Advertisement

ದೇಶಕ್ಕೆ ಅಚ್ಚೇ ದಿನ್‌ ನಯಿ ಆಯಾ: ಸಿದ್ದರಾಮಯ್ಯ

12:16 PM Feb 02, 2017 | Team Udayavani |

ಮೈಸೂರು: ಕೇಂದ್ರ ಸರ್ಕಾರದ 2017-18ನೇ ಸಾಲಿನ ಆಯವ್ಯಯದಲ್ಲಿ ದೇಶದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಪೂರಕವಾದ ಯಾವುದೇ ಕಾರ್ಯಕ್ರಮಗಳೂ ಕಾಣಿಸುತ್ತಿಲ್ಲ. ಇದನ್ನು ಇಂಕ್ರಿಮೆಂಟಲ್‌ ಬಜೆಟ್‌ ಎಂದು ಕರೆಯಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. 

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು ಅಚ್ಚೇ ದಿನ್‌ ಆಯೇಗಾ ಅಂದ್ರು, ಆದರೆ, ಅವರು ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಾ ಬಂತು, ಅಚ್ಚೇ ದಿನ್‌ ನಯಿ ಆಯಾ ಎಂದು ಜರಿದರು. 500, 1000 ರೂ. ನೋಟು ಅಮಾನ್ಯಿàಕರಣ ಮಾಡಿದ ಮೇಲೆ ಆದಾಯ ಹೆಚ್ಚು ಬರುತ್ತೆ, ಆ ಹಣವನ್ನು ದೇಶದ ಬಡವರು, ದುರ್ಬಲ ವರ್ಗದವರು, ರೈತರು, ಮಹಿಳೆಯರಿಗೆ ಕೊಡುವ ನಿರೀಕ್ಷೆ ಇತ್ತು.

ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಅಮಾನ್ಯಿಕರಣದ ಪರಿಣಾಮವನ್ನು ಕಾದು ನೋಡಿ ಎನ್ನುತ್ತಾರೆ, ಇನ್ನು ಎಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದರು. ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್‌ಜೇಟಿ ಬಹಳಷ್ಟು ಕಾರ್ಯಕ್ರಮಗಳ ಬಗ್ಗೆ ಹೇಳಿದ್ದಾರೆ. ಆದರೆ, ಆ ಯಾವ ಕಾರ್ಯಕ್ರಮಕ್ಕೂ ನಿರ್ದಿಷ್ಟ ನೀತಿ ಇಲ್ಲ. ನೋಟು ಅಮಾನ್ಯಿàಕರಣದಿಂದ ಕಾಳ ಧನಿಕರನ್ನು ಹೊರಗೆಳೆಯುತ್ತೇವೆ. ಕಪ್ಪುಹಣದಿಂದ ದೇಶದಲ್ಲಿ ಪರ್ಯಾಯ ಆರ್ಥಿಕತೆ ಸೃಷ್ಟಿ ತೆಗೆದಿದ್ದೇವೆ ಎನ್ನಲಾಗುತ್ತಿತ್ತು.

ಅಮಾನ್ಯಿಕರಣದಿಂದ ಆದಾಯ ಹೆಚ್ಚು ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಪೂರಕ ಅಂದಾಜಿನಲ್ಲಿ ಅಭಿವೃದ್ಧಿ ದರ ಶೇ.17ರಷ್ಟಿದೆ. ಹಿಂದಿನ ವರ್ಷವೂ ಅಷ್ಟೇ ಇತ್ತು. ಈ ವರ್ಷವು ಅಷ್ಟೇ ಇದೆ. ಇದರಿಂದ ಆದಾಯ ತೆರಿಗೆಯ ಹೆಚ್ಚಳ ಆಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಜರಿದರು. ಕೃಷಿಗೆ ಪೂರಕವಾದ ಯಾವುದೇ ದೊಡ್ಡ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಕೃಷಿ ಸಾಲದ ಮೊತ್ತವನ್ನು 9ರಿಂದ 10 ಲಕ್ಷ ಕೋಟಿ ರೂ. ಗೆ ಹೆಚ್ಚಳ ಮಾಡಲಾಗಿದೆ.

ಅನೇಕ ರಾಜ್ಯಗಳಲ್ಲಿ ಭೀಕರ ಬರಗಾಲ ಇದೆ. ಕಳೆದ ವರ್ಷ ಕೂಡ ಹಲವು ರಾಜ್ಯಗಳಲ್ಲಿ ಬರಗಾಲ ಇತ್ತು. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ಬರಗಾಲಕ್ಕೆ ತುತ್ತಾದ ರೈತರ ಸಾಲಮನ್ನಾ ಮಾಡುವ ನಿರೀಕ್ಷೆ ಇತ್ತು. ರಾಷ್ಟೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 35 ಸಾವಿರ ಕೋಟಿ ರೂ. ಮನ್ನಾ ಮಾಡಿದರೆ, ರಾಜ್ಯ ಸರ್ಕಾರ ಕೂಡ ಸಹಕಾರ ಸಂಘಗಳಲ್ಲಿನ ಅಷ್ಟೇ ಮೊತ್ತದ ಸಾಲವನ್ನು ಮನ್ನಾ ಮಾಡಲಿದೆ ಎಂದು ಮನವಿ ಮಾಡಿದ್ದೆವು.

Advertisement

ಈ ಬಗ್ಗೆ ಯಾವುದೇ ಹೇಳಿಕೆ ಇಲ್ಲ ಎಂದು ಹೇಳಿದರು. ಬರಗಾಲದಿಂದಾಗಿ ಜನ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡುವ ಭರವಸೆ ಇತ್ತು. ಆದರೆ, ಕಳೆದ ವರ್ಷಕ್ಕಿಂತ 9,500 ಕೋಟಿ ರೂ. ಮಾತ್ರ ಹೆಚ್ಚಳ ಮಾಡಲಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ಹಣವನ್ನು ಹೆಚ್ಚು ಮಾಡಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿಲ್ಲ. 

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸ್ವಲ್ಪ ಮಟ್ಟಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಪ್ರತ್ಯೇಕ ರೈಲ್ವೆ ಬಜೆಟ್‌ಗೆ ಬದಲಾಗಿ ಸಾಮಾನ್ಯ ಬಜೆಟ್‌ ಜತೆಯಲ್ಲೇ ಮಂಡಿಸಿ, ರೈಲ್ವೆ ಬಜೆಟ್‌ಗೆ 1.21 ಲಕ್ಷ ಕೋಟಿ ರೂ. ಮೀಸಲು ಎಂದು ಹೇಳಲಾಗಿದೆ. ಮೆಟ್ರೋ ರೈಲು ಪಾಲಿಸಿಯ ಬಗ್ಗೆ ಹೇಳಲಾಗಿದೆ. ಆದರೆ, ಇವುಗಳನ್ನು ಯಾವ ರೀತಿ ಮಾಡಲಾಗುತ್ತದೆ ಎಂಬ ಸ್ಪಷ್ಟತೆ ಇಲ್ಲ. ನೀರಾವರಿ ಯೋಜನೆಗಳಿಗೂ ಹೆಚ್ಚಿನ ಹಣ ನೀಡಿಲ್ಲ. 

ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯ ನಗದು ಮೊತ್ತವನ್ನು 20 ಸಾವಿರದಿಂದ 2 ಸಾವಿರ ರೂ.ಗೆ ಇಳಿಸಲಾಗಿದೆ. ಒಟ್ಟಾರೆ ಕೇಂದ್ರದ ಆಯವ್ಯಯದಲ್ಲಿ ಯಾವುದೇ ದೊಡ್ಡ  ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಬರಪರಿಸ್ಥಿತಿಯನ್ನಂತು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ರಮಾನಾಥ ರೈ, ತನ್ವೀರ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು  

Advertisement

Udayavani is now on Telegram. Click here to join our channel and stay updated with the latest news.

Next