Advertisement

ಜಿಲ್ಲಾದ್ಯಂತ ಇಂದು ಸರಳ ನಾಗರ ಪಂಚಮಿ ಆಚರಣೆ

08:16 PM Aug 12, 2021 | Team Udayavani |

ಉಡುಪಿ: ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿಯನ್ನು ಶುಕ್ರವಾರ ಕೊರೊನಾ ನಿಯಮಾವಳಿಯೊಂದಿಗೆ ಸರಳವಾಗಿ ಆಚರಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ.

Advertisement

ಕಳೆದ ವರ್ಷ ಕೊರೊನಾ ಕಾರಣದಿಂದ ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ಸಾರ್ವಜನಿಕ ನಾಗರಪಂಚಮಿಯ ಬದಲು, ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್‌ ಮಾರ್ಗಸೂಚಿಯೊಂದಿಗೆ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಿಸಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವ್ಯಾಪಾರ ಚಟುವಟಿಕೆ ಗರಿಗೆದರಿದೆ.

ವ್ಯಾಪಾರ ಬಿರುಸು:

ಹಿಂಗಾರ, ಸೀಯಾಳ, ಕೆಂದಾಳೆ ವ್ಯಾಪಾರಿಗಳಿಂದ ಹಿಡಿದು ಹುಬ್ಬಳ್ಳಿ, ಚಿಕ್ಕಮಗಳೂರು ಹಾಸನ, ಹಾವೇರಿ,   ತೀರ್ಥಹಳ್ಳಿ, ಕೇರಳ, ತಮಿಳುನಾಡು ಸೇರಿದಂತೆ  ವಿವಿಧೆಡೆಯ ವ್ಯಾಪಾರಿಗಳು ಶ್ರೀಕೃಷ್ಣ ನಗರಿ ಉಡುಪಿಗೆ ಕಾಲಿಟ್ಟಿದ್ದಾರೆ.  ಕೋವಿಡ್‌-19 ಆತಂಕ, ಬಿರುಸುಗೊಂಡಿರುವ ವರುಣನ ಅಬ್ಬರ ನಡುವೆಯೂ ವ್ಯಾಪಾರ ಬಿರುಸುಗೊಂಡಿದೆ.

ಕುಂದಾಪುರ: ಹೂವಿನ ದರ ಏರಿಕೆ :

Advertisement

ಕುಂದಾಪುರ:  ನಾಗರ ಪಂಚಮಿಗೆ ಹೂವಿನ ದರ ಏರಿಕೆ ಬಿಸಿ ಮುಟ್ಟಿದೆ. ಒಂದು ಕಡೆ ಕೊರೊನಾ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಹಬ್ಬ ಆಚರಣೆಯ ಕುರಿತು ಗೊಂದಲ ಇದೆ ಇದೆ. ಇನ್ನೊಂದೆಡೆ ಹಳ್ಳಿಗಳ ಜನ ನಗರದ ಕಡೆ ಬರುವುದು ಕಡಿಮೆಯಾಗಿದೆ. ಈ ಮಧ್ಯೆಯೇ ದರ ಏರಿಕೆ ತಾಪ.

ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಸಾಧಾರಣವಾಗಿ ನಾಗರಪಂಚಮಿ ಸಂದರ್ಭ ಮಳೆ ಇರುತ್ತದೆ. ಅಂತೆಯೇ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯತೊಡಗಿದೆ. ಗುರುವಾರ ಅಪರಾಹ್ನ ವೇಳೆಗೆ ಮಳೆ ಸುರಿಯುವುದಕ್ಕೆ ವಿರಾಮ ಘೋಷಿಸಿತ್ತು.ಆದರ ನಡುವೆ ನಗರದ ಕಡೆಗೆ ಗ್ರಾಮಾಂತರ ಪ್ರದೇಶದಿಂದ ಬರುವ ಜನರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬಸ್‌ಗಳ ಓಡಾಟವೂ ಕಡಿಮೆ ಸಂಖ್ಯೆಯಲ್ಲಿದೆ. ಇದರಿಂದ ಹೂವಿನ ವ್ಯಾಪಾರಿಗಳು ಕಂಗೆಟ್ಟಿದ್ದಾರೆ.

ಹಬ್ಬದ ವಾತಾವರಣವೇ ಇಲ್ಲ. ಸಾಧಾರಣ ವಾಗಿ ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬಂತೆ ಆಚರಿಸಲಾಗುತ್ತದೆ. ಮಳೆಗಾಲದ ನಡುವಲ್ಲಿ ಕೃಷಿ ಕೆಲಸಕ್ಕೆ ತುಸು ವಿಶ್ರಾಂತಿ ದೊರೆತು ಹಬ್ಬಗಳ ಸಾಲು ಆರಂಭವಾಗುವುದು ಪಂಚಮಿ ಮೂಲಕ. ವಿವಿಧ ದೇವಾಲಯಗಳಲ್ಲಿ ಹಾಗೂ ನಾಗಬನಗಳಲ್ಲಿ ನಾಗನಿಗೆ ತನು ಹೊಯ್ಯುವುದು ಸೇರಿದಂತೆ ನಾಗನ ಆರಾಧನೆ ಮಾಡಲಾಗುತ್ತದೆ. ಇದಕ್ಕಾಗಿ ವಿಶೇಷವಾಗಿ ಅಡಿಕೆ ಹಿಂಗಾರವನ್ನು ನಾಗನಿಗೆ ಪ್ರಿಯ ಎಂದು ಅರ್ಚನೆಗೆ ಉಪಯೋಗಿಸಲಾಗುತ್ತದೆ.

ಈ ಬಾರಿಯ ನಾಗರ ಪಂಚಮಿಗೆ ಹಿಂಗಾರದ ದರ 120 ರೂ. ಇತ್ತು. ಸೇವಂತಿಗೆ ಮಾರಿಗೆ 120 ರೂ. ಇತ್ತು. ಇದೆಲ್ಲಕ್ಕಿಂತ ಹೆಚ್ಚು ದುಬಾರಿ ಎನಿಸಿದ್ದು ಮಲ್ಲಿಗೆ ದರ. ಕೆಲವೇ ದಿನಗಳ ಹಿಂದೆ 300 ರೂ.ಗೆ ದೊರೆಯುತ್ತಿದ್ದ ಮಲ್ಲಿಗೆ ಅಟ್ಟೆ ಇಂದು 1400 ರೂ. ಧಾರಣೆಯಲ್ಲಿತ್ತು. ಭಟ್ಕಳದಲ್ಲಿ ಮಲ್ಲಿಗೆ ಬೆಳೆ ಮಳೆಗೆ ಕೊಚ್ಚಿ ಹೋದ ಕಾರಣ ಬೆಲೆ ಏರಿದೆ ಎಂಬ ಸಮಜಾಯಿಷಿ ನೀಡಲಾಗುತ್ತಿತ್ತು. ಹೂವಿನ ಮಾರುಕಟ್ಟೆಯಲ್ಲಿ ಬಿರುಸಿನ ವ್ಯಾಪಾರ ಇರಲಿಲ್ಲ. ಹಾಗಿದ್ದರೂ ಪೂಜೆಗೆ ಅನಿವಾರ್ಯ ಎಂದು ಭಕ್ತ ಜನರು ಹೂವಿನ ಖರೀದಿಗೆ ಆಗಮಿಸುತ್ತಿದ್ದರು. ಅಂತೆಯೇ ಪೂಜೆಗೆ ಬೇಕಾಗುವ ಇತರ ವಸ್ತುಗಳ ಖರೀದಿಯೂ ನಡೆಯುತ್ತಿತ್ತು.

ಕೆಂದಾಳೆಗೆ ಬೇಡಿಕೆ : ಕೆೆಂದಾಳೆ ಸೀಯಾಳಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇದೆ. ಒಂದು ಸೀಯಾಳ 50 ರೂ.ಗೆ ಮಾರಾಟ ವಾಗುತ್ತಿದೆ. ಪ್ರಸ್ತುತ ನಗರದಲ್ಲಿ ಆಯ್ದ ಭಾಗ ದಲ್ಲಿ ವ್ಯಾಪಾರಿಗಳು ಕೆಂದಾಳೆ ಸೀಯಾಳ ಮಾರಾಟ ಮಾಡುತ್ತಿರುವುದು ಕಂಡು ಬಂತು.

ಹಾಸನದಿಂದ ಸುಮಾರು 10 ಮಂದಿ ನಗರದ ವಿವಿಧೆಡೆಯಲ್ಲಿ ಹೂವಿನ ಮಾರಾಟಕ್ಕೆ ಬಂದಿದ್ದೇವೆ. ಕೊರೊನಾ ಮಾರ್ಗಸೂಚಿ ಅಳವಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಈ ಬಾರಿ ಹೂವಿನ ಲಭ್ಯತೆ ಕಡಿಮೆಯಿದ್ದು, ಬೆಲೆ ಅಧಿಕವಾಗಿದೆ. – ವೆಂಕಟೇಶ್‌, ಹಾಸನದ ಹೂವಿನ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next