ಸಿನಿಮಾ ಮಾಡಬೇಕೆಂದರೆ ಒಂದು ಕಥೆ ಬೇಕು. ಒನ್‌ಲೈನ್ ಆದರೂ ಇರಬೇಕು. ಅದು ಚೆನ್ನಾಗಿದೆಯೋ, ಇಲ್ಲವೋ ಎಂಬುದು ಆ ಮೇಲಿನ ಮಾತು. ನಿರ್ದೇಶಕ ಅರುಣ್ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಸಿನಿಮಾಕ್ಕೂ ಒಂದು ಕಥೆ ಮಾಡಿಕೊಂಡಿದ್ದಾರೆ. ಅವರೇ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿ, ಅವರೇ ಅದಕ್ಕೆ ಉತ್ತರ ಕಂಡುಕೊಳ್ಳಲು ಹೊರಡುವುದೇ ಅವರು ಮಾಡಿಕೊಂಡಿರುವ ಕಥೆ.
ಡಾ.ವಿಷ್ಣುವರ್ಧನ್, ನಟಿ ಸೌಂದರ್ಯ ಅವರ ಸಾವಿಗೆ ಹಾಗೂ ರಜನಿಕಾಂತ್ ಅವರು ಅನಾರೋಗ್ಯಕ್ಕೆ ಒಳಗಾಗಲು ನಾಗವಲ್ಲಿ ಕಾರಣನಾ ಎಂಬ ಪ್ರಶ್ನೆಯನ್ನು ಅವರೇ ಎತ್ತಿಕೊಂಡು, ಅದನ್ನು ಬಲಪಡಿಸುತ್ತಾ, ಅದಕ್ಕೆ ಉತ್ತರ ಕಂಡುಕೊಳ್ಳುವುದೇ ಅವರ ಒಟ್ಟು ಸಿನಿಮಾದ ಕಥೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಪ್ರಸ್ತುತವಾದ ಪ್ರಶ್ನೆಯನ್ನು ಎತ್ತಿಕೊಂಡು ಅದಕ್ಕೆ ಉತ್ತರ ಹುಡುಕುವ “ಆಟ’ವಾಡಿದ್ದಾರೆ.
ಏಕೆಂದರೆ, ಅರುಣ್ ಎತ್ತಿರುವ ಪ್ರಶ್ನೆಗಳು ಯಾರನ್ನೂ ಬಲವಾಗಿ ಕಾಡಿದಂತಿಲ್ಲ. ಅದೇ ಕಾರಣದಿಂದ ಚಿತ್ರದ ನೋಡುತ್ತಾ ಪ್ರೇಕ್ಷಕನಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡುತ್ತದೆ. ದೆವ್ವ, ಆತ್ಮದ ಹುಡುಕಾಟವು ಮುಂದೆ ನಾಗವಲ್ಲಿಯನ್ನು ಹುಡುಕುತ್ತಾ ಕೇರಳಕ್ಕೆ ಹೊರಡಲು ನಾಂದಿಯಾಗುತ್ತದೆ. ಹೀಗೆ ನಾಗವಲ್ಲಿಯನ್ನು ಹುಡುಕುತ್ತಾ ಹೊರಟ ನಿರ್ದೇಶಕರಿಗೆ ಬಹಳ ಬೇಗನೇ, ನಾಗವಲ್ಲಿ ಇಲ್ಲವೇ ಇಲ್ಲ,
ಅದು ಕಟ್ಟುಕಥೆ ಎಂದು ಗೊತ್ತಾಗುವ ಜೊತೆಗೆ “ಸುಗಂಧವಲ್ಲಿ’ ಎಂಬ ಆತ್ಮವೊಂದು ಕೇರಳದ ಅರಮನೆಯೊಂದರಲ್ಲಿ ಸೇರಿಕೊಂಡಿದೆ ಎಂಬ ಸತ್ಯ ತಿಳಿಯುತ್ತದೆ. ಹಾಗಾಗಿ, ಮುಂದೆ ಕನ್ನಡ ಚಿತ್ರರಂಗದಲ್ಲಿ “ಸುಗಂಧವಲ್ಲಿ’ ಕಾಟ ಶುರುವಾದರೂ ಆಗಬಹುದು. ಕಥೆ ಏನೇ ಇರಬಹುದು, ಅದನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದರೆ, “ಆಪ್ತಮಿತ್ರರು’ಗೆ ಒಳ್ಳೆಯ ಸಿನಿಮಾವಾಗುವ ಅವಕಾಶವಿತ್ತು.
ಆದರೆ, ನಿರ್ದೇಶಕರು ಎಲ್ಲಾ ಹಾರರ್ ಸಿನಿಮಾಗಳಂತೆ ಸೌಂಡ್ ಎಫೆಕ್ಟ್, ಎಕ್ಸ್‌ಪ್ರೆಶನ್‌ಗಳಲ್ಲೇ ಪ್ರೇಕ್ಷಕರಿಗೆ ಭಯ ಹುಟ್ಟಿಸಲು ಪ್ರಯತ್ನಿಸಿದ ಪರಿಣಾಮ ಚಿತ್ರ ಪೇಲವವಾಗಿದೆ. ಮೊದಲರ್ಧ ಜಿಮ್ ಬಾಡಿ ಪ್ರದರ್ಶಿಸುವ ಫೈಟ್ ಹಾಗೂ ಆತ್ಮಗಳ ಹುಡುಕಾಟದಲ್ಲೇ ಮುಗಿದು ಹೋಗುತ್ತದೆ. ಇನ್ನೇನು “ನಾಗವಲ್ಲಿ’ ಸಿಕ್ಕಿಬಿಟ್ಟಳು ಎಂದು ಪ್ರೇಕ್ಷಕರು ಸೀಟಿನ ಅಂಚಿಗೆ ಬರುವಷ್ಟರಲ್ಲಿ ಕಾಮಿಡಿ ಎನಿಸುವ ದೃಶ್ಯ ಬಂದು ಅವರ ಕುತೂಹಲ ಕೆಡಿಸುತ್ತದೆ.
ಮನೆಯಲ್ಲಿ ಅಡಗಿದ ಕಳ್ಳನನ್ನು ಹುಡುಕಲು ಹೊರಟಂತೆ ಕತ್ತಲಿನ ಅರಮನೆಯೊಂದರಲ್ಲಿ ಪಂಜು ಹಿಡಿದು ಐದಾರು ಮಂದಿ ನಾಗವಲ್ಲಿ ಹುಡುಕಲು ಹೋಗುತ್ತಾರೆ. ಪ್ರೇಕ್ಷಕರಿಗೆ ಕತ್ತಲ ಮಧ್ಯೆ ಪಂಜಿನ ಬೆಳಕು ಬಿಟ್ಟರೆ ಬೇರೇನು ಕಾಣೋದಿಲ್ಲ. ಕಟ್ ಮಾಡಿದರೆ, ನಾಯಕ ಹೊರಡಗೆ ಬಂದು “ನಾಗವಲ್ಲಿ’ ಇಲ್ಲ ಅನ್ನೋದನ್ನು ಡಿಕ್ಲೇರ್ ಮಾಡಿಬಿಡುವ ಜೊತೆಗೆ “ಸುಗಂಧವಲ್ಲಿ’ಯ ಆತ್ಮವನ್ನು “ಹೊರಕ್ಕೆ’ ಬಿಡುತ್ತಾನೆ.
ಇದೇ ಅಂಶವನ್ನು ಮತ್ತಷ್ಟು ಸೀರಿಯಸ್ ಆಗಿ ಹಾಗೂ ಒಂದಷ್ಟು ಪೂರ್ವತಯಾರಿಯೊಂದಿಗೆ ಮಾಡಿದ್ದರೆ “ಮಿತ್ರರ’ ಕಾರ್ಯಕ್ಕೂ ಒಂದು ಬೆಲೆ ಬರುತಿತ್ತು. ಚಿತ್ರದಲ್ಲಿ ನಟಿಸಿದ ವಿಕ್ರಮ್ ಕಾರ್ತಿಕ್, ವೈಷ್ಣವಿ ಮೆನನ್ ತಕ್ಕಮಟ್ಟಿಗೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಒಂದು ಹಾಡು ಇಷ್ಟವಾಗುತ್ತದೆ.
ಚಿತ್ರ: ನಾಗವಲ್ಲಿ ವರ್ಸಸ್ ಆಪ್ತಮಿತ್ರರು
ನಿರ್ಮಾಣ: ಶ್ವೇತಾ ಅರುಣ್
ನಿರ್ದೇಶನ: ಶಂಕರ್ ಅರುಣ್
ತಾರಾಗಣ: ವಿಕ್ರಮ್ ಕಾರ್ತಿಕ್, ವೈಷ್ಣವಿ ಮೆನನ್
* ರವಿ ರೈ