ದೋಟಿಹಾಳ: ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ರಾಜ್ಯದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬದಿಂದ ಸಾಲ ಸಾಲು ಹಬ್ಬಗಳು ಆರಂಭವಾಗುತ್ತವೆ. ನಾಗರಪಂಚಮಿ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಹಬ್ಬಗಳು ಆರಂಭವಾಗುತ್ತವೆ. ಹೀಗಾಗಿ ಸೋಮವಾರ ಕೇಸೂರ ದೋಟಿಹಾಳ ಅವಳಿ ಗ್ರಾಮದಲ್ಲಿ ನಾನಾ ಕಡೆಗಳಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ನಾಗದೇವತೆ ವಿಗ್ರಹಕ್ಕೆ ಸುಮಂಗಲಿಯರು ಹಾಲನ್ನು ಎರೆದರು.
ಶ್ರಾವಣ ಮಾಸದ ಪಂಚಮಿ ದಿನದಂದು ನಾಗ ದೇವತೆಗೆ ಹಾಲನ್ನು ಎರೆಯುವುದು ಪದ್ದತಿ, ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಮಠದ ಹತ್ತಿರ, ರುದ್ರಮುನಿ ಸ್ವಾಮಿ ಮಠದ ಹತ್ತಿರ, ಕಾಳೀನ ಸಂತೆ ಬಾಜರದ ಅಶ್ವಥನಾರಾಯಣ ಕಟ್ಟೆಯಲ್ಲಿ, ಹನುಮಂತನ ದೇವಸ್ಥಾನದ ಹತ್ತಿರ, ಶುಖಮುನಿಸ್ವಾಮಿ ಪಾಧಗಟ್ಟಿ ಹತ್ತಿರ, ಕೇಸೂರ ಗ್ರಾಮದ ಮಹಾಂತೇಶ್ವರ ಸ್ವಾಮಿ ಮಠದ ಹತ್ತಿರ, ಮರಳೀಮಠ ಅವರ ಕಟ್ಟೆಯ ಹತ್ತಿರ ಮತ್ತು ಬಸವಣ್ಣನ ದೇವಸ್ಥಾನದಲ್ಲಿ ಹೆಂಗಳೆಯರು ನಾಗ ದೇವತೆಗೆ ಹಾಲೆರದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಗ್ರಾಮದ ಪ್ರತಿಮನೆಗಳಲ್ಲಿ ಹಲವಾರು ಬಗೆಯ ಲಾಡೂಗಳು(ಉಂಡಿ) ಎಳ್ಳು, ಶೇಂಗಾ, ಕಡಲೆ, ಹೆಸರು ಹಾಗೂ ರವೆಯ ಉಂಡೆಗಳನ್ನು ಮತ್ತು ಉಪ್ಪು ಗಾರಿಗೆ, ಸಿಹಿ ಗಾರಿಗೆ ತಯಾರು ಮಾಡಿ ನಾಗದೇವತೆಗೆ ಪೂಜೆ ಸಲ್ಲಿಸಿ ಹಾಲನ್ನು ಎರೆದು ನಂತರ ಗ್ರಾಮದ ನಾನಾ ಭಾಗಗಳಲ್ಲಿ ಗಿಡಗಳಿಗೆ ಹಗ್ಗವನ್ನು ಕಟ್ಟಿ ಮಕ್ಕಳು ಜೋಕಾಲಿಯನ್ನು ಆಡುತ್ತಿರುವುದು ಕಂಡುಬಂತು.
ಕೆಲವು ಕಡೆಗಳಲ್ಲಿ ಹೊಸದಾಗಿ ಮದುವೆಯಾದ ನವಜೋಡಿಗಳು ನಾಗರಪಂಚಮಿ ಹಬ್ಬದ ಪ್ರಯುಕ್ತ ನಾಗದೇವತೆ ವಿಗ್ರಹಕ್ಕೆ ಹಾಲನ್ನು ಎರೆಯುತ್ತಿರುವುದು ಕಂಡು ಬಂತು.