Advertisement
ಗರ್ಭಿಣಿಯರಿಗೆ ಮತ್ತು ರೋಗಗ್ರಸ್ತ ಶಿಶುಗಳ ಸೇವೆಗಾಗಿ ಸರಕಾರದ ವತಿಯಿಂದ ವಿವಿಧ ಸರಕಾರಿ ಜಿಲ್ಲಾಸ್ಪತ್ರೆಗಳಿಗೆ ನಗುಮಗು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಆದರೆ, ವ್ಯವಸ್ಥೆಗೊಳಿಸಿದ ಸರಕಾರ ಅದರ ಓಡಾಟಕ್ಕೆ ಬೇಕಾದ ಹಣ ನೀಡದೇ ಇರುವುದರಿಂದ ಸೇವಾ ಸ್ಥಗಿತದ ಅನಿವಾರ್ಯತೆ ಬಂದೊದಗಿದೆ. ಮಂಗಳೂರಿನಿಂದ ಸುಳ್ಯ ತನಕ ಹಾಗೂ ಮಂಗಳೂರಿನಿಂದ ಮೂಲ್ಕಿ ತನಕ ನಗುಮಗು ಆ್ಯಂಬುಲೆನ್ಸ್ ಓಡಾಟ ನಡೆಸುತ್ತದೆ. ಇದೀಗ 20 ದಿನಗಳಿಂದ ಈ ಆ್ಯಂಬುಲೆನ್ಸ್ ಓಡಾಟ ನಡೆಸದ ಕಾರಣ ಈ ಭಾಗದ ಬಡ ವರ್ಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ.
ಸರಕಾರಿ ಸೇವೆಯಾದ “ನಗುಮಗು’ ಆ್ಯಂಬುಲೆನ್ಸ್ ಸದ್ಯ ಸಾಲದ ಸುಳಿಯಲ್ಲಿದ್ದು, ಪ್ರತಿ ಬಾರಿ ಡೀಸೆಲ್ ಹಾಕುವ ಪೆಟ್ರೋಲ್ ಬಂಕ್‌ನಲ್ಲಿ 60 ಸಾವಿರ ರೂ. ಸಾಲ ಇದ್ದು, ಇದನ್ನು ಮರುಪಾವತಿ ಮಾಡಲು ಸರಕಾರ ಅನುದಾನ ಬಿಡುಗಡೆಗೊಳಿಸಿಲ್ಲ. ಹೀಗಾಗಿ ಸಾಲ ಮರುಪಾವತಿ ಮಾಡದೇ, ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ನೀಡುತ್ತಿಲ್ಲವಾದ್ದರಿಂದ ಆ್ಯಂಬುಲೆನ್ಸ್‌ನ ಸೇವೆ ಸ್ಥಗಿತಗೊಳಿಸಿ ಶೆಡ್‌ನಲ್ಲಿ ನಿಲುಗಡೆಗೊಳಿಸಲಾಗಿದೆ. ಪ್ರತಿ ತಿಂಗಳು ಈ ಆ್ಯಂಬುಲೆನ್ಸ್‌ಗೆ ಡೀಸೆಲ್ ಹಾಕಲು ಸುಮಾರು 22 ಸಾವಿರ ರೂ. ಬೇಕಾಗುತ್ತದೆ. ಎರಡು ದಿನಗಳಲ್ಲಿ ಬಿಡುಗಡೆ ಸಾಧ್ಯತೆ?
ಸರಕಾರದಿಂದ ಹಣ ಬಾರದ ಹಿನ್ನೆಲೆಯಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಿಂದ ಹಣ ಹೊಂದಿಸುವ ಬಗ್ಗೆ ಯೋಜಿಸಲಾಗಿದ್ದು, ಈ ಸಂಬಂಧ ಇಲಾಖೆಯಿಂದ ಮುಂದಿನ ಎರಡು ದಿನಗಳೊಳಗೆ ಆದೇಶ ಬರುವ ಸಾಧ್ಯತೆ ಇದೆ. ಆದೇಶ ಬಂದ ತತ್‌ಕ್ಷಣ ಆ್ಯಂಬುಲೆನ್ಸ್ ಸೇವೆ ಪುನರಾರಂಭಿಸಲಿದೆ ಎಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದಾರೆ.
Related Articles
ಡೀಸೆಲ್ ಇಲ್ಲದ ಕಾರಣ “ನಗುಮಗು’ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಇದೀಗ ಜನನಿ ಸುರಕ್ಷಾ ಯೋಜನೆಯಿಂದ ಹಣ ಹೊಂದಿಸುವ ಬಗ್ಗೆ ಯೋಜಿಸಲಾಗಿದೆ. ಈ ಬಗ್ಗೆ ಆದೇಶ ಬಂದ ಅನಂತರ ಪೆಟ್ರೋಲ್ ಬಂಕ್‌ಗೆ ಸಾಲ ಮರುಪಾವತಿ ಮಾಡಲಾಗುವುದು ಮತ್ತು ಆ್ಯಂಬುಲೆನ್ಸ್ ಸೇವೆಯನ್ನು ಪುನರಾರಂಭಿಸಲಾಗುವುದು.
- ಡಾ| ಸವಿತಾ,ವೈದ್ಯಕೀಯ ಅಧೀಕ್ಷಕಿ ಲೇಡಿಗೋಶನ್ ಆಸ್ಪತ್ರೆ
Advertisement