ಹುಬ್ಬಳ್ಳಿ: ಒಂದುವರೆ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿದ, ವರನಟ ಡಾ| ರಾಜಕುಮಾರ ಈಜಿದ್ದರೆಂದು ಹೇಳಲಾಗುವ ಇಲ್ಲಿನ ನಾಗಶೆಟ್ಟಿಕೊಪ್ಪದ ಕೆರೆ ಪುನರುಜ್ಜೀವನಕ್ಕೆ ಕಾಯ್ದು ಕುಳಿತಿದೆ. ತಾವು ಪ್ರತಿನಿಧಿಸುವ ಕ್ಷೇತ್ರದ ಕೆರೆಗೆ ಸಚಿವ ಜಗದೀಶ ಶೆಟ್ಟರ ಕಾಯಕಲ್ಪ ಕಲ್ಪಿಸುವರೇ ಎಂಬ ನಿರೀಕ್ಷೆ ಸ್ಥಳೀಯರದ್ದಾಗಿದೆ.
ನಾಗಶೆಟ್ಟಿಕೊಪ್ಪ ಕೆರೆ ಇಂದು ಕೊಳಚೆ ಗುಂಡಿಯಾಗಿದೆ. ಕೆರೆಯ ತುಂಬೆಲ್ಲಾ ಕಸ, ತ್ಯಾಜ್ಯ, ಗಿಡ ಗಂಟಿ ಬೆಳೆದುಕೊಂಡಿದೆ. ಸತ್ತ ಸಣ್ಣಪುಟ್ಟ ಪ್ರಾಣಿಗಳು, ತ್ಯಾಜ್ಯ, ಕಸ ಹಾಗೂ ಸುತ್ತಲೂ ಇರುವ ಮನೆಗಳ ಹೊಲಸು ನೀರು ಕೆರೆಗೆ ಸೇರಿ ಕೊಳಚೆ ನೀರು ಸಂಗ್ರಹ ತಾಣವಾಗಿದೆ. ದುರ್ವಾಸನೆ, ಸಂಜೆಯಾದರೆ ಸೊಳ್ಳೆ, ವಿಷ ಜಂತುಗಳ ಕಾಟ ಹಾಗೂ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿದೆ. ನಿರ್ಲಕ್ಷ್ಯ ಹಾಗೂ ಸಮರ್ಪಕ ಯೋಜನೆ ಕೊರತೆಯ ಫಲವಾಗಿ ಜಲಮೂಲ ಸ್ಥಳೀಯರಿಗೆ ಶಾಪವಾಗಿ ಪರಿಣಿಮಿಸಿದೆ. ಕೆರೆ ಅಭಿವೃದ್ಧಿಗೊಳಿಸಿ ಉದ್ಯಾನ, ವಾಯುವಿಹಾರಕ್ಕೆ ವ್ಯವಸ್ಥೆ ಸೇರಿದಂತೆ ಸುಂದರೀಕರಣ ಭರವಸೆ ಹಾಗೇ ಉಳಿದುಕೊಂಡಿದೆ.
ವ್ಯರ್ಥ್ಯ ಪ್ರಯತ್ನ: ಸ್ಥಳೀಯರ ಮನವಿ, ಹೋರಾಟದ ಫಲವಾಗಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ 2012ರಲ್ಲಿ ಕೆರೆ ಅಭಿವೃದ್ಧಿ ಪ್ರಯತ್ನವೊಂದು ನಡೆಯಿತು. ಸಮರ್ಪಕವಾಗಿ ಪೂರ್ಣಗೊಂಡಿದ್ದರೆ ಇದು ಮಾದರಿ ಕೆರೆಯಾಗಿರುತ್ತಿತ್ತು. ಆದರೆ ಎಲ್ಲವೂ ಅರ್ಧಂಬರ್ಧ ಮಾಡಿ ಕೈ ತೊಳೆದುಕೊಂಡ ಪರಿಣಾಮ ಹಿಂದಿನ ಸ್ಥಿತಿಗೆ ತಲುಪಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಕಾಲುಭಾಗ ಮಾತ್ರ ತಡೆಗೋಡೆ ನಿರ್ಮಿಸಿ ಕೈಚೆಲ್ಲಿರುವುದು ಅತಿಕ್ರಮಣಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ. ಮಹಾನಗರದ ವಿವಿಧ ಕೆರೆಗಳಿಗೆ ಹೋಲಿಸಿದರೆ ಇದು ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆಯ ಕೂಗಳತೆ ದೂರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸಗಳಿವೆ. ಇಚ್ಛಾಶಕ್ತಿ ತೋರಿ ಕೆರೆ ಒತ್ತುವರಿ ತೆರವು ಮಾಡಿ ಅಭಿವೃದ್ಧಿಗೆ ಮುಂದಾಗಬೇಕಿದೆ.
ಭರವಸೆ ಈಡೇರಿಸುತ್ತಾರಾ? : 2012ರಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಜಗದೀಶ ಶೆಟ್ಟರ ಕೆರೆಯ ಬಗ್ಗೆ ಕಾಳಜಿ ತೋರಿದ್ದರು. ಇದೀಗ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಸ್ಥಳೀಯರಲ್ಲಿ ನಿರೀಕ್ಷೆ ಮೂಡಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೆರೆ ಅಭಿವೃದ್ಧಿ ಮಾಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದು, ಕೆರೆ ಅಭಿವೃದ್ಧಿಯಾದೀತು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಐತಿಹಾಸಿಕ ಹಾಗೂ ಸುತ್ತಲಿನ ಪ್ರದೇಶಗಳಿಗೆ ಜಲಮೂಲವಾಗಿರುವ ಕೆರೆ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ.
ಕೆರೆ ಐತಿಹಾಸಿಕ ಹಿನ್ನೆಲೆ : ವ್ಯಾಸರಾಯರು 1850ರ ಸುಮಾರಿಗೆ ಶ್ರೀ ಮಾರುತಿ ದೇವಸ್ಥಾನ ಸ್ಥಾಪನೆ ಮಾಡಿ ವಾಸ್ತು ರೂಪದಲ್ಲಿ ಕೆರೆ ನಿರ್ಮಿಸಿದ್ದರು ಎಂಬುದು ಜನರ ಅನಿಸಿಕೆ. ಸುಮಾರು 3.19 ಎಕರೆ ವಿಸ್ತೀರ್ಣದ ಈ ಕೆರೆ ಒಂದು ಕಾಲದಲ್ಲಿ ಬೆಂಗೇರಿ, ಕೇಶ್ವಾಪುರ, ಗೌಳಿಗಲ್ಲಿಗೆ ನೀರು ಒದಗಿಸುವ ಮೂಲವಾಗಿತ್ತು. ಹಿಂದೆ ಗುಬ್ಬಿ ವೀರಣ್ಣ ಅವರ ನಾಟಕ ಕಂಪೆನಿ ಬಂದ ಸಂದರ್ಭದಲ್ಲಿ ವರನಟ ಡಾ| ರಾಜಕುಮಾರ ಈ ಕೆರೆಯಲ್ಲಿ ಈಜಿದ್ದರು ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ ಮಹಾನಗರ ಪಾಲಿಕೆ ನಿರ್ಲಕ್ಷ್ಯ ಹಾಗೂ ಸ್ಥಳೀಯರ ಬೇಜವಾಬ್ದಾರಿ, ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆತನದಿಂದ ಐತಿಹಾಸಿಕ ಕೆರೆ ಒತ್ತುವರಿಯಾಗಿದ್ದು, ಕೊಳಚೆ ಗುಂಡಿಯಾಗಿದೆ.
ಒಗ್ಗಟ್ಟಿನ ಕೊರತೆ- ರಾಜಕಾರಣದ ವಕ್ರದೃಷ್ಟಿ! : ಕೆರೆ ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯರಲ್ಲಿ ಒಮ್ಮತದ ಅಭಿಪ್ರಾಯ ಇಲ್ಲದಿರುವುದು ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. 2012-13ರಲ್ಲಿ ಪಾಲಿಕೆ ವತಿಯಿಂದ ಕೆರೆ ಸ್ವಚ್ಛತೆಗೆ ಸ್ಥಳೀಯರಿಂದ ಪಡೆದ ಟ್ರಾಕ್ಟರ್ ಬಾಡಿಗೆ ನೀಡದೆ ಕೈ ಎತ್ತಿದ ಘಟನೆ ನಡೆದಿದೆ. ಹೀಗಾಗಿ ಕೆರೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಚರ್ಚೆಯಾದರೂ ಹಿಂದಿನ ಬಾಕಿ ನೀಡುವ ಕುರಿತು ಮಾತುಗಳು ಕೇಳಿಬರುವುದರಿಂದ ಯಾರೂ ಇದರ ಉಸಾಬರಿಗೆ ಹೋಗುತ್ತಿಲ್ಲ. ಇತ್ತೀಚೆಗೆ ಪ್ರತಿಷ್ಠಾನವೊಂದರ ಮೂಲಕ ಅಭಿವೃದ್ಧಿಗೆ ಮುಂದಾಗುತ್ತಿದ್ದಂತೆ ಸ್ಥಳೀಯ ರಾಜಕಾರಣ ಅಡ್ಡಿಯಾಯಿತು.
ಉಳಿದಿರುವ ಸುಮಾರು 2 ಎಕರೆ ಜಾಗದ ಮೇಲೆ ರಿಯಲ್ ಎಸ್ಟೇಟ್ ವಕ್ರದೃಷ್ಟಿ ಬಿದ್ದಿರುವುದು ಅಭಿವೃದ್ಧಿಗೆ ತೊಡಕಾಗಿದೆ ಎನ್ನುವ ಮಾತುಗಳಿವೆ. ಕೆರೆ ಅಭಿವೃದ್ಧಿಗೆ ಸಂಬಂಧಿಸಿ ಎಲ್ಲರೂ ಒಟ್ಟಾಗಿ ಬನ್ನಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೆರೆ ಅಭಿವೃದ್ಧಿ ಮಾಡುವುದಾಗಿ ಸಚಿವ ಜಗದೀಶ ಶೆಟ್ಟರ ಅವರು ಭರವಸೆ ನೀಡಿದ್ದಾರೆ ಎನ್ನುವ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಐತಿಹಾಸಿಕ ಕೆರೆ ಸಂರಕ್ಷಿಸುವ ನಿಟ್ಟಿನಲ್ಲಿ ಹಿಂದಿನ ಪ್ರಯತ್ನಗಳು ಯಶಸ್ವಿಯಾಗದ ಪರಿಣಾಮ ಅದೇ ಸ್ಥಿತಿಗೆ ತಲುಪಿದೆ. ಬೇರೆ ಕೆರೆಗಳಿಗೆ ಹೋಲಿಸಿದರೆ ಈ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಿಂದೆ ಜಗದೀಶ ಶೆಟ್ಟರ ಅವರು ಅಭಿವೃದ್ಧಿಗೆ ಮುಂದಾಗಿದ್ದರು. ಇದೀಗ ಸಚಿವರಾಗಿರುವುದರಿಂದ ಅವರಿಗೆ ಮನವಿ ಮಾಡಿ ಅಭಿವೃದ್ಧಿಗೆ ಒತ್ತಾಯ ಮಾಡುತ್ತೇವೆ. –
ನಿಂಗಪ್ಪ ಕನ್ನಮ್ಮನವರ, ಸ್ಥಳೀಯ
-ಹೇಮರಡ್ಡಿ ಸೈದಾಪುರ