Advertisement
ಕರಾವಳಿಯಿಂದ ಮಲೆನಾಡು ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಮತ್ತಿತರ ಊರುಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಗಳಲ್ಲಿ ನಾಗೋಡಿ ಘಾಟಿಯೂ ಒಂದು. ಹಲವು ಕಡೆಗಳಲ್ಲಿ ರಸ್ತೆಗೆ ಬಾಗಿರುವ ಅಪಾಯಕಾರಿ ಮರಗಳ ಕಟಾವು ಅಥವಾ ಮರಗಳ ಗೆಲ್ಲು ಕಡಿದು ರಸ್ತೆಗೆ ಬೀಳದಂತೆ ಎಚ್ಚರ ವಹಿಸುವ ಯಾವುದೇ ಕಾರ್ಯ ಆಗಿಲ್ಲ. ಕಳೆದ ಬಾರಿ ಉರುಳಿದ ಮರಗಳ ಗೆಲ್ಲುಗಳನ್ನೇ ಪೂರ್ಣ ಪ್ರಮಾಣದಲ್ಲಿ ರಸ್ತೆ ಬದಿಯಿಂದ ತೆರವುಗೊಳಿಸಿಲ್ಲ!
ಈ ಘಾಟಿಯಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದರೂ ಯಾರೂ ಬಾರದಿರುವ ಪರಿಸ್ಥಿತಿಯಿದೆ. ಒಂದೋ ಕೊಲ್ಲೂರಿನಿಂದ ಅಥವಾ ಶಿವಮೊಗ್ಗದಿಂದ ಬರಬೇಕಿದೆ. ಗಾಳಿ – ಮಳೆಗೆ ಮರ ಬಿದ್ದರಂತೂ ಘಾಟಿ ದಿನಪೂರ್ತಿ ಅಥವಾ ಕೆಲವು ಗಂಟೆಗಳ ಕಾಲ ಬಂದ್ ಆಗುವುದಂತೂ ನಿಶ್ಚಿತ. 14 ಕಿ.ಮೀ. ಘಾಟಿ ಪ್ರದೇಶ
ಉಡುಪಿ ಹಾಗೂ ಶಿವಮೊಗ್ಗ ಎರಡೂ ಜಿಲ್ಲೆಯನ್ನು ಬೆಸೆಯುವ ಈ ಘಾಟಿಯು ಒಟ್ಟು 14 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಎರಡು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಸಿಗಂದೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮೂಲಕ ಸಂಚರಿಸುತ್ತವೆ. ಬೆಂಗಳೂರಿನಿಂದ ಸಾಗರ ಮೂಲಕವಾಗಿ ಕೊಲ್ಲೂರು, ಕುಂದಾಪುರಕ್ಕೆ ಈ ಘಾಟಿ ಮೂಲಕ ಬಸ್ ಸಂಚರಿಸುತ್ತವೆ. ಶಿವಮೊಗ್ಗ, ಹೊಸನಗರ ಕಡೆಯಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳಕ್ಕೆ ತೆರಳಬೇಕಾದರೂ ಇದೇ ಮಾರ್ಗವಾಗಿ ಸಂಚರಿಸಬೇಕು.
Related Articles
ನಾಗೋಡಿ ಘಾಟಿಯ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 7 ಕಿ.ಮೀ.ನ ಬಹುಭಾಗ ಕಾಂಕ್ರೀಟಿಕರಣಗೊಂಡಿದ್ದು, ಒಂದು ಬದಿಯಿಂದ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ. ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ 7 ಕಿ.ಮೀ. ಡಾಮರೀಕರಣ ಮಾತ್ರ ಮಾಡಲಾಗಿದೆ. ಒಂದೆರಡು ಕಡೆಗಳಲ್ಲಿ ಜರ್ಜರಿತಗೊಂಡು ಗುಡ್ಡ ಕುಸಿದು, ಮಣ್ಣು ಹೆದ್ದಾರಿಗೆ ಬರುವ ಅಪಾಯವೂ ಇದೆ.
Advertisement
ಮಳೆಗಾಲದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಘಾಟಿಯಲ್ಲಿ ಸುಗಮ ಸಂಚಾರಕ್ಕೆ ಸಕಲ ರೀತಿಯ ಕ್ರಮ ಕೈಗೊಳ್ಳಲಾಗುವುದು.– ಮಂಜುನಾಥ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಶೃಂಗೇರಿ -ಪ್ರಶಾಂತ್ ಪಾದೆ