ಎಚ್.ಡಿ.ಕೋಟೆ: ಪ್ರಸಕ್ತ ಸಾಲಿನಲ್ಲಿ ಮುಂಗಾರು 2 ತಿಂಗಳು ಇರುವಂತೆಯೇ ಮಳೆ ಆರಂಭಗೊಂಡಿದ್ದು, ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿನ ಅಪಾರ ಪ್ರಮಾಣದ ಸಸ್ಯ ಸಂಪತ್ತು, ವನ್ಯಜೀವಿಗಳಿಗೆ ಜೀವಕಳೆ ಬಂದಿದೆ.
ಅಲ್ಲದೆ, ಕಾಡ್ಗಿಚ್ಚು, ದುಷ್ಕರ್ಮಿಗಳು ಹಾಕುವ ಬೆಂಕಿ ಅವಘಡಗಳಿಗೆ ಕಡಿವಾಣ ಬಿದ್ದಂತೆ ಆಗಿದೆ. ತಾಲೂಕು ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನ ವನ್ಯಜೀವಿ ಅರಣ್ಯದಿಂದ ಆವೃತ್ತವಾಗಿದೆ. ತಾಲೂಕು ಬಹುತೇಕ ಅರಣ್ಯದಿಂದ ಆವೃತ್ತವಾಗಿದೆ. ಈ ವನಸಿರಿಯ ನಾಡು ಏಷ್ಯಾಖಂಡ ದಲ್ಲಿಯೇ ಹೆಚ್ಚು ಹುಲಿಗಳನ್ನು ಹೊಂದಿರುವ ತಾಲೂಕು ಅನ್ನುವ ಕೀರ್ತಿಗೂ ಪಾತ್ರವಾಗಿದೆ.
ಆದರೆ, ಪ್ರತಿವರ್ಷ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆಯೇ ಮರಗಳ ಸಂಘರ್ಷ ಮತ್ತು ಕಿಡಿಗೇಡಿಗಳ ದುಷ್ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು, ವನ್ಯಜೀವಿಗಳ ಜೀವಕ್ಕೂ ಸಂಚಕಾರ ಒದಗುತ್ತಿತ್ತು. ಬೆಲೆ ಬಾಳುವ ಮರಗಳು ಬೆಂಕಿಗೆ ಆಹುತಿ ಆಗುತ್ತಿದ್ದವು.
ಕೋಟ್ಯಂತರ ರೂ. ಉಳಿಯಿತು: ಬೇಸಿಗೆ ಕಾಡ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಪ್ರತಿವರ್ಷ ಹರಸಾಹಸ ಪಟ್ಟು ಫೈರ್‌ಲೈನ್ ನಿರ್ವಹಣೆ ಜೊತೆಯಲ್ಲಿ ಬೆಂಕಿ ನಂದಿಸುವ ಕಾಯಕದಲ್ಲಿ ಹಗಲಿರುಳು ಶ್ರಮಿಸುತ್ತಿತ್ತು. ಇದಕ್ಕಾಗಿ ಕೋಟ್ಯಂತರ ರೂ. ಸರ್ಕಾರದ ಅನುದಾನ ವ್ಯಯ ಮಾಡಲಾಗುತ್ತಿತ್ತು.
ಅರಣ್ಯ, ವನ್ಯಜೀವಿಗಳ ರಕ್ಷಣೆ: ಪ್ರತಿವರ್ಷ ಮೇ ಕೊನೆ ವಾರ ಇಲ್ಲವೆ ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭಗೊಳ್ಳುತ್ತಿತ್ತು. ಮಳೆ ಆರಂಭಗೊಳ್ಳುವ ತನಕ ಅರಣ್ಯ ಮತ್ತು ವನ್ಯಜೀವಿಗಳ ಜೀವ ರಕ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯನಿರ್ವಹಿ ಸಬೇಕಾದ ಸ್ಥಿತಿ ಕೂಡ ತಲೆದೂರುತ್ತಿತ್ತು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ, ಏಕೆಂದರೆ, ಮಾ.2ನೇ ವಾರದಲ್ಲಿ ಮುಂಗಾರು ಪೂರ್ವ ಮಳೆ ಆರಂಭಗೊಂಡು ತಾಲೂಕಾದ್ಯಂತ ಅಲ್ಲಲ್ಲಿ ಎರಡು ಮೂರು ಬಾರಿ ಸುರಿದಿದೆ.
ಇದರಿಂದ ಅರಣ್ಯದಲ್ಲಿ ಹಸಿರು ಕಾಣಿಸಿಕೊಂಡಿದೆ. ಅರಣ್ಯ ಮತ್ತು ಪ್ರಾಣಿಗಳ ಸಂಚಕಾರಕ್ಕೆ ತಡೆ ಹಿಡಿದಿರುವುದು ಪ್ರಾಣಿ ಪ್ರಿಯರಲ್ಲಷ್ಟೇ ಅಲ್ಲದೆ, ಸರ್ಕಾರ ಹಾಗೂ ಅರಣ್ಯ ಇಲಾಖೆ ನೆಮ್ಮದಿ ನಿಟ್ಟುಸಿರು ಬಿಡುವಂತೆ ಆಗಿದೆ.
– ಎಚ್.ಬಿ.ಬಸವರಾಜು