ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ “ಅಮರ್’ ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ “ಅಮರ್’ ಸಿನಿ ಜರ್ನಿಯನ್ನು ತೆರೆದಿಟ್ಟಿತು. ಇದೇ ವೇಳೆ ಮಾತನಾಡಿದ ನಿರ್ದೇಶಕ ನಾಗಶೇಖರ್, “ಇದೊಂದು ಪಕ್ಕಾ ಲವ್‌ಸ್ಟೋರಿ ಸಿನಿಮಾವಾಗಿದೆ. ಸ್ಕ್ರೀನ್ ಮೇಲೆ ಅಭಿಷೇಕ್-ತಾನ್ಯಾ ಹೋಪ್ ಜೋಡಿಯನ್ನ ನೋಡುತ್ತಿದ್ದರೆ, ರವಿಚಂದ್ರನ್-ಜೂಹಿ ಚಾವ್ಲಾ ಜೋಡಿ ನೆನಪಿಗೆ ಬರುತ್ತದೆ. ಚಿತ್ರದಲ್ಲಿ ಅಂಬರೀಶ್ ಪ್ರಭಾವ ಜಾಸ್ತಿಯಿದೆ. ಯಾಕಂದ್ರೆ ಸಿನಿಮಾ ಮಾಡುವಾಗ ಮಗನ ವೀಕ್ನ್ ಸ್ ಏನು ಅನ್ನೋದನ್ನು ತಿಳಿಸಿಕೊಟ್ಟಿದ್ರು. ವಾಕಿಂಗ್ ಸ್ಟೈಲ್ ಬದಲಾಯಿಸು ಜೊತೆಗೆ ಆದಷ್ಟು ನಟನೆಯನ್ನು ಚೆನ್ನಾಗಿ ಮಾಡಿಸು ಅಂತೆಲ್ಲಾ ಹೇಳಿದ್ರು. ಚಿತ್ರಕ್ಕಾಗಿ ಸುಮಲತಾ ಅಂಬರೀಶ್ ಕೂಡ ಒಳ್ಳೆಯ ಸಹಕಾರ ನೀಡಿದ್ದಾರೆ. ಸಿನಿಮಾದ ಆರಂಭದಲ್ಲೇ ಅಂಬಿಯ ಡೈಲಾಗ್ ನೋಡುಗರಿಗೆ ಸಖತ್ ಮಜಾ ನೀಡಲಿದೆ. ಇನ್ನು ಚಿತ್ರದ ಹಾಡೊಂದಕ್ಕೆ ರಜನಿಕಾಂತ್, ಮೋಹನ್ ಬಾಬು, ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡ ಸ್ಟಾರ್‌ಗಳನ್ನು ಒಟ್ಟುಗೂಡಿಸಿ ತೆರೆಮೇಲೆ ತರುವ ಆಸೆಯಿತ್ತು. ಆದರೆ ಅಂಬರೀಶ್ ನಿಧನದಿಂದಾಗಿ ಆ ಪ್ಲಾನ್ ಎಲ್ಲಾ ಬದಲಾಯಿತು’ ಎಂದರು.
“ಅಮರ್’ ಚಿತ್ರವನ್ನು ಸುಮಾರು 87 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಬೆಂಗಳೂರು, ಮಂಗಳೂರು, ಮಣಿಪಾಲ್, ಊಟಿ, ಕೊಯಮತ್ತೂರು, ಸ್ವಿಡ್ಜರ್‌ಲ್ಯಾಂಡ್, ಮಲೇಷಿಯಾ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಅಭಿಷೇಕ್, ತಾನ್ಯ ಹೋಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಉಳಿದಂತೆ ದೇವರಾಜ್, ಅರುಣ್ ಸಾಗರ್, ಚಿಕ್ಕಣ್ಣ, ಸಾಧುಕೋಕಿಲಾ, ಸುಧಾರಾಣಿ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರೂಪ್ ಭಂಡಾರಿ, ರಚಿತಾ ರಾಮ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು “ಅಮರ್’ 90ರ ದಶಕದ ಪಂಚಭಾಷಾ ನಟಿಯೊಬ್ಬರ ಜೀವನ ಆಧಾರಿತ ಚಿತ್ರ ಎಂದು ಹೇಳಲಾಗುತ್ತಿದ್ದು, ಆ ನಟಿ ಯಾರು ಎನ್ನುವುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಬರುವ ಕೊಡವ ಹಾಡು. ಇಲ್ಲಿಯವರೆಗೆ ಕನ್ನಡ ಚಿತ್ರಗಳಲ್ಲಿ ಹಾಡುಗಳ ಒಂದೆರಡು ಸಾಲುಗಳಲ್ಲಿ ಕೊಡವ ಹಾಡನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ “ಅಮರ್’ ಚಿತ್ರದಲ್ಲಿ ಕೊಡವ ಭಾಷೆಯ ಒಂದು ಹಾಡನ್ನು ಪೂರ್ಣವಾಗಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡಿನಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಹೆಜ್ಜೆ ಹಾಕಿದ್ದು, ಇತ್ತೀಚೆಗೆ ಈ ಹಾಡಿನ ಲಿರಿಕಲ್ ವಿಡಿಯೋ ಕೂಡ ರಿಲೀಸ್ ಆಗಿದೆ. ಅಂದಹಾಗೆ, “ಅಮರ್’ ಚಿತ್ರ ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕದ ಹೊರಭಾಗ ಸುಮಾರು 60 ಕಡೆಗಳಲ್ಲಿ ಬಿಡುಗಡೆಯಾಗುತ್ತಿದೆ. ಜೂನ್ ಮೊದಲವಾರ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ ಎನ್ನುವುದು ಚಿತ್ರತಂಡ ನೀಡಿದ ಮಾಹಿತಿ. ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರದ ನಾಯಕ ನಟ ಅಭಿಷೇಕ್, ನಾಯಕಿ ತಾನ್ಯಾ ಹೋಪ್, ನಿರ್ಮಾಪಕ ಸಂದೇಶ್. ಎನ್, ಛಾಯಾಗ್ರಹಕ ಸತ್ಯ ಹೆಗಡೆ, ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.