Advertisement

ಪ್ರವಾಹ ಸಂತ್ರಸ್ತರಿಗೆ ನಾಗತಿಹಳ್ಳಿ ನೆರವು

03:51 PM Nov 15, 2020 | Suhan S |

ಕಲಬುರಗಿ: ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಭೀಮಾ ನದಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ನೆರವು ಕಲ್ಪಿಸಿ ಅವರೊಂದಿಗೆ ನ.15ರಂದು ದೀಪಾವಳಿ ಹಬ್ಬ ಆಚರಿಸಲಿದ್ದಾರೆ.

Advertisement

ತಮ್ಮ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಟೆಂಟ್‌ ಸಿನಿಮಾ ಶಾಲೆ ವತಿಯಿಂದ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ್ದು, ಜೇವರ್ಗಿ ತಾಲೂಕಿನ ಇಟಗಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ಶನಿವಾರ ನಗರಕ್ಕೆ ಆಗಮಿಸಿದ ಅವರು, ಪ್ರವಾಹ ಸಂತ್ರಸ್ತರ ದುಃಖದಲ್ಲಿ ಭಾಗಿಯಾಗಿ ನಮ್ಮ ಕೈಲಾದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾ ಪ್ರವಾಹದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಹಾನಿ ಸಂಭವಿಸಿದೆ. ಅದನ್ನು ಕಟ್ಟಿಕೊಡಲು ನಮ್ಮಿಂದ ಸಾಧ್ಯವಿಲ್ಲ.ಆದರೂ, ಪ್ರವಾಹ ಸಂತ್ರಸ್ತರಿಗೆ ಆದಷ್ಟು ನೆರವು ನೀಡುವುದರೊಂದಿಗೆ ಅಲ್ಲಿನ ಜನರಿಗೆ ದೀಪಾವಳಿ ಆಚರಿಸಲಾಗುವುದು ಎಂದರು.

ನಮ್ಮ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಮತ್ತುಟೆಂಟ್‌ ಸಿನಿಮಾ ಶಾಲೆ ವತಿಯಿಂದ ನೆರವು ಸಂಗ್ರಹಿಸಿದ್ದೇವೆ. ಶಿಕ್ಷಕರು, ಕಲಾವಿದರು,ವಿದ್ಯಾರ್ಥಿಗಳು, ಸ್ನೇಹಿತರನ್ನು ಒಳಗೊಂಡು ಸಣ್ಣ ನೆರವು ನೀಡಲು ಬಂದಿದ್ದೇವೆ. ಸಂತ್ರಸ್ತರಿಗೆ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ದೀಪ, ಮಕ್ಕಳಿಗೆಓದುವ-ಬರೆಯುವ ಸಲಕರಣೆಗಳನ್ನು ವಿತರಿಸಿ ಸಿಹಿ ಹಂಚಿ, ದೀಪಾವಳಿ ಆಚರಿಸಲಾಗುವುದು ಎಂದು ಹೇಳಿದರು.

ಪ್ರಕೃತಿ ವಿಕೋಪ ಎಚ್ಚರಿಕೆ ಅಗತ್ಯ: ಪ್ರಕೃತಿ ವಿಕೋಪಗಳು ಬಹುದೊಡ್ಡ ಹಾನಿ ತಂದೊಡ್ಡುತ್ತವೆ. ಬೇರೆ-ಬೇರೆ ಕಡೆಗಳಲ್ಲಿ ಅದನ್ನು ಅರಿತುಕೊಂಡು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಆದರೆ, ನಮ್ಮಲ್ಲಿ ಮುಂಚಿತವಾಗಿಯೇ ಅರಿತುಕೊಳ್ಳುವಲ್ಲಿ ನಾವುವಿಫಲರಾಗುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪ್ರಕೃತಿ ಹಾನಿಯನ್ನು ನಾವು ಪದೇ-ಪದೇ ನೋಡುತ್ತಿದ್ದೇವೆ. ಆದರೆ, ಇದರಿಂದ ಪಾಠ ಕಲಿತು ಸುಧಾರಿಸುತ್ತಿದ್ದೇವೆ ಅನಿಸುತ್ತಿಲ್ಲ. ಇದು ಆದ್ಯತೆಯ ಪ್ರಶ್ನೆಯೋ ಅಥವಾ ಅಧ್ಯಯನ ಕೊರತೆಯೋತಿಳಿಯುತ್ತಿಲ್ಲ. ಇಂತಹ ಸಂಕಷ್ಟದಿಂದ ಪಾರಾಗಲುಪ್ರವಾಹ, ಅತಿವೃಷ್ಟಿ, ಬರದಂತಹ ವಿಕೋಪಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮತ್ತು ಅರಿವು ಅಗತ್ಯವಾಗಿದೆ ಎಂದರು.

ಈ ಹಿಂದೆ ಕೊಡಗಿನಲ್ಲಿ ಪ್ರವಾಹ ಉಂಟಾಗಿತ್ತು. ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ಈಗಕಲ್ಯಾಣ ಕರ್ನಾಟಕ ಭಾಗದ ಪ್ರವಾಹದಿಂದ ಹಾನಿ ಸಂಭವಿಸಿದೆ. ಸಂತ್ರಸ್ತರಿಗೆ ಹಲವರು ನೆರವಾಗುತ್ತಿದ್ದಾರೆ. ಬೆಂಗಳೂರು-ಕಲಬುರಗಿ ಭೌಗೋಳಿಕವಾಗಿ ಮಾತ್ರ ದೂರ ಇವೆ. ನನಗೆವೈಯಕ್ತಿಕವಾಗಿ ಆ ಭಾಗ-ಈ ಭಾಗ ಎಂಬ ಮಾನಸಿಕಅಂತರ ಇಲ್ಲ ಎಂದರು. ಮಹಿಪಾಲರೆಡ್ಡಿ ಮುನ್ನೂರ, ಸುಜಾತಾ ಜಂಗಮಶೆಟ್ಟಿ, ಪ್ರಕಾಶ ಹರಕೋಡೆ, ಪರಮೇಶ್ವರ, ಸಂತೋಷ ಇದ್ದರು.

ದಾನ ಮನಸ್ಥಿತಿ ಬದಲಾಗಲಿ : ಸಂಕಷ್ಟದಲ್ಲಿರುವ ಜನರಿಗೆ ನೆರವು, ದಾನ ನೀಡುವುದು ಒಂದು ಉತ್ತಮ ಕಾರ್ಯ. ಆದರೆ, ಬದಲಾದ ಸನ್ನಿವೇಶದಲ್ಲಿ ದಾನವನ್ನು ಅನುಮಾನದಿಂದ ನೋಡುವಂತೆ ಆಗಿದೆ. ದಾನ ಕೊಡುವುದು ಮತ್ತು ಸ್ವೀಕರಿಸುವುದು, ಕೇಳುವುದರ ಬಗ್ಗೆಯೂ ಅನಮಾನ ಮೂಡಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ ನುಡಿದರು. ದಾನ ಜೀವವಾದ ಸಂತ್ರಸ್ತರಿಗೆ ತಲುಪುವುದೋ, ಸ್ವಾರ್ಥಕ್ಕೆ ಬಳಕೆಯಾಗುವುದೋ ಎಂದು ತಿಳಿಯದೆ ಇಂತಹ ಅನುಮಾನ ಮೂಡಲು ಕಾರಣವಾಗಿರಬಹುದು. ಬಟ್ಟೆ ದಾನ ಮಾಡಿ ಎಂದರೆ, ಮನೆಯಲ್ಲಿ ತಾವು ತೊಡದ ಬಟ್ಟೆ ಕೊಡಲಾಗುತ್ತದೆ. ಬೇಡವಾದ ವಸ್ತುಗಳನ್ನು ಕೊಡುವುದು ದಾನವಲ್ಲ, ಅದು ಮನೆ ಸ್ವತ್ಛ ಮಾಡಿಕೊಳ್ಳಲು ನೆಪವನ್ನಾಗಿ ಪರಿಭಾವಿಸಲಾಗಿದೆ ಎಂದರು.

ಕಲಬುರಗಿಗೆ ಅನೇಕಬಾರಿ ಸಾಂಸ್ಕೃತಿಕ ಕಾರಣಕ್ಕಾಗಿ ಭೇಟಿ ಕೊಟ್ಟಿದ್ದೇನೆ. ಆದರೆ, ಇದು ಭಿನ್ನ ಹಾಗೂ ಹೃದಯಕ್ಕೆ ಹತ್ತಿರವಾದ ಭೇಟಿಯಾಗಿದೆ.ಈ ಭೇಟಿ ಪ್ರವಾಹ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿ, ಅವರಲ್ಲಿ ಜೀವನದ ಭರವಸೆ ತುಂಬುವ ಸಣ್ಣ ಪ್ರಯತ್ನ ಮಾಡುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ, ಚಲನಚಿತ್ರ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next