Advertisement

ಜಿಲ್ಲಾದ್ಯಂತ ನಾಗರಪಂಚಮಿ ಸಂಭ್ರಮ

10:06 AM Aug 05, 2019 | Suhan S |

ಕೊಪ್ಪಳ: ಜಿಲ್ಲಾದ್ಯಂತ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು, ಮಕ್ಕಳು ನಾಗದೇವತೆ ಮೂರ್ತಿಗೆ ಶ್ರದ್ಧಾ ಭಕ್ತಿಯಿಂದ ಹಾಲ್ಲೆರೆದು ಸಿಹಿ ಪದಾರ್ಥವನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.

Advertisement

ಮನೆಯಲ್ಲಿ ಹೋಳಿಗೆ, ಖರ್ಚಿಕಾಯಿ, ಎಳ್ಳು ಚಿಗುಳಿ, ಎಳ್ಳುಂಡಿ ಸಿದ್ದಪಡಿಸಿ ಮಹಿಳೆಯರೆಲ್ಲ ಸೇರಿ ಸಮೀಪದ ನಾಗಪ್ಪ ದೇವಸ್ಥಾನಕ್ಕೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲೆರೆದರು. ವಿಶೇಷವಾಗಿ ರೈತರು, ರೈತ ಮಹಿಳೆಯರು ವರ್ಷಪೂರ್ತಿ ಕೃಷಿ ಬದುಕಿನಲ್ಲಿ ತೊಡಗಿದ್ದಾಗ ಯಾವುದೇ ವಿಷ ಜಂತುಗಳಿಂದ ಅಪಾಯವಾಗದಿರಲಿ. ನಮ್ಮ ಮಕ್ಕಳು ನಾವು ಕ್ಷೇಮದಿಂದ ಇರಲಿ. ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ. ನಾಡಿನೆ‌ಲ್ಲೆಡೆ ಸುಖ-ಶಾಂತಿನೆಲೆಸಲಿ ಎಂಬು ಪ್ರಾರ್ಥಿಸಿ ನಾಗದೇವತೆ ಮೂರ್ತಿಗೆ ಹಾಲೆರೆದರು.

ನಾಗಕಟ್ಟೆಗೆ ವಿಶೇಷ ಪೂಜೆ:  ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಮಕ್ಕಳಾಯಾಗಿ ನಾಗರ ಮೂರ್ತಿಗಳಿಗೆ ಹಾಗೂ ಹುತ್ತಗಳಿಗೆ ಹಾಲೆರೆದು ಸಂಭ್ರಮಿಸಿದರು. ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಿನ ಜಾವ ಮನೆಯ ಮುಂದೆ ನಾಗ ಸ್ವರೂಪಿನ ರಂಗೋಲಿಗಳು ಬಿಡಿಸಲಾಗಿತ್ತು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಗಕಟ್ಟೆ ಪೂಜೆ ಸಲ್ಲಿಸಿದರು. ಹೊಸಬಟ್ಟೆಗಳನ್ನು ಧರಿಸಿ, ಕೈಯಲ್ಲಿ ಪೂಜಾ ಸಾಮಾಗ್ರಿ, ನೈವೇದ್ಯ ಹಿಡಿದು ಭಕ್ತಿಯಿಂದ ದೇವಾಲಯಗಳಿಗೆ ನಾಗ ದೇವರ ಮೂರ್ತಿಗೆ ಹಾಲೆರೆದರು. ನಂತರ ತರಹೇವಾರಿ ಉಂಡಿಗಳು, ಕುರುಕುಲ ತಿಂಡಿಗಳನ್ನು ಅಕ್ಕಪಕ್ಕದವರೊಂದಿಗೆ ವಿನಿಮಯ ಮಾಡಿ ಸಂಭ್ರಮಿಸಿದರು. ಗಿಡಗಳಿಗೆ, ಮನೆಯಲ್ಲಿ ಕಟ್ಟಿದ್ದ ಜೊಕಾಲಿ ಆಡಿ ಸಂಭ್ರಮಿಸಿದರು. ಮಕ್ಕಳು ಗಿಟಕ ಕೊಬ್ಬರಿ ಹೋಳಿನಿಂದ ಬೋಲ ಬಗರಿ ಆಡಿ ಸಂಭ್ರಮಿಸಿದರು. ಮಳೆಗಾಲದ ಈ ಸಂದರ್ಭದಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಕೆಲವೆಡೆ ಹಬ್ಬ ಸಾಂಕೇತಿಕವೆನಿಸಿತು.
ಶ್ರದ್ಧಾಭಕ್ತಿಯ ನಾಗರ ಪಂಚಮಿ: ನಾಗರ ಪಂಚಮಿ ನಿಮಿತ್ತ ರವಿವಾರ ಪಟ್ಟಣದ ವಿವಿಧಡೆ ಮಹಿಳೆಯರು ಮತ್ತು ಮಕ್ಕಳು ನಾಗ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ತರಹೇವಾರಿ ಉಂಡಿ ನೈವೇದ್ಯ ಮಾಡಿ ಪ್ರಾರ್ಥಿಸಿದರು.

ಶ್ರಾವಣ ಮಾಸ ಪ್ರಾರಂಭದಲ್ಲಿ ಬರುವ ನಾಗರ ಪಂಚಮಿ ಮೊದಲ ಹಾಗೂ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಸಂತಾನ ಪ್ರಾಪ್ತಿಗಾಗಿ, ಮಕ್ಕಳ ಉನ್ನತಿಗಾಗಿ, ನಾಗದೋಷ ಪರಿಹಾರಕ್ಕಾಗಿ, ಸ್ತ್ರೀಯರು ತಮ್ಮ ಸೋದರರ ಒಳಿತಿಗಾಗಿ ಅನಾದಿಕಾಲದಿಂದಲೂ ನಾಗದೇವತೆಯನ್ನು ಪೂಜಿಸುತ್ತಾ ಬಂದಿರುವುದು ವಿಶೇಷ. ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆ, ಇತ್ಯಾದಿಗಳನ್ನು ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸುವುದು ನಂಬಿಕೆ.

ಈ ಹಿನ್ನೆಲೆಯಲ್ಲಿ ಐತಿಹಾಸಿ ಪುಷ್ಕರಣಿ, ಕನಕಾಚಲಪತಿ ದೇವಸ್ಥಾನದ ಮುಂಭಾಗ ಸೇರಿದಂತೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಇರುವ ನಾಗದೇವರ ಕಟ್ಟೆಗೆ ಮಹಿಳೆಯರು ತಂಡೋಪ ತಂಡವಾಗಿ ತೆರಳಿ ಪೂಜೆ ಸಲ್ಲಿಸಿ ದೋಷ ನಿವಾರಣೆಗೆ ಭಕ್ತಿ ಸಮರ್ಪಿಸುವುದು ಕಂಡು ಬಂತು.

ಕೇಸೂರ-ದೋಟಿಹಾಳ: ಕೇಸೂರ, ದೋಟಿಹಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ರವಿವಾರ ನಾಗರಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಮಠದ ಹತ್ತಿರ, ರುದ್ರಮುನಿ ಸ್ವಾಮಿ ಮಠದ ಹತ್ತಿರ, ಕಾಳಿನ ಸಂತೆ ಬಾಜಾರ್‌ ಹತ್ತಿರ, ಹನುಮಂತನ ದೇವಸ್ಥಾನದ ಹತ್ತಿರ, ಕೇಸೂರ ಗ್ರಾಮದ ಮಹಾಂತೇಶ್ವರ ಸ್ವಾಮಿ ಮಠದ ಹತ್ತಿರ ಮತ್ತು ಬಸವಣ್ಣನ ದೇವಸ್ಥಾನದಲ್ಲಿ ಮಹಿಳೆಯರು ನಾಗ ದೇವತೆಗೆ ಹಾಲೆರೆದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

Advertisement

ಹಬ್ಬದ ಪ್ರಯುಕ್ತ ಗ್ರಾಮದ ಪ್ರತಿಮನೆಗಳಲ್ಲಿ ಹಲವಾರು ಬಗೆಯ ಲಾಡು (ಉಂಡಿ) ತಯಾರಿಸಿ ನಾಗದೇವತೆಗೆ ಪೂಜೆ ಸಲ್ಲಿಸಿ ಹಾಲನ್ನು ಎರೆದು ನಂತರ ಗಿಡಮರಗಳಿಗೆ ಜೋಕಾಲಿ ಕಟ್ಟಿ ಆಡಿದರು.

Advertisement

Udayavani is now on Telegram. Click here to join our channel and stay updated with the latest news.

Next