ಹೈದರಾಬಾದ್: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಅವರನ್ನು ಖಾಲಿ ಮಾಡಿಸುತ್ತೇವೆ ಎಂದು ವೈಎಸ್‌ಆರ್ ಕಾಂಗ್ರೆಸ್ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ ಹೇಳಿದ್ದು, ನಾಯ್ಡು ಮನೆ ವಿವಾದ ಆಂಧ್ರದಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಮಧ್ಯದ ವಾಗ್ವಾದಕ್ಕೆ ಕಾರಣವಾಗಿದೆ.
ಹೊಸ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ನಾಯ್ಡು ಮನೆ ಖಾಲಿ ಮಾಡಿಸಿದರೆ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಟಿಡಿಪಿ ನಾಯಕ ಪಿ.ಕೇಶವ ಹೇಳಿದ್ದಾರೆ.
ಹೈದರಾಬಾದ್‌ನಿಂದ ಅಮರಾವತಿಗೆ ರಾಜಧಾನಿ ಬದಲಾದ ನಂತರ 2016 ರಲ್ಲಿ ಉಂಡವಳ್ಳಿಯಲ್ಲಿ ನಿರ್ಮಿಸಲಾದ ನಿವಾಸದಲ್ಲಿ ನಾಯ್ಡು ವಾಸಿಸುತ್ತಿದ್ದಾರೆ. ಕೃಷ್ಣಾ ನದಿಯ ತಟದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಖಾಸಗಿ ಉದ್ಯಮಿಯೊಬ್ಬರು ನಿರ್ಮಿಸಿದ ನಿವಾಸವನ್ನು ಸರ್ಕಾರ ಭೋಗ್ಯಕ್ಕೆ ಖರೀದಿಸಿದೆ. ನಾಯ್ಡು ಅಧಿಕಾರ ಕಳೆದುಕೊಂಡ ನಂತರ ಇದೇ ಮನೆಯಲ್ಲಿ ವಾಸ್ತವ್ಯ ಮುಂದುವರಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಹುದ್ದೆ ವಹಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ರಾಮಕೃಷ್ಣ ರೆಡ್ಡಿ ಅವರು, ‘ನದಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ನಾಯ್ಡು ಅವರ ಮನೆ ನಿರ್ಮಿಸಲಾಗಿರುವ ಕಾರಣ, ಅದನ್ನು ಖಾಲಿ ಮಾಡಿಸುತ್ತೇವೆ’ ಎಂದು ಹೇಳಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.