ಕನ್ನಡದ ಕ್ಲಾಸಿಕ್ ಚಿತ್ರವಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ “ನಾಗರಹಾವು’ ಮತ್ತೆ ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ಸಜ್ಜಾಗಿದ್ದು, ಚಿತ್ರದ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ಸಕತ್ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮೇಕಿಂಗ್ ವೀಡಿಯೋವನ್ನು ಬಿಡುಗಡೆ ಮಾಡಿದೆ.
ಚಿತ್ರದ ರಿ-ರೆಕಾರ್ಡಿಂಗ್ ಕಾರ್ಯ, ಹಿನ್ನೆಲೆ ಸಂಗೀತ ನೀಡಿದ ಹಲವು ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೆಲ್ಲಾ ಕೇಳುತ್ತಿದ್ದರೆ ಸಿನಿಪ್ರಿಯರು ರೋಮಾಂಚನಗೊಳ್ಳುತ್ತಾರೆ. “ನಾಗರಹಾವು’ ಎವರ್ ಗ್ರೀನ್ ಸಿನಿಮಾ ಇದೀಗ “ಡಿಜಿಟಲ್ ಸ್ಪರ್ಶದೊಂದಿಗೆ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ ಈ ಚಿತ್ರವನ್ನು ಇದೀಗ ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ಹೊಸ ತಂತ್ರಜ್ಞಾನ, ವಿಷ್ಯುಯಲ್ ಎಫೆಕ್ಟ್ ಬಳಸಿಕೊಂಡು ಬೃಹತ್ ಪರದೆ ಮೇಲೆ ಮೂಡಿಸಲು “ನಾಗರಹಾವು’ ಚಿತ್ರವನ್ನು ಈಗ ಸಿನಿಮಾ ಸ್ಕೋಪ್ ಮತ್ತು 7.1 ಡಿಟಿಎಸ್ ಸೌಂಡ್ ಎಫೆಕ್ಟ್‌ನಲ್ಲಿ ತಯಾರಿಸಲಾಗುತ್ತಿದೆ. ರವಿಚಂದ್ರನ್ ತಮ್ಮ ಬಾಲಾಜಿ ಈ ಚಿತ್ರಕ್ಕೆ ಹೊಸದಾಗಿ ಕಲರಿಂಗ್ ಮಾಡಿಸಿದ್ದಾರೆ.
ಅಲ್ಲದೆ, ಇಡೀ ಚಿತ್ರಕ್ಕೆ ಇಂದಿನ ತಂತ್ರಜ್ಞಾನವನ್ನೇ ಬಳಸಿಕೊಂಡು ಹೊಸದಾಗಿ ರೀ ರೆಕಾರ್ಡಿಂಗ್ ಮಾಡಲಾಗಿದೆ. ನಾಗರಹಾವು ಹೊಸ ರೂಪ ಪಡೆಯಲು ಎರಡು ವರ್ಷ ತೆಗೆದುಕೊಂಡಿದ್ದು, ಮುಂಬಯಿ, ಚೆನ್ನೈ, ಬೆಂಗಳೂರಿನ ಕೆಲ ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಇನ್ನು ಈ ಚಿತ್ರದ ಟೀಸರ್ ನ್ನು ನಟ ಕಿಚ್ಚ ಸುದೀಪ್ ಸರ್ಬಿಯಾ ದೇಶದಿಂದ ತಮ್ಮ ಟ್ವೀಟರ್ ಅಕೌಂಟ್ ಮೂಲಕ ಬಿಡುಗಡೆ ಮಾಡಿ ಮಾಡಿದ್ದರು.