ಬಳ್ಳಾರಿ: ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಿಗಮದ ಹಗರಣದ ಕುರಿತು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಭಾವುಕರಾದ ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಕಣ್ಣೀರು ಹಾಕುತ್ತಲೇ ಸುಳ್ಳು ಆರೋಪ ಮಾಡಿರುವ ಕೆಟ್ಟ ರಾಜಕೀಯದವರನ್ನು ಜಿಲ್ಲೆಯಿಂದಲೇ ಕಿತ್ತೂಗೆಯುವ ಕೆಲಸ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ನಾಗೇಂದ್ರ, ವಾಲ್ಮೀಕಿ ನಿಗಮದ ಹಗರಣವನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತ ಕಣ್ಣೀರು ಹಾಕಿದರು. ಬಳ್ಳಾರಿ ಜಿಲ್ಲೆಗೆ ಬರಲು ವಾಲ್ಮೀಕಿಯೇ ಬಂದು ಜಾಮೀನು ಕೊಟ್ಟಂತಾಗಿದೆ. ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದ ನಾನು ಸಮುದಾಯದ ನಿಗಮದಲ್ಲಿಯೇ ಹಗರಣ ಮಾಡುವಂತಹ ನೀಚ ಕೆಲಸಕ್ಕೆ ಕೈ ಹಾಕಿಲ್ಲ ಎಂದು ವೇದಿಕೆಯಲ್ಲಿಯೇ ಕಣ್ಣೀರು ಸುರಿಸುತ್ತಲೇ ಭಾವುಕರಾದರು.
ನನ್ನ ಮೇಲಿನ ಸುಳ್ಳು ಆರೋಪದಿಂದ ಜಿಲ್ಲೆಗೆ ಬರಬಾರದು ಎಂದುಕೊಂಡಿದ್ದೆ. ನನ್ನಿಂದ ಹೀಗಾಗಿದೆ, ರಾಜಕೀಯದಲ್ಲಿ ಇರಬಾರದೆಂದು ನಿರ್ಧರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ರಾಜೀನಾಮೆ ನೀಡಿದರೆ ಜಿಲ್ಲೆಯ, ಸಮುದಾಯದ ಜನರು ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಕಾರಣದಿಂದ ಆರೋಪದಿಂದ ಮುಕ್ತನಾಗಿ ಹೊರ ಬರಬೇಕು ಎಂದು ನಿರ್ಧಾರ ಮಾಡಿದೆ ಎಂದರು.
ಜೈಲಿನ ಗೋಡೆ ಮೇಲೆ ಹೆಸರು ಬರೆದಿದ್ದೇನೆ
ಸುಳ್ಳು ಆರೋಪದಲ್ಲಿ ನನ್ನ ಮೇಲೆ ಗೂಬೆ ಕೂರಿಸಿ, ಆರೋಪ ಮಾಡುತ್ತಿರುವ ಬಿಜೆಪಿಯವರ ಹೆಸರನ್ನು ಪರಪ್ಪನ ಅಗ್ರಹಾರದ ಜೈಲಿನ ಗೋಡೆ ಮೇಲೆ ಬರೆದಿಟ್ಟು ಬಂದಿದ್ದು, ಅವರು ಮುಂದಿನ ದಿನಗಳಲ್ಲಿ ಅದೇ ಜೈಲು ಪಾಲಾಗಲಿದ್ದಾರೆ ಎಂದರು.