Advertisement

ಸ್ಫೋಟಕ ವಸ್ತು, ಅಪರಾಧಿಗಳ ಪತ್ತೆ ಹಚ್ಚುತ್ತಿದ್ದ ‘ನೈನಾ’ಇನ್ನಿಲ್ಲ

10:41 AM Aug 25, 2019 | Suhan S |

ಬೆಳಗಾವಿ: ಸ್ಫೋಟಕ ವಸ್ತುಗಳ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಸುಮಾರು ಎಂಟು ವರ್ಷಗಳಿಂದ ಬೆಳಗಾವಿ ನಗರ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೈನಾ ಎಂಬ ಶ್ವಾನ ಹೃದಯಾಘಾತದಿಂದ ಶನಿವಾರ ಬೆಳಗಿನ ಜಾವ ಮೃತಪಟ್ಟಿದೆ.

Advertisement

ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನೈನಾಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೋದ ವರ್ಷ ನೈನಾ ಸೇವೆಯಿಂದ ನಿವೃತ್ತಿಯಾಗಿದ್ದಳು. ಮಹಾನಗರ ಪೊಲೀಸ್‌ ಆಯುಕ್ತರ ಮನೆಯಲ್ಲಿಯೇ ನೈನಾ ವಾಸವಾಗಿದ್ದಳು. ನೈನಾಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕಮೀಷನರ್‌ ಲೋಕೇಶಕುಮಾರ ಅವರು ದುಃಖೀತರಾಗಿದ್ದಾರೆ.

ಲ್ಯಾಬ್ರಡರ್‌ ರಿಟ್ರೀವರ್‌ ಎಂಬ ತಳಿಯ ನೈನಾ 2009ರ ಅಕ್ಟೋಬರ್‌ 21ರಂದು ಜನಿಸಿದ್ದು, ಬೆಂಗಳೂರಿನ ರಾಜ್ಯ ಪೊಲೀಸ್‌ ಶ್ವಾನ ದಳ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದಿದ್ದಳು. ಸ್ಫೋಟಕ ಪತ್ತೆ ಹಚ್ಚುವಲ್ಲಿ ನೈನಾ ಪ್ರಮುಖ ಪಾತ್ರ ವಹಿಸಿದ್ದಳು. ಬೆಳಗಾವಿ ಜಿಲ್ಲಾ ಪೊಲೀಸ್‌ ಘಟಕಕ್ಕೆ ನೇಮಕಗೊಂಡ ನೈನಾ ಜಿಲ್ಲೆಯ ಅಣೆಕಟ್ಟುಗಳು, ವಿಐಪಿ, ವಿವಿಐಪಿ ಭೇಟಿ ವೇಳೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಳು. 2014ರಲ್ಲಿ ಪೊಲೀಸ್‌ ಕಮೀಷನರೇಟ್ ಸ್ಥಾಪನೆಯಾದಾಗ ನಗರಕ್ಕೆ ಆಕೆಯ ವರ್ಗಾವಣೆ ಆಯಿತು.

ನಗರ ವ್ಯಾಪ್ತಿಯ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್ಗಳು, ಮಂದಿರ, ಮಸೀದಿ, ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ನೈನಾ ಪ್ರಮುಖ ಪಾತ್ರ ವಹಿಸಿದ್ದಳು. 2016 ಮೇ 11ರಂದು ದೇಸೂರ ರೈಲ್ವೆ ನಿಲ್ದಾಣದಲ್ಲಿ ಅಜ್ಮೇರ್‌ ಎಕ್ಸಪ್ರಸ್‌ ರೈಲಿನಲ್ಲಿ ಸ್ಫೋಟಕ ವಸ್ತುಗಳಿರುವ ಬಗ್ಗೆ ಮಾಹಿತಿ ಬಂದಾಗ ಕೂಡಲೇ ಐದನೇ ಬೋಗಿಯಲ್ಲಿದ್ದ ಭಾರತೀಯ ಸೇನೆಗೆ ಸೇರಿದ್ದ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ನೈನಾ ಯಶಸ್ವಿಯಾಗಿದ್ದಳು.

2017ರಲ್ಲಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನ ವೇಳೆ ಅಹಿತಕರ ಘಟನೆ ನಡೆಯದಂತೆ ನೈನಾ ಕರ್ತವ್ಯ ನಿರ್ವಹಿಸಿದ್ದಳು. ಅತ್ಯಂತ ಶಾಂತ ಸ್ವಭಾವದ ನೈನಾಗೆ ಚಾಣಾಕ್ಷತೆ ಇತ್ತು. ಅನಾರೋಗ್ಯದಿಂದಾಗಿ ನೈನಾಳನ್ನು 2018 ಮಾರ್ಚ್‌ 1ರಂದು ನಿವೃತ್ತಿಗೊಳಿಸಲಾಗಿತ್ತು. ಶ್ವಾನ ದಳದ ಶ್ವಾನ ಪಾಲಕರಾದ ಐ.ಎಸ್‌. ಮಳಗಲಿ ಅವರ ವಿನಂತಿ ಮೇರೆಗೆ ಆಗಿನ ಕಮೀಷನರ್‌ ಡಾ| ಡಿ.ಸಿ. ರಾಜಪ್ಪ ಅವರು ತಮ್ಮ ಸರ್ಕಾರಿ ನಿವಾಸದಲ್ಲಿ ನೈನಾಳನ್ನು ಸಾಕಿದರು. ಸ್ವಂತ ಖರ್ಚಿನಲ್ಲಿಯೇ ನೈನಾಳ ಆರೈಕೆ ಮಾಡುತ್ತಿದ್ದರು. ಬಳಿಕ ಕಮಿಷನರ್‌ ಆಗಿ ನಗರಕ್ಕೆ ಬಂದ ಬಿ.ಎಸ್‌. ಲೋಕೇಶಕುಮಾರ ಅವರೂ ನೈನಾಳ ಆರೈಕೆ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ತಮ್ಮ ನಿವಾಸದ ಆವರಣದಲ್ಲಿಯೇ ನೈನಾಳ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next