Advertisement

Nagara Panchami: ನಾಡಿಗೆ ದೊಡ್ಡದು ನಾಗರ ಪಂಚಮಿ

03:35 PM Sep 18, 2024 | Team Udayavani |

ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆಯುವ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ. ಈ ಹಬ್ಬಕ್ಕೆ ಗರುಡ ಪಂಚಮಿ ಎಂಬ ಹೆಸರು ಕೂಡ ಇದೆ. ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗನ ಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ.

Advertisement

ನಾಗಪ್ಪನಿಗೆ ಹಲವು ವಿಧದ ಉಂಡೆಗಳು, ಕರಿ ಎಳ್ಳಿನಿಂದ ಮಾಡಿದ ಉಂಡೆ, ಚಿಗಳಿ ತಂಬಿಟ್ಟು, ಹಸಿ ಅಕ್ಕಿ ಮತ್ತು ಬೆಲ್ಲ ಬೆರೆಸಿ ಮಾಡಿದ ತಂಬಿಟ್ಟಿನ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಪೂಜೆ ಮಾಡಿ, ಬೆಲ್ಲದ ನೀರನ್ನು ಒಣಕೊಬ್ಬರಿ ಗಿಟುಕದಲ್ಲಿ ಹಾಕಿಕೊಂಡು “ಹಾಲು ಕುಡಿದ ಬಾಯಿಲೇ ನೀರು ಕುಡಿಯೋ ನಾಗಪ್ಪಾ. ನನ್ನ ತವರಮನೀ ಸುಖದಿಂದ ಇರಲಿ’ ಎನ್ನುತ್ತಾ ಅಣ್ಣ, ತಮ್ಮಂದಿರ ಹೆಸರು ಹೇಳಿ ಸಹೋದರಿಯರು ನಾಗನಿಗೆ ಅರ್ಪಿಸುತ್ತಾರೆ.

ಅಣ್ಣ ತಂಗಿಯ ಪ್ರೀತಿ ಸಾರುವಂತಹ ಈ ಹಬ್ಬದಲ್ಲಿ ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ಆಯಸ್ಸು, ಆರೋಗ್ಯ ಮತ್ತು ಸಕಲ ಸುಖಗಳನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಹುತ್ತಕ್ಕೆ ಹಾಲು ಎರೆದು, ಹುತ್ತದ ಮಣ್ಣನ್ನು ಹೊಕ್ಕಳು ಅಥವಾ ಬೆನ್ನಿಗೆ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ.  ಇನ್ನು ಉತ್ತರ ಕರ್ನಾಟಕದಲ್ಲಿ ಈ ಹಬ್ಬ ಮತ್ತಷ್ಟು ವಿಶಿಷ್ಟವಾಗಿರುತ್ತದೆ. ಹಬ್ಬದ ಸಂದರ್ಭ ಮನೆಗಳಲ್ಲಿ ಮತ್ತು ಊರಿನಲ್ಲಿ ಜೋಕಾಲಿ ಕಟ್ಟಿ ಹಾಡುವಂತಹ ವಿಶಿಷ್ಟ ಪದ್ಧತಿ ಇದೆ. ನಾಗರಪಂಚಮಿ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ರೀತಿಯಲ್ಲಿ ಜೋಕಾಲಿ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ನಾಗ ಪೂಜೆ ಮಾಡಿ ಸುಬ್ರಮಣ್ಯನನ್ನು ಆರಾಧನೆ ಮಾಡಿದರೆ ಇಡೀ ಕುಟುಂಬವನ್ನು ನಾಗಪ್ಪ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ.

ಪಂಚಮಿಯ ಹಿಂದೆ ಆರೋಗ್ಯಕರ ಲಾಭವೂ ಇದೆ, ಜೀಕು-ಜೋಕಾಲಿ ಆಡುವಾಗ ಹಗ್ಗದ ಮೇಲೆ ಕೈಗಳ ಹಿಡಿತ ಬಲವಾಗಿರುತ್ತದೆ. ಜೀಕು ಆಡುವಾಗ ಆಗಾಗ ಏಳುವುದು ಕೂರುವುದು. ಎದ್ದುನಿಂತು ಮಾಡಬೇಕಾಗುತ್ತದೆ. ಈ ಕ್ರಿಯೆಯಿಂದ ಅಂಗೈ ಮತ್ತು ಬೆರಳುಗಳಿಗೆ ಶಕ್ತಿ ಹೆಚ್ಚುತ್ತದೆ.  ಈ ಹಬ್ಬದ ಸಂದರ್ಭದಲ್ಲಿ ತಿನ್ನುವ ವಿಷೇಶ ತಿನಿಸುಗಳು ದೇಹಕ್ಕೆ

ಅಗತ್ಯ ಪೋಷಕಾಂಶಗಳು ಒದಗಿಸುತ್ತದೆ. ಹೀಗೆ ನಾಗರ ಪಂಚಮಿ ಆಚರಣೆಯ ಹಿಂದೆ ವಿವಿಧ ಆರೋಗ್ಯ ಲಾಭಗಳಿವೆ. ಹಬ್ಬವನ್ನು ಅರಿತು ಆಚರಿ ಸಿದರೆ ಮತ್ತಷ್ಟು ಉತ್ಸಾಹ ಹೆಚ್ಚಿಸುತ್ತದೆ.

Advertisement

ಪೌರಾಣಿಕ ಕಥೆ:

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪ ಸಂಕುಲವನ್ನು ನಿರ್ನಾಮ ಮಾಡಲು “ಸರ್ಪ ಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬೂದಿಯಾಗತೊಡಗುತ್ತವೆ. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ನಮ್ಮನ್ನು  ಹೋಮದಿಂದ ರಕ್ಷಿಸುವಂತೆ ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ.

ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ಎಂದು ಹೇಳಲಾಗುತ್ತದೆ.

ಈ ದಿನ ಕೂಡ ಪಂಚಮಿಯ ದಿನವೇ ಆಗಿರುವುದು ವಿಶೇಷವಾಗಿದೆ. ಹೀಗೆ ನಾಗರ ಪಂಚಮಿ ಒಂದು ಕಾಲ, ಒಂದು ಜನಾಂಗ, ಒಂದು ಪ್ರದೇಶಕಷ್ಟೇ ಸೀಮಿತವಾಗದೆ ಎಲ್ಲ ಕಾಲ ಪ್ರದೇಶಗಳನ್ನು ಮೀರಿದ ಭಾವೈಕ್ಯತೆ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ.

-ಭೂಮಿಕಾ ರಂಗಪ್ಪ ದಾಸರಡ್ಡಿ

ಬಿದರಿ

Advertisement

Udayavani is now on Telegram. Click here to join our channel and stay updated with the latest news.

Next