Advertisement
ಶಾಲಾ ಹಂತದಿಂದಲೇ ಮಕ್ಕಳಲ್ಲಿ ಕಬಡ್ಡಿ ಕುರಿತು ಆಸಕ್ತಿ ಮೂಡಿಸಲು ಮಹಾನಗರ ಪಾಲಿಕೆ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರವೀಣ ಡಟಕೆ ನಾಗ್ಪುರದ ಮಹಾಪೌರರಾಗಿದ್ದ ಸಂದರ್ಭದಲ್ಲಿ ದೇಶಿ ಕ್ರೀಡೆ ಕಬಡ್ಡಿಯನ್ನು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕೆಂದು ಠರಾವು ಮಾಡಿದರು. ಇದಕ್ಕೆ ಪಕ್ಷಭೇದವಿಲ್ಲದೆ ಎಲ್ಲ ಪಾಲಿಕೆ ಸದಸ್ಯರೂ ಸರ್ವಾನುಮತದಿಂದ ಬೆಂಬಲ ಸೂಚಿಸಿದರು. ಪಾಲಿಕೆ ಕ್ರಮವನ್ನು ಇಡೀ ನಗರವೇ ಸ್ವಾಗತಿಸಿತು. ಸ್ವತಃ ಕಬಡ್ಡಿ ಪಟುವಾಗಿರುವ ಪಾಲಿಕೆ ಸದಸ್ಯ ಹಾಗೂ ಪಾಲಿಕೆ ಕ್ರೀಡಾ ವಿಭಾಗದ ಚೇರ¾ನ್ ನಾಗೇಶ ಸಹಾರೆ ಮುಂದೆ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರು.
ಮಹಾನಗರ ಪಾಲಿಕೆ ಆದೇಶದ ನಂತರ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆ ಕಬಡ್ಡಿ, ಖೋಖೋ ಆಡಿಸುವುದು ಕಡ್ಡಾಯ. ಶನಿವಾರ ಬೆಳಗ್ಗೆ 8ಕ್ಕೆ ಶಾಲೆ ಆರಂಭಗೊಳ್ಳುವುದರಿಂದ ಕನಿಷ್ಠ 2 ಗಂಟೆ ಮಕ್ಕಳು ಕಬಡ್ಡಿ ಆಡುತ್ತಾರೆ. ಕೆಲ ಮಕ್ಕಳು ಭಾನುವಾರ ಕೂಡ ಬಂದು ಮೈದಾನಗಳಲ್ಲಿ ತಂಡ ಕಟ್ಟಿಕೊಂಡು ಆಡುತ್ತಾರೆ.
Related Articles
Advertisement
ನಗರದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಬಿಡುವಿನ ವೇಳೆಯಲ್ಲಿ ಶಾಲಾ ಮೈದಾನದಲ್ಲಿ ಕಬಡ್ಡಿ ಆಡುವುದು ಸಾಮಾನ್ಯ ದೃಶ್ಯ. ಗೆದ್ದ ತಂಡಕ್ಕೆ ಚಾಕೊಲೇಟ್, ಪೆನ್, ಪೆನ್ಸಿಲ್ ಬಹುಮಾನ ನೀಡಲಾಗುತ್ತದೆ. ಇದು ಮಕ್ಕಳಲ್ಲಿ ಕಬಡ್ಡಿ ಬಗೆಗಿನ ಆಸಕ್ತಿ ಹೆಚ್ಚಿಸಲು ಪೂರಕವಾಗಿದೆ. ನಾಗ್ಪುರ ದಲ್ಲಿ ಶಾಲಾ ಮಕ್ಕಳಿಗಾಗಿ ಹಲವಾರು ಕಬಡ್ಡಿ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಟೂರ್ನಿಗಳ ಸಂಖ್ಯೆ ಹೆಚ್ಚಿದಂತೆ ಪಟುಗಳಿಗೆ ಅವಕಾಶಗಳು ಕೂಡ ಹೆಚ್ಚುತ್ತವೆ.
ಪ್ರೊ ಕಬಡ್ಡಿ ಆರಂಭಗೊಂಡಾಗಿನಿಂದ ಕಬಡ್ಡಿ ವಲಯ ವಿಸ್ತಾರಗೊಳ್ಳುತ್ತಿದೆ. ಅನೇಕ ಕ್ಲಬ್‌ಗಳು ನಗರ ಪ್ರದೇಶದ ಉಚ್ಚ ಮಧ್ಯಮ ವರ್ಗ, ಸಿರಿವಂತರ ಮಕ್ಕಳಿಗೆ ತರಬೇತಿ, ಅವಕಾಶ ನೀಡುತ್ತವೆ. ಆದರೆ ಕೊಳಚೆ ಪ್ರದೇಶದ ಬಡವರ ಮಕ್ಕಳು ಕಬಡ್ಡಿಯಿಂದ ವಿಮುಖರಾಗುವ ಸಾಧ್ಯತೆ ಇರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ಮಕ್ಕಳಲ್ಲಿ ಪ್ರತಿಭಾವಂತ ಕಬಡ್ಡಿ ಪಟುಗಳನ್ನು ಗುರುತಿಸುವ, ಬೆಳೆಸುವ ದಿಸೆಯಲ್ಲಿ ಮಹಾನಗರ ಪಾಲಿಕೆ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕಡ್ಡಾಯ ಮಾಡಿದೆ.
ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಆಸಕ್ತಿ, ಕೌಶಲ್ಯವನ್ನು ಗಮನಿಸಿ ತರಬೇತಿ ನೀಡಲಾಗುತ್ತಿದೆ. ದೈಹಿಕ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಕೂಡ ಕಬಡ್ಡಿ ಆಟಗಾರರಿಗೆ ಆದ್ಯತೆ ನೀಡಲಾಗುತ್ತಿದೆ. ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಶಾಲೆಗಳ ಶಿಕ್ಷಕರನ್ನು ಸತ್ಕರಿಸುವುದರಿಂದ ಶಿಕ್ಷಕರು ಕೂಡ ಆಸಕ್ತಿಯಿಂದ ಮಕ್ಕಳಿಗೆ ಕಬಡ್ಡಿ ಕಲಿಸುತ್ತಾರೆ. ಹಸಿ ಗೋಡೆಯಲ್ಲಿ ಕಲ್ಲೆಸೆದರೆ ಅದು ಗೋಡೆಗೆ ಶಾಶ್ವತವಾಗಿ ಅಂಟಿಕೊಳ್ಳುವಂತೆ ಆಸಕ್ತ ಮಕ್ಕಳು ಬಾಲ್ಯಾವಸ್ಥೆಯಿಂದಲೇ ಕಬಡ್ಡಿಗೆ ಅಂಟಿಕೊಳ್ಳುತ್ತಾರೆ. ಇಲ್ಲಿನ ಮಕ್ಕಳಿಗೂ ಕಬಡ್ಡಿ ಬಗ್ಗೆ ಅದೆಂಥದೋ ಮೋಹ. ಮನೆಯಲ್ಲಿ ಅಪ್ಪ, ಚಿಕ್ಕಪ್ಪ ಅಥವಾ ಅಣ್ಣ ಆಡುತ್ತಾರೆ ಅದಕ್ಕೆ ನಾನು ಕೂಡ ಕಬಡ್ಡಿ ಆಡಬೇಕೆಂಬ ಮಮತೆಯಿದೆ.
ಮಹಾರಾಷ್ಟ್ರದ 62 ಜಿಲ್ಲೆಗಳಲ್ಲಿ ನಾಗ್ಪುರ ಕಬಡ್ಡಿಯಲ್ಲಿ ಸದಾ ಅಗ್ರಸ್ಥಾನದಲ್ಲಿರಬೇಕು ಹಾಗೂ ರಾಷ್ಟ್ರಮಟ್ಟದಲ್ಲಿಯೂ ಇಲ್ಲಿನ ಕಬಡ್ಡಿ ಪ್ರತಿಭೆಗಳು ಸಾಧನೆ ಮಾಡಬೇಕೆಂಬ ಮಹದುದ್ದೇಶದಿಂದ ಮಹಾನಗರ ಪಾಲಿಕೆ ಭರವಸೆಯ ಕ್ರಮ ಕೈಗೊಂಡಿದೆ. ಕ್ರೀಡೆಯಿರಲಿ, ಕಲೆಯಿರಲಿ ಸಂಪ್ರದಾಯವನ್ನು ಉಳಿಸಬೇಕೆಂಬ ತುಡಿತ ಜನಪ್ರತಿನಿಧಿಗಳಿಗಿರಬೇಕು. ಕ್ರಿಕೆಟ್ ಅಬ್ಬರದಲ್ಲಿ ದೇಶಿ ಕ್ರೀಡೆಗಳು ಕಣ್ಮರೆಯಾಗದಿರಲಿ ಎಂಬ ಉದ್ದೇಶದಿಂದ ನಾಗ್ಪುರ ಮಹಾನಗರ ಪಾಲಿಕೆ ಕೈಗೊಂಡ ಕ್ರಮ ಅನುಕರಣೀಯವಾಗಿದೆ.
ಪ್ರೋ ಕಬಡ್ಡಿಯಿಂದಾಗಿ ನಗರದ ಮಕ್ಕಳಲ್ಲಿ ಕಬಡ್ಡಿ ಕ್ರೇಜ್ ಹೆಚ್ಚುತ್ತಿದೆ. ಉಳ್ಳವರ ಮಕ್ಕಳು ಕ್ಲಬ್‌ಗಳಲ್ಲಿ, ಅನುಭವಿ ಕೋಚ್‌ಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಾರೆ. ಸರ್ಕಾರಿ ಶಾಲೆಯ ಬಡ ಮಕ್ಕಳು ಅವಕಾಶ ವಂಚಿತರಾಗಬಾರದು ಎಂಬ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕಡ್ಡಾಯ ಮಾಡಲಾಗಿದೆ. ನಾಗೇಶ ಸಹಾರೆ, ಮಹಾನಗರ ಪಾಲಿಕೆ ಕ್ರೀಡಾ ವಿಭಾಗದ ಚೇರಮನ್ ನಾಗ್ಪುರದ ಅನೇಕ ಕಬಡ್ಡಿ ಪಟುಗಳು ಮಹಾರಾಷ್ಟ್ರಕ್ಕೆ ಹಾಗೂ ದೇಶಕ್ಕೆ ಹಿರಿಮೆ ತಂದಿದ್ದಾರೆ. ಈ ಪರಂಪರೆ ಮುಂದುವರೆಯಲು ಪೂರಕ ವಾತಾವರಣ ಕಲ್ಪಿಸುವುದು ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿ. ಕಬಡ್ಡಿ ಅಭ್ಯುದಯಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ಕಬಡ್ಡಿ ತರಬೇತಿ ನೀಡಿ ಪೋಷಿಸಲಾಗುತ್ತಿದೆ.
ಗಿರೀಶ ವ್ಯಾಸ, ನಾಗ್ಪುರ ಶಾಸಕ ವಿಶ್ವನಾಥ ಕೋಟಿ