ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಾಡು ಪ್ರಾಣಿ ಬೇಟೆಯಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಅರಣ್ಯಾಧಿಕಾರಿಗಳು ಕೃತ್ಯಕ್ಕೆ ಬಳಸಿದ್ದ ಕಾರು, ಪರಿಕರ ಹಾಗೂ ಪ್ರಾಣಿ ಮಾಂಸ, ಚರ್ಮ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸೂಳಗೋಡು ಗ್ರಾಮದ ಲೇ.ಚಂಗಪ್ಪರ ಪುತ್ರ ಮೋಕ್ಷಿತ್ ಬಂಧಿತ ಆರೋಪಿ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಆಗಿದ್ದಿಷ್ಟು:ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆಚೌಕೂರು ವನ್ಯಜೀವಿ ವಲಯದ ದೇವಮಚ್ಚಿ ಶಾಖೆಯ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ ಸಿಬಂದಿ ಗಸ್ತಿನಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ಆರೋಪಿಯನ್ನು ಬಂಧಿಸಿ, ವೇಳೆ 12 ಕೆ.ಜಿ.ಯಷ್ಟು ಕಾಡು ಪ್ರಾಣಿ ಮಾಂಸ, ಜಿಂಕೆ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದು, ಆರೋಪಿಯು ಪಕ್ಕದ ಹಾಡಿ ಬಳಿ ನಿಲ್ಲಿಸಿದ್ದ ಆತನ ಮಾರುತಿ-800 ಕಾರನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.
ಕಾರ್ಯಾಚರಣೆಯು ಡಿಸಿಎಫ್ ಮತ್ತು ಎಸಿಎಫ್ ದಯಾನಂದ್ ಡಿ.ಎಸ್. ಮಾರ್ಗದರ್ಶನದಲ್ಲಿ ಆರ್.ಎಫ್.ಓ.ದಿಲೀಪ್‌ಕುಮಾರ್.ಪಿ.ಸಿ, ಡಿ.ಆರ್.ಎಫ್.ಓಗಳಾದ ಎಂ.ಸಿದ್ದಪ್ಪಾಜಿ, ವಿನೋದ್‌ಕುಮಾರ್, ಅರಣ್ಯ ರಕ್ಷಕ ನಿತಿನ್‌ನಾಯ್ಕ, ಅರಣ್ಯ ವೀಕ್ಷಕ ಶಿವಕುಮಾರ್, ಸಿಬಂದಿ ಭಾಗವಹಿಸಿದ್ದರು.