು ನುಂಗುವ ಸನ್ನಿವೇಶ ಇರಲಿಲ್ಲ. ಇಲ್ಲಿ ಪರದೆಯನ್ನೇ ಹೆಬ್ಟಾವಾಗಿ ಬಳಸಿಕೊಳ್ಳಲಾಗಿದೆ. ಇಲ್ಲೆಲ್ಲ ನಿರ್ದೇಶಕರ ಕಲ್ಪನೆಯ ವಿಲಾಸವನ್ನು ನೋಡಬಹುದು. 

Advertisement

 ಬ್ಯಾಲೆ ಪ್ರಕಾರದಲ್ಲಿ ಎಲ್ಲ ಭಾವಗಳಿಗೂ ಅಭಿನಯಿಸಲು ಅವಕಾಶವಿದೆ. ರಂಗ ಕ್ರಿಯೆ, ಕೊರಿಯೋಗ್ರಫಿಗೆ ಅವಕಾಶಗಳಿವೆ. ಹಾಡು ಮತ್ತು ಭಾವವೇ ಇಲ್ಲಿ ಜೀವಾಳ. ಯಕ್ಷಗಾನದ ಆಹಾರ್ಯ ಇಟ್ಟುಕೊಂಡು ಆಂಗಿಕವಾಗಿ ಹಾಡುಗಳಿಗೆ ಯಾವ ರೀತಿ ಸ್ಪಂದಿಸಬಹುದು ಎನ್ನುವುದನ್ನು ನಳ ಕಾರ್ಕೊàಟಕದಲ್ಲಿ ಕಲಾವಿದರು ತೋರಿಸಿದ್ದಾರೆ.

ಇಂಥ ಉತ್ತಮ ರೂಪಕ ಪ್ರಯೋಗ ರಂಗದಲ್ಲಿ ಮೂಡಲು ಪುಷ್ಕರ ಮತ್ತು ಋತುಪರ್ಣನಾಗಿ ಶೈಲೇಶ್‌, ಬಾಹುಕನಾಗಿ ಅನೀಶ್‌ ಡಿ’ಸೋಜ, ಶನಿಯಾಗಿ ಚೇತನ್‌, ಬ್ರಾಹ್ಮಣನಾಗಿ ಆದಿತ್ಯ, ದಮಯಂತಿಯಾಗಿ ರೀತೇಶ್‌, ನಳನಾಗಿ ನಾಗರಾಜ್‌ ವರ್ಕಾಡಿ, ಭಾಗವತಿಕೆಯಲ್ಲಿ ದಿನೇಶ್‌ ಭಟ್‌, ಚೆಂಡೆಯಲ್ಲಿ ಕೃಷ್ಣಮೂರ್ತಿ ಭಟ್‌, ಮದ್ದಳೆಯಲ್ಲಿ ರತ್ಮಾಕರ್‌ ಶೆಣೈ, ವಯಲಿನ್‌ನಲ್ಲಿ ರವಿ ಅವರು ಸಹಕರಿಸಿದರು. ರೂಪಕದ ಆರಂಭದಲ್ಲಿ ಕಥೆಯನ್ನು ಪ್ರೇಕ್ಷಕರಿಗೆ ಸಂಕ್ಷಿಪ್ತವಾಗಿ ಹೇಳಿದ್ದರೆ ಅರ್ಥೈಸಿಕೊಳ್ಳಲು ಸುಲಭಸಾಧ್ಯವಾಗುತ್ತಿತ್ತೇನೋ.

ಕರುಣಾಕರ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next