Advertisement

ನಾಗರಹೊಳೆ ಚಿರತೆ ಭೇಟೆ, ಅಂಗಾಂಗ ಮಾರಾಟಕ್ಕೆ ಯತ್ನ ಐವರು ಆರೋಪಿಗಳ ಸೆರೆ

08:16 PM May 02, 2022 | Team Udayavani |

ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದನ್ನು ಭೇಟೆಯಾಡಿ ಅದರ ಚರ್ಮ ಸೇರಿದಂತೆ ಅಂಗಾಂಗಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಐದು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ನಾಲ್ವರು ಆರೋಪಿಗಳು ಹುಣಸೂರು ತಾಲೂಕಿನ ವಿವಿಧ ಹಾಡಿಗೆ ಸೇರಿದ್ದು, ಮತ್ತೊಬ್ಬ ಹನಗೋಡಿಗೆ ಸಮೀಪದ ಅಬ್ಬೂರಿನವರೆಂದು ತಿಳಿದು ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನು ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಅಂಗಾಂಗ ವಶ: ಬಂಧಿತರಿಂದ ಚಿರತೆಯ ಚರ್ಮ, ನಾಲ್ಕು ಕಾಲಿನ ಭಾಗಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಸಿಂಗಲ್ ಬ್ಯಾರಲ್ ಗನ್ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ: ನಾಗರಹೊಳೆ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದಲ್ಲಿ ಹತ್ಯೆ ಮಾಡಿದ್ದ ಚಿರತೆಯ ಚರ್ಮ ಹಾಗೂ ಚಿರತೆಯ ಕತ್ತರಿಸಿದ ನಾಲ್ಕು ಕಾಲಿನ ಭಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಎಚ್ಚೆತ್ತುಗೊಂಡ ಪೊಲೀಸರು ಹನಗೋಡು-ಪಂಚವಳ್ಳಿ ಮುಖ್ಯ ರಸ್ತೆಯ ಕಡೇಮನುಗನಹಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನ ಸಮೇತ ಆರೋಪಿಯೊಬ್ಬನ ಮೇಲೆ ಹಠಾತ್ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ವಿಚಾರಣೆ ನಡೆಸಿದಾಗ ನಾಲ್ವರು ಸಹಚರರ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಉಳಿದ ನಾಲ್ವರು ಸೇರಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ, ಉಳಿದ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಹುಣಸೂರು ಎಸಿಎಫ್ ಸತೀಶ್ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶವರ್ಮ ಸೇವಿಸಿ ವಿದ್ಯಾರ್ಥಿನಿ ಸಾವು ಪ್ರಕರಣ : ಇಬ್ಬರ ಬಂಧನ, ಸ್ಥಳೀಯರಿಂದ ವಾಹನಕ್ಕೆ ಬೆಂಕಿ

Advertisement

ನಾಗರಹೊಳೆ ಹುಲಿಯೋಜನೆ ಮುಖ್ಯಸ್ಥ ಮಹೇಶ್‌ಕುಮಾರ್ ಹಾಗೂ ಎ.ಸಿ.ಎಫ್. ಸತೀಶ್‌ರ ಮಾರ್ಗದರ್ಶನದಲ್ಲಿ ಹುಣಸೂರು ವಲಯ ಅರಣ್ಯಾಧಿಕಾರಿ ಹನುಮಂತರಾಜು, ವಿಶೇಷ ಹುಲಿ ಸಂರಕ್ಷಣಾ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಡಿ.ಆರ್.ಎಫ್.ಓ.ಗಳಾದ ವೀರಭದ್ರಯ್ಯ, ಜಿ.ಎನ್.ಸಿದ್ದರಾಜು, ಎಚ್.ಎಸ್, ಪ್ರಸನ್ನಕುಮಾರ್, ಅರಣ್ಯ ರಕ್ಷಕರಾದ ಕುಶಾಲ್ ಜಾದವ್, ಲಿಂಗರಾಜು ಮುಗಳಿ, ಕೃಷ್ಣ ಮಾದರ್ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next