ಭಟ್ಕಳ: ಜಮ್ಮು ಮತ್ತು ಕಾಶ್ಮೀರದ ಕುರಿತು ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯ ಅತ್ಯಂತ ಸೂಕ್ತವಾಗಿದ್ದು ದೇಶದ ಕುರಿತು ಅತ್ಯಂತ ಮಹತ್ವದ ನಿರ್ಣಯವಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಇರುವ ವಿಶೇಷಾಧಿಕಾರ 370ನೇ ವಿಧಿಯನ್ನು ರದ್ದುಪಡಿಸಿರುವುದು ಒಂದು ಉತ್ತಮ ಹಾಗೂ ಮಹತ್ವದ ನಿರ್ಧಾರವಾಗಿದೆ. ಮುಂದಿನ ದಿನಗಳಲ್ಲಿ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಸಹ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜಮ್ಮು ಕಾಶ್ಮೀರಕ್ಕೆ ಇದ್ದಂತಹ 370ನೇ ವಿಧಿ ರದ್ದುಗೊಳಿಸುವುದರ ಮೂಲಕ ಜನಪರವಾಗಿ ನಡೆದು ಕೊಂಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಜನಪರವಾಗಿ ನಡೆದುಕೊಳ್ಳುತ್ತದೆ ಎನ್ನುವುದು ನಿಶ್ಚಿತವಾಗಿದೆ ಎಂದೂ ಹೇಳಿದರು. ಭಟ್ಕಳದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಎಲ್ಲಾ ಚೆಕ್ ಪೋಸ್ಟ್‌ಗಳನ್ನು ಬಿಗುಗೊಳಿಸಲಾಗಿದೆ.
ಕ್ಷೇತ್ರದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಯಾವುದೇ ಪ್ರದೇಶದಲ್ಲಿ ಮಳೆಯಿಂದಾಗಿ ಹಾನಿಯಾದರೂ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಯಾವುದೇ ರೀತಿ ತೊಂದರೆಯಾದರೂ ಸಂಬಂಧಪಟ್ಟ ಇಲಾಖೆ ಅಥವಾ ತಮ್ಮ ಕಚೇರಿ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಹೇಳಿದರು.
ಬಿಜೆಪಿ ಮಂಡಳದ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ ಕೇಂದ್ರ ಸರಕಾರ 70 ವರ್ಷಗಳಿಂದ ತಲೆ ನೋವಾಗಿದ್ದ ಜಮ್ಮು ಕಾಶ್ಮೀರದ ಆರ್ಟಿಕಲ್ 370ನ್ನು ರದ್ದುಪಡಿಸಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದ್ದು, ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದರಿಂದ ಕಾಶ್ಮೀರ ನಮ್ಮ ದೇಶದ ಭಾಗ ಎಂದು ಜಗತ್ತಿಗೇ ಸಾರಿ ಹೇಳಿದಂತಾಗಿದೆ ಎಂದರು.
ಮುಖಂಡರಾದ ಕೃಷ್ಣಾ ನಾಯ್ಕ ಆಸರಕೇರಿ, ಸುಬ್ರಾಯ ದೇವಾಡಿಗ, ಭಾಸ್ಕರ ದೈಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.