ಮುಂಬಯಿ, ಆ. 5: ಪೊವಾಯಿಯ ಪಂಚಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದಲ್ಲಿ ನಾಗರ ಪಂಚಮಿ ಮಹೋತ್ಸವವು ಆ. 5ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.
ಕಳೆದ 62 ವರ್ಷಗಳಿಂದ ಶ್ರೀ ಮಹಾಶೇಷ ರುಂಡಮಾಲಿನಿ ದೇವಿ ಮತ್ತು ಶ್ರೀ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿರುವ ಶ್ರೀ ಸುವರ್ಣ ಬಾಬಾ ಅವರ ಉಪಸ್ಥಿತಿ ಮತ್ತು ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಆ. 4ರಂದು ಕುಕ್ಕೆ ಸುಬ್ರಹ್ಮಣ್ಯದೇವರ ಮುಂಭಾಗದಲ್ಲಿ 65 ಅಡಿ ಎತ್ತರದ ತಾಮ್ರ ಕವಚದ ಕೊಡಿಮರ ಧ್ವಜಾರೋಹಣದೊಂದಿಗೆ ಉತ್ಸವವು ಪ್ರಾರಂಭಗೊಂಡಿತು.
ಬೆಳಗ್ಗೆ 5ರಿಂದ ಮಧ್ಯಾಹ್ನ 1 ರವರೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ಶನಿಶಾಂತಿ, ತೆಂಗಿನಕಾಯಿ ಹೋಮ, ನವಗ್ರಹ ಪೂಜೆ, ಸರ್ಪಶಾಂತಿ, ನಾರಾಯಣ ನಾಗ ಬಲಿ, ಆಶ್ಲೇಷ ಬಲಿ, ಬ್ರಾಹ್ಮಣ ಪೂಜೆ, ಬ್ರಹ್ಮಚಾರಿ ಪೂಜೆ, ಅಶ್ವತ್ಥ ವಿವಾಹ, ಶ್ರೀ ನಾಗದೇವರಿಗೆ ಹಾಲಿನ ನೈವೇದ್ಯ, ಅಭಿಷೇಕ ಹಾಗೂ ಮಧ್ಯರಾತ್ರಿ 12ರಿಂದ ಶ್ರೀ ದೇವಿಗೆ ಕುಂಭಾಭಿಷೇಕ ಜರಗಿತು.
ಆ. 5ರಂದು ಮುಂಜಾನೆ 5ರಿಂದ ಸಂಜೆ 5ರವರೆಗೆ ಶ್ರೀ ಕ್ಷೇತ್ರದಲ್ಲಿ ನಾಗರ ಪಂಚಮಿಯು ನಾಗದೇವರ ಸನ್ನಿಧಿಯಲ್ಲಿ ಹಾಗೂ ಮಹಾಪೂಜೆಮಹಾಶೇಷ ರುಂಡಮಾಲಿನಿ ದೇವರ ಸನ್ನಿಧಾನದಲ್ಲಿ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ ಪೂಜೆ, ನವಗ್ರಹ ಹೋಮ, ದಿಕ್ಪಾಲ ಹೋಮ, ಅಷ್ಟ ದಿಕ್ಪಾಲ ಬಲಿ, ಪ್ರಾಕಾರ ಬಲಿ, ಶಿಖರ ಕುಂಭಾಭಿಷೇಕ, ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಸಹಸ್ರ ನಾರಿಕೇಳಾಭಿಷೇಕ, ನವಕಲಶ ಮಹಾಭಿಷೇಕ, ಮಧ್ಯಾಹ್ನ 1ರಿಂದ ಅಪರಾಹ್ನ 2ರವರೆಗೆ ಮೂರ್ತಿಬಲಿ, ನಾಗ ದರ್ಶನ,ಶ್ರೀ ಮಹಾಶೇಷ ರುಂಡಮಾಲಿನಿ ದೇವರತೀರ್ಥ ಪ್ರಸಾದ ವಿತರಣೆ ನೆರವೇರಿತು. ವೈದಿಕ ವಿಧಿ-ವಿಧಾನಗಳು ವೇದ ಮೂರ್ತಿ ವೆಂಕಟೇಶ್ ಭಟ್ ಮತ್ತು ವೇದಮೂರ್ತಿ ಸಂತೋಷ್ ಭಟ್ ತಂಡದವರಿಂದ ಜರಗಿತು. ಪೂರ್ವಾಹ್ನ10ರಿಂದ ಎರ್ಮಾಳ್ ಗಣೇಶ್ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸದ ಗೋಪಾಲ್ ಶೆಟ್ಟಿ, ಮಾಜಿ ಶಾಸಕ ಸಂಜಯ್ ದೀನ ಪಾಟೀಲ್, ಶಿವಸೇನಾ ಶಾಸಕ, ಸಚಿವ ಏಕನಾಥ್ ಶಿಂಧೆ, ಶಾಸಕ ರಾಮದಾಸ್ ಕದಂ, ಶಾಸಕರಾದ ನಸೀಂ ಖಾನ್, ಮಾಜಿ ಮೇಯರ್ ಮಹಾದೇವ್ ದೇವ್ನೆ, ಡಾ| ಅಶ್ವಿನಿ ಜೋಶಿ, ವಿವಿಧ ರಾಜಕೀಯ ಪಕ್ಷಗಳ ಧುರೀಣರಾದ ಸುನಿಲ್ ರಾವುತ್, ದಿಲೀಪ್ ಲಾಂಡೆ, ರಾಜ್ಯ ಸಚಿವ ಆದೇಶ್ ಬಾಂದೇಕರ್, ಥಾಣೆ ಮೇಯರ್ ಮೀನಾಕ್ಷೀ ಶಿಂಧೆ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಬಂಟರ ಸಂಘ ಜತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ನ್ಯಾಯವಾದಿ ಮಹೇಶ್ ಕೋಟ್ಯಾನ್, ಸುನಂದಾ ಶೆಟ್ಟಿ, ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ, ವಿವಿಧ ಕ್ಷೇತ್ರಗಳ ಸಾಧಕರಾದ ಶೇಖರ್ ಎಲ್. ಶೆಟ್ಟಿ ಭಿವಂಡಿ, ರತ್ನಾಕರ ಬಂಗೇರ, ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ರವಿ ಸಿಂಗ್, ಸುರೇಂದ್ರ ಎ. ಪೂಜಾರಿ, ಪೊವಾಯಿ ಕನ್ನಡ ಸಂಘದ ಅಧ್ಯಕ್ಷ ಕರುಣಾಕರ ವಿ. ಶೆಟ್ಟಿ ಮೊದಲಾದವರು ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.
ತುಳು-ಕನ್ನಡಿಗರು ಸೇರಿದಂತೆ ಅನ್ಯಭಾಷಿಕ ಭಕ್ತಾದಿಗಳು, ವಿವಿಧ ಜಾತಿಯ, ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಉದ್ಯಮಿಗಳು, ರಾಜಕೀಯ ಧುರೀಣರು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ನಾಗದೇವರ ಅನುಗ್ರಹಕ್ಕೆ ಪಾತ್ರರಾದರು.
ಚಿತ್ರ-ವರದಿ: ಸುಭಾಷ್ ಶಿರಿಯಾ