Advertisement
ವಿಶಾಲವಾದ ಕಟ್ಟಡ, ಶಾಲೆಯ ಅಂದಕ್ಕೆ ವಿಶಿಷ್ಟ ಮೆರುಗು ನೀಡಿರುವ ಕೆಂಪು ಇಟ್ಟಿಗೆಗಳು ಇಡೀ ಶಾಲೆಯ ಸೌಂದರ್ಯ ಹೆಚ್ಚಿಸಿದೆ. ಇಡೀ ಕಟ್ಟಡ ಎರಡೇ ಬಣ್ಣದಿಂದ ಕೂಡಿದೆ. ಕೆಂಪು ಮತ್ತು ಸಿಮೆಂಟ್. ಕೊಠಡಿಗಳಲ್ಲಿ ಬೋರ್ಡು ಇರುವ ಸ್ಥಳವನ್ನು ಮಾತ್ರ ಪ್ಲಾಸ್ಟಿಂಗ್ ಮಾಡಿದೆ. ಉಳಿದ ಕಡೆ ಜಂಬು ಇಟ್ಟಿಗೆಯ ಗೋಡೆಗಳು. ಪೇಯಿಂಟ್ ಇಲ್ಲ.ಬೆಳಕು, ಗಾಳಿ ಎಲ್ಲವೂ ವೈಜ್ಞಾನಿಕವಾಗಿಯೇ.
Related Articles
Advertisement
ಹೈಟೆಕ್ ತಂತ್ರಶಾಲೆ ಎಂದ ಮೇಲೆ ಶಿಕ್ಷಕರು ಪಾಠ ಮಾಡಬೇಕಾದರೆ ಗುಸು ಗುಸು, ಪಿಸು ಪಿಸು ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ತೀಟೆ ಮಾಡಿದರೆ ಶಿಕ್ಷಕರು ರಾಂಗ್ ಆಗುತ್ತಾರೆ ಆಗಲೇ ಅವರ ಜೊತೆಗೆ ಧ್ವನಿಯೂ ಗಡುಸಾಗಿ ಕೇಳಿಬರುತ್ತದೆ! ಎಷ್ಟೋ ಸಲ ಅಧ್ಯಾಪಕರಿಗೆ ಕೋಪವೇನೂ ಬಂದಿರುವುದಿಲ್ಲ, ಆದರೆ ಮಕ್ಕಳು “ಮೇಷ್ಟ್ರಿಗೆ ಕೋಪ ಬಂದಿರಬೇಕು, ಮುಖನೋಡಿದರೆ ಹಾಗೇ ಅನ್ನಿಸುತ್ತದೆ!’ ಎಂದು ಯೋಚಿಸುತ್ತಾರೆ. ಇಂಥ ಸಮಸ್ಯೆ ಈ ಶಾಲೆಯಲ್ಲಿಲ್ಲ. ಏಕೆಂದರೆ, ಪಾಠಮಾಡುವ ಕೋಣೆಗಳಲ್ಲಿ ಶಬ್ದಗ್ರಹಿಕೆ (ಅಕೊಸ್ಟಿಕ್) ತಂತ್ರಜ್ಞಾನ ಅಳವಡಿಸಿದೆ. ಹೀಗಾಗಿ ಈ ಶಾಲೆಯಲ್ಲಿ ಮೇಷ್ಟ್ರು ಮೆಲುಧ್ವನಿಯಲ್ಲಿ ಹಸನ್ಮುಖರಾಗಿ ಪಾಠಮಾಡಿದರೂ ಸ್ಪಷ್ಟವಾಗಿ ಕೇಳುತ್ತದೆ. ಡ್ರಾಮಾ ಥಿಯೇಟರ್‌ಗಳಲ್ಲಿ ಇರುವಂತೆ “ಬೀಸಣಿಗೆ’- ಹ್ಯಾಂಡ್ ಫ್ಯಾನ್ ಆಕಾರದಲ್ಲಿ ಎದುರು ಬದಿರು ಗೋಡೆಗಳು ಒಂದು ಕೋನದಲ್ಲಿದಲ್ಲಿರುವುದರಿಂದ ಪ್ರತಿಧ್ವನಿ ಕಡಿಮೆಯಾಗಿ ಶಬ್ಧಗ್ರಹಿಕೆ ಉತ್ತಮವಾಗಿದೆ. ಇದೇ ಕಟ್ಟುವಿಕೆಯ ತಂತ್ರ ಪ್ರಪಂಚದ ಅತ್ಯುತ್ತಮ ನಾಟಕಗಳ ಮಂದಿರಗಳಲ್ಲಿದೆ. ಅಲ್ಲಿ ಪ್ರತಿಧ್ವನಿಸುವುದಿಲ್ಲ ಹಾಗೂ ಧ್ವನಿ ಸ್ಪಷ್ಟವಾಗಿ ಕೇಳುತ್ತದೆ. ಇದರಿಂದಾಗಿ ಉಚ್ಛಾರಣೆಯೂ ಉತ್ತಮವಾಗಲು ಸಹಕಾರಿ. ಈ ಶಾಲೆಯ ಎಲ್ಲ ಕೋಣೆಗಳೂ ಅಕಾಸ್ಟಿಕ್ ಡಿಸೈನ್ ಹೊಂದಿವೆ. ಗೋಡೆಗಳು ಎದರುರುಬದಿರು ಇರದೆ ಒಂದು ಕೋನದಲ್ಲಿವೆ. ಜೊತೆಗೆ ಮಾಮೂಲಿ ನಾಲ್ಕು ಮೂಲೆಗಳ ಕೋಣೆಗಳ ಬದಲಿಗೆ ಈ ಶಾಲೆಯ ಪ್ರತಿ ಕೋಣೆಗಳಲ್ಲಿ ಆರು ಮುಲೆಗಳಿದ್ದು, ಮೂರು ಗೋಡೆಗಳು ಧ್ವನಿ ಪ್ರತಿಫಲಿಸದಂತೆ ತಡೆಯಲು ಉಬ್ಬಿದಂತೆ “ಕಾನ್‌ವೆಕ್ಸ್’ ಆಗಿ ಇವೆ. ಈ ಮಾದರಿಯ ಗೋಡೆಗಳು ಧ್ವನಿಯನ್ನು ಎಲ್ಲಿಬೇಕೋ ಅಲ್ಲಿ ಪ್ರಸರಿಸಿ, “ಬ್ಯಾಕ್‌ಗ್ರೌಂಡ್ ನಾಯ್ಸ’ -ಅನಗತ್ಯ ಶಬ್ದವನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತಾರೆ ಶಾಲೆಯ ಕಟ್ಟಡ ವಿನ್ಯಾಸ ಮಾಡಿದ ಕೆ. ಜಯರಾಮ್. ಕಣ್ಣೇ ಸಿಸಿ ಟೀವಿ
ಮಾಮೂಲಿ ಶಾಲೆಗಳಲ್ಲಿ ಕೋಣೆಯ ಒಳಪ್ರವೇಶ ಕಾರಿಡಾರ್ ಮೂಲಕ ಆಗುವುದರಿಂದ, ಮೇಷ್ಟ್ರು ಬಾಗಿಲಿನ ಬಳಿಗೆ ಬಂದು ಇಣುಕಿನೋಡುವವರೆಗೂ ಒಳಗೆ ಏನು ಆಗುತ್ತಿರುತ್ತದೆ ಎಂಬುದು ತಿಳಿಯುವುದಿಲ್ಲ! ಸಾಮಾನ್ಯವಾಗಿ ಯಾವ ಸಾರ್ವಜನಿಕ ಸ್ಥಳ ಹೊರಗಿನಿಂದ ನೋಡಲು ಹಾಗೂ ಒಳಗಿನಿಂದ ಹೊರಗೆ ನೋಡಿಕೊಳ್ಳಲೂ ಸುಲಭಸಾಧ್ಯ ಆಗಿರುತ್ತದೋ ಅಂಥ ಸ್ಥಳಗಳು ಹೆಚ್ಚು ಸುರಕ್ಷಿತ ಎನ್ನಬಹುದು. ನಾಗತಿಹಳ್ಳಿ ಶಾಲೆಯಲ್ಲಿ ಕಾಲಿಡುತ್ತಿದ್ದಂತೆ ಬಹುತೇಕ ಎಲ್ಲ ಕೋಣೆಗಳು ಗೋಚರವಾಗುತ್ತವೆ. ಹೀಗಾಗಿ ಮಕ್ಕಳ ಮೇಲೆ ಕಣ್ಣಿಡಲು ಮುಖ್ಯೋಪಾಧ್ಯಾಯರಿಗೂ ಸುಲಭ ಸಾಧ್ಯ. ಪರಿಸರ ಪ್ರೇಮಿ ಕಟ್ಟಡ
ಈ ಶಾಲೆಯ ಕಟ್ಟಡವನ್ನು ನೈಸರ್ಗಿಕವಾಗಿಯೇ “ಏರ್ ಕಂಡಿಷನ್’ ಇರುವಂತೆ ವಿನ್ಯಾಸ ಮಾಡಲಾಗಿದೆ. ಇಲ್ಲಿ ಗಾಳಿ ಬೆಳಕು ಧಾರಾಳವಾಗಿದೆ. ಹೀಗಾಗಿ ಬೇಸಿಗೆಯಲ್ಲಿ ತರಗತಿಗಳೆಲ್ಲವೂ ತಂಪಾಗಿರುವ ಹಾಗೆಯೇ ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಇದಕ್ಕಾಗಿ ಕಿಟಕಿಗಳ ಸ್ಥಳ ವಿನ್ಯಾಸವನ್ನು ವಿಶೇಷವಾಗಿ ರೂಪಿಸಿ ಕ್ರಾಸ್ ವೆಂಟಿಲೇಷನ್ – (ಗಾಳಿ ಅಡ್ಡ ಹಾಯುವಂತೆ) ಮಾಡಲಾಗಿದೆ. ಮಾಮೂಲಿ ಇಟ್ಟಿಗೆ ಬದಲಿಗೆ ಪರಿಸರ ಸ್ನೇಹಿ ಜೇಡಿಮಣ್ಣಿನ ಠೊಳ್ಳು ಇಟ್ಟಿಗೆಗಳನ್ನು ಬಳಸಿರುವುದರಿಂದ ಶಾಲೆಯ ಹೊರನೋಟ ಬದಲಾಗಿದೆ. ಒಂದು ಕಾಲದಲ್ಲಿ ಶಾಲಾ ಕಟ್ಟಡಗಳು ಆಯಾ ಪ್ರದೇಶದ ಅತಿ ಉತ್ತಮ ಹಾಗೂ ಸುಂದರವಾದ ನಿರ್ಮಿತಿಗಳಾಗಿರುತ್ತಿದ್ದವು. ಇಂದಿಗೂ ಅನೇಕ ಕಲ್ಲಿನಲ್ಲಿ ಕಟ್ಟಿದ, ಗಡಿಯಾರಗೋಪುರ ಹೊಂದಿದ ಕಟ್ಟಡಗಳು ಎಪ್ಪತ್ತು, ಎಂಭತ್ತು ವರ್ಷಗಳ ಹಿಂದಿನಿಂದ ಗಟ್ಟಿ ಮುಟ್ಟಾಗಿರುವುದನ್ನು ನೋಡಬಹುದು. ನಾಗತಿಹಳ್ಳಿಯ ಶಾಲೆಯ ವಿನ್ಯಾಸ ಕೂಡ ಇಂಥದೇ ತಂತ್ರಗಳನ್ನು ಬಳಸಿ ನಿರ್ಮಿತವಾಗಿದೆ. ಸರ್ಕಾರಿಶಾಲೆಯನ್ನು, ಸರ್ಕಾರಿ ದುಡ್ಡಲ್ಲೇ ಹೀಗೂ ಕಟ್ಟಬಹುದು ಅನ್ನೋದಕ್ಕೆ ಇದು ಮಾದರಿ. ಕೆ.ಜಿ