Advertisement
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿ ಶ್ರೀಕ್ಷೇತ್ರ ನಾಗರನವಿಲೆ ಇದೆ. ಸರ್ಪ ಸಂಬಂಧಕ್ಕೆ ಕುರಿತಂತೆ ಏನೇ ಸಮಸ್ಯೆಗಳಿದ್ದರೂ ನಾಗರನವಿಲೆಗೆ ಕಾಲಿಟ್ಟರೆ ಎಲ್ಲವೂ ನಿವಾರಣೆಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ, ಪ್ರತಿನಿತ್ಯವೂ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಕ್ಷೇತ್ರದ ಇತಿಹಾಸ
ಈ ಊರಿಗೂ ರಾಮಾಯಣಕ್ಕೂ ನಂಟಿದೆ ಎಂಬ ನಂಬಿಕೆ ಇದೆ. ತ್ರೇತಾಯುಗದಲ್ಲಿ ಶ್ರೀರಾಮ ಇಲ್ಲಿಗೆ ಬಂದು ಹೋಗಿರುವುದಕ್ಕೆ ಕುರುಹುಗಳು ಇವೆ. ದ್ವಾಪರಯುಗದಲ್ಲಿ ಪಾಂಡವರು ಅಜ್ಞಾತವಾಸ ಮಾಡಿದ ಪುಣ್ಯ ಕ್ಷೇತ್ರವೂ ಇದೆಂದು ಹೇಳಲಾಗುತ್ತಿದೆ. ವಿಷ್ಣು ಭಕ್ತನಾದ ಚಂದ್ರಹಾಸನು ಈ ಕ್ಷೇತ್ರದಲ್ಲಿ ನೆಲೆಸಿದ್ದರಂತೆ ಎಂಬ ವಿಚಾರ ಸ್ಥಳ ಪುರಾಣದಲ್ಲಿದೆ.
Related Articles
Advertisement
ಈ ಊರಿನ ಇನ್ನೊಂದು ವಿಶೇಷವೆಂದರೆ, ಇಲ್ಲಿ ಈಶ್ವರ ಹಾಗೂ ವಿಷ್ಣು ದೇವರು ಒಂದೇ ದೇವಾಲಯದಲ್ಲಿವೆ. ಈ ದೇವತೆಗಳು ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುವುದು ಇಲ್ಲಿನ ವಿಶೇಷ. ಇಲ್ಲಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸ ವಿಶೇಷ ಪೂಜೆ ನಡೆಯುತ್ತದೆ.ಶ್ರೀಕ್ಷೇತ್ರದಲ್ಲಿ ನಾಗೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿಲ್ಲ. ಬದಲಾಗಿ ಅದು ಉದ್ಬವ ಮೂರ್ತಿಯಾಗಿದೆ. ಆನಂತರ ಈ ಕ್ಷೇತ್ರವನ್ನು ಪಂಚಲಿಂಗೇಶ್ವರ ಕ್ಷೇತ್ರವನ್ನಾಗಿ ಮಾಡಲಾಗಿದೆ. ಹೀಗಾಗಿ, ಸೋಮೇಶ್ವರ, ಚಂಡಿಕೇಶ್ವರ, ಬ್ರಹ್ಮಲಿಂಗೇಶ್ವರ, ಸಿದ್ದಲಿಂಗೇಶ್ವರ ಹಾಗೂ ನಾಗೇಶ್ವರ ಸ್ವಾಮಿ ದೇವಾಲಯಗಳಿವೆ. ಸ್ವಲ್ಪ ದೂರದಲ್ಲಿ ಪಾರ್ವತಮ್ಮನವರ ದೇವಾಲಯವೂ ಇದೆ.
ನಾಗದೋಷ ನಿವಾರಣೆಯ ಪ್ರಸಿದ್ದ ಕ್ಷೇತ್ರವಾಗಿರುವ ಇಲ್ಲಿ ಮಜ್ಜನಬಾವಿ ಇದೆ. ಚರ್ಮರೋಗ ಇರುವವರು ಹರಕೆ ಹೊತ್ತು ಜನ್ಮನಕ್ಷತ್ರದ ಪ್ರಕಾರ ಪ್ರತಿವಾರ ಶ್ರೀಕ್ಷೇತ್ರಕ್ಕೆ ಆಗಮಿಸಿ ಮಜ್ಜನಬಾವಿಯಿಂದ ಮೂರು ಕೊಡ ನೀರನ್ನು ಮೈಮೇಲೆ ಹಾಕಿಸಿಕೊಂಡು ಉರುಳು ಸೇವೆ ಮಾಡುತ್ತಾರೆ. ಇಲ್ಲವೆ ಹೆಜ್ಜೆ ಸೇವೆ ಮಾಡಿ ಹಣ್ಣು ಕಾಯಿ ಅರ್ಪಿಸಿ, ದೇವಾಲಯದಲ್ಲಿ ನೀಡುವ ಹುತ್ತದ ಮಣ್ಣು ಮತ್ತು ಗಂಧವನ್ನು ಲೇಪಿಸಿಕೊಂಡರೆ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಕಳೆದ ಮೂರು ವರ್ಷದಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ನಿತ್ಯವೂ ಪ್ರಸಾದ ವಿತರಿಸಲಾಗುತ್ತಿದೆ. ನಾಗರನವಿಲೆ ಕ್ಷೇತ್ರಕ್ಕೆ ದಾರಿ
ಚನ್ನರಾಯಪಟ್ಟಣದಿಂದ ನುಗ್ಗೇಹಳ್ಳಿ ಮಾರ್ಗವಾಗಿ ಸಾಗಿದರೆ 27 ಕಿ. ಮೀ. ಚನ್ನರಾಯಪಟ್ಟಣದಿಂದ ಬಾಗೂರು ಮಾರ್ಗವಾಗಿ 18 ಕಿ.ಮೀ, ಹಿರೀಸಾವೆ ಯಿಂದ 15 ಕಿ.ಮೀ, ತಿಪಟೂರಿನಿಂದ ಕಾರೆಹಳ್ಳಿ ಮಾರ್ಗವಾಗಿ 25 ಕಿ.ಮೀ. ಹಾಸನದಿಂದ ಕುಂದೂರು ಮಠದ ಮಾರ್ಗವಾಗಿ 62 ಕಿ.ಮೀ ತಿಪಟೂರು ತಾಲೂಕಿನ ದರಸಿಘಟ್ಟ ಚೌಡೇಶ್ವರಿ ಕ್ಷೇತ್ರದಿಂದ 21 ಕಿ.ಮೀ ಅರಸೀಕರೆ ಗಂಡಸಿ ಮಾರ್ಗ 42 ಕಿ.ಮೀ. — ಶಾಮಸುಂದರ್ ಕೆ. ಅಣ್ಣೇನಹಳ್ಳಿ