ಚಿಕ್ಕೋಡಿ: ಕಳೆದ ಎರಡುವರೆ ವರ್ಷ ಬಿಜೆಪಿ ಹಿಡಿತದಲ್ಲಿದ್ದ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಮಂಗಳವಾರ 2ನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಮರ‍್ಯಾಯಿ ಗುಂಪಿನ ಲಕ್ಷ್ಮೀಬಾಯಿ ಬಾಳಪ್ಪ ಮರ‍್ಯಾಯಿ ಅಧ್ಯಕ್ಷರಾಗಿ ಮತ್ತು ಸಂಗೀತಾ ರಮೇಶ ಮಾದರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
21 ಸದಸ್ಯ ಬಲದ ನಾಗರಮುನ್ನೊಳ್ಳಿ ಗ್ರಾಮ ಪಂಚಾಯತಿಯಲ್ಲಿ 10 ಕಾಂಗ್ರೆಸ್ ಮತ್ತು 10 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ಮೊದಲ ಅವಧಿಗೆ ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಅಭ್ಯರ್ಥಿ ಸುಧಾಕರ ಚೌಗಲೆ ಅವರು ಈಗ ಎರಡನೆ ಅವಧಿಗೆ ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಹೀಗಾಗಿ ಒಂದು ಮತಗಳ ಅಂತರದಿಂದ ಕಾಂಗ್ರೆಸ್ ಗುಂಪು ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಂ.ಎಸ್.ಗೌಡಪ್ಪನ್ನವರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಬಳಿಕ ಮುಖಂಡ ಸಿದ್ದಪ್ಪ ಮರ‍್ಯಾಯಿ ಮಾತನಾಡಿ, ಕಳೆದ 30 ವರ್ಷಗಳಿಂದ ನನ್ನ ಹಿಡಿತದಲ್ಲಿದ್ದ ಗ್ರಾಮ ಪಂಚಾಯತಿ ಕಳೆದ ಎರಡುವರೆ ವರ್ಷ ಮಾತ್ರ ಕೈಬಿಟ್ಟು ಹೋಗಿತ್ತು. ಬಿಜೆಪಿ ದುರಾಳಿತ ನೋಡಿದ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಗುಂಪಿಗೆ ಬೆಂಬಲ ನೀಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಗುಂಪು ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಗ್ರಾಮದ ಜನರ ಸಹಕಾರ ಮತ್ತು ಎಲ್ಲ ಸದಸ್ಯರ ಸಹಕಾರದಿಂದ ಅಧಿಕಾರ ಪಡೆಯಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಇಟ್ಟುಕೊಳ್ಳಾಗಿದೆ ಎಂದರು.
ಈ ಸಂದರ್ಭದಲ್ಲಿ ವಿನಾಯಕ ಕುಂಬಾರ, ಶಿವು ಮರ‍್ಯಾಯಿ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ, ರಾಜಮಾ ಮುಲ್ತಾನಿ, ಶಿವಪುತ್ರ ಮನಗೂಳಿ, ಶಂಕರ ನೇರ್ಲಿ, ಸಂಜು ಡೋಣವಾಡೆ, ವಿಠ್ಠಲ ಖಗನ್ನವರ, ಅನೀಲ ಈಟಿ, ಭೀರಪ್ಪ ನಾಗರಾಳೆ ಮುಂತಾದವರು ಇದ್ದರು.