ಬೆಂಗಳೂರು: ಬ್ಲಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮಾಜಿ ಕಾರ್ಪೋರೇಟರ್ ನಾಗರಾಜು ಹಾಗೂ ಆತನ ಮಕ್ಕಳಾದ ಗಾಂಧೀ, ಶಾಸ್ತ್ರೀ ಸೇರಿದಂತೆ 6 ಮಂದಿಯನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಕೆಂಗೇರಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮೂವರು ಉದ್ಯಮಿಗಳಿಗೆ ನೋಟು ಬದಲಿಸಿಕೊಡುವುದಾಗಿ ಹೇಳಿ ವಂಚಿಸಿದ್ದ ನಾಗ ಹಾಗೂ ಆತನ ಸಹಚರರ ವಿರುದ್ಧ ದಾಖಲಾದ ಮೂರು ಪ್ರತ್ಯೇಕ ವಂಚನೆ ಪ್ರಕರಣಗಳ ಸಂಬಂಧ ವಿಚಾರಣೆ ನಡೆಸುವ ಸಲುವಾಗಿ ಗುರುವಾರ ಎಸಿಎಂಎಂ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ಕೆಂಗೇರಿ ಪೊಲೀಸರು 7 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ನಾಗರಾಜ್, ಆತನ ಮಕ್ಕಳಾದ ಗಾಂಧಿ, ಶಾಸಿ ಮತ್ತು ಸಹಚರರಾದ ಜಯ ಕೃಷ್ಣ, ಸರವಣ್, ಸೌಂದರ್ಯರಾಜ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ಪುನ: ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರಾಜ್ ಹಾಗೂ ಆತನ ಸಹಚರರು ಡಿ.10ರಂದು ನೋಟು ಬದಲಾಯಿಸಿಕೊಡುವುದಾಗಿ ಹೇಳಿ ಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಚಂದ್ರಕುಮಾರ್ ಎಂಬುವರನ್ನು ಕರೆಸಿಕೊಂಡು 2.5 ಕೋಟಿ ರೂ. ಕಸಿದಿದ್ದರು. ಅದೇ ರೀತಿ ಉಲ್ಲಾಳದ ರಿಯಲ್ ಎಸ್ಟೇಟ್ ಉದ್ಯಮಿ ಮುನಿರಾಜು ಅವರಿಗೆ 1.75 ಕೋಟಿ ರೂ. ವಂಚನೆ ಮಾಡಿದ್ದರು. ನಾಗರಭಾವಿಯ ಕಲ್ಯಾಣ್ ಅವರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಬಳಿ 3.80 ಕೋಟಿ ರೂ. ಪಡೆದುಕೊಂಡಿದ್ದರು. ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಅದೇ ಹಳೇ ಡ್ರಾಮ ಮಾಡಿದ ನಾಗ!: ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂದರ್ಭ ಪುನಾ ಹಳೇ ಡ್ರಾಮ ಶುರು ಮಾಡಿದ್ದ ನಾಗರಾಜು, ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಾರೆ. ನನ್ನ ಆರೋಗ್ಯ ಸರಿಯಿಲ್ಲ. ನಾನು ನಾಲ್ಕು ಬಾರಿ ಎಂಎಲ್‌ಎ ಎಲೆಕ್ಷನ್‌ಗೆ ನಿಂತು ಸೋತಿದ್ದೇನೆ.
ಇದೀಗ ಪೊಲೀಸರು ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಹೊರಿಸಿ ನನ್ನ ರಾಜಕೀಯ ಜೀವನ ಮುಗಿಸಲು ಸಂಚು ಮಾಡುತ್ತಿದ್ದಾರೆ ಎಂದು ಅವಲತ್ತುಕೊಂಡ. ಆದರೆ, ಇದನ್ನು ನ್ಯಾಯಾಲಯ ನಂಬಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.