Advertisement

Mulki ರೈಲು ನಿಲ್ದಾಣಕ್ಕೆ ನಗರ ಪಂಚಾಯತ್ ಮೂಲ ಸೌಕರ್ಯ

02:32 PM Jan 02, 2025 | Team Udayavani |

ಮೂಲ್ಕಿ: ತಾಲೂಕಿನ ಹೆಗ್ಗಳಿಕೆ ಯಾಗಿರುವ ಮೂಲ್ಕಿ ರೈಲು ನಿಲ್ದಾಣಕ್ಕೆ ನಗರ ಪಂಚಾಯತ್‌ ವತಿಯಿಂದ ಮೂಲ ಸೌಕರ್ಯ ಒದಗಿಸಲು ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಯಿತು. ಇದರ ಜತೆಗೆ ನಿಲ್ದಾಣಕ್ಕೆ ಇನ್ನೊಂದು ಪ್ಲಾಟ್‌ಫಾರಂ ಅಗತ್ಯ ಇರುವುದನ್ನು ಸಂಸದರ ಮೂಲಕ ಕೇಂದ್ರ ಸರಕಾರ ಮತ್ತು ರೈಲ್ವೇ ಸಚಿವರಿಗೆ ಮನವರಿಕೆ ಮಾಡಲು ಕೂಡ ಸಭೆ ತೀರ್ಮಾನಿಸಿತು.

Advertisement

ನಗರ ಪಂಚಾಯತ್‌ನ ಅಧ್ಯಕ್ಷ ಸತೀಶ್‌ ಅಂಚನ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಮೂಲ್ಕಿ ರೈಲು ನಿಲ್ದಾಣದ ಬಗ್ಗೆ ಚರ್ಚೆ ನಡೆಯಿತು. ಮೂಲ್ಕಿ ರೈಲು ನಿಲ್ದಾಣ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದ್ದರೂ ಮೂಲ್ಕಿ ನಗರದ ಹೆಸರು ಮತ್ತು ಮೂಲ್ಕಿ ತಾಲೂಕು ಕೇಂದ್ರವಾಗಿರುವ ಕಾರಣ ರೈಲು ನಿಲ್ದಾಣದ ಹಲವು ಕೆಲವು ಮೂಲಸೌಕರ್ಯವನ್ನು ಒದಗಿಸಲು ನಿರ್ಧರಿಸಲಾಯಿತು.

ಸಿಬಂದಿ ವಿವರ ಕೇಳಿದ ಸದಸ್ಯರು
ನಗರ ಪಂಚಾಯತ್‌ನಲ್ಲಿ ಲಕ್ಷಗಟ್ಟಲೆ ರೂ. ತೆರಿಗೆ ಮತ್ತಿತರ ಶುಲ್ಕಗಳು ಪಾವತಿಯಾಗುತ್ತಿವೆ. ಈ ಬಗ್ಗೆ ಎಲ್ಲ ವಿವರಗಳನ್ನು ಮಾಸಿಕ ಸಭೆಯಲ್ಲಿ ಸದಸ್ಯರಿಗೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಯಾವ ಸಿಬಂದಿಗೆ ಯಾವ ಜವಾಬ್ದಾರಿ, ಅವರು ಯಾವ ಕರ್ತವ್ಯ ಮಾಡುತ್ತಿದ್ದಾರೆ ಎಂಬ ಸೂಕ್ತ ಮಾಹಿತಿ ಕೂಡ ಸಭೆಗೆ ನೀಡದಿದ್ದರೆ ಸದಸ್ಯರಿಗೆ ಆಡಳಿತದ ಒಳಗೆ ಜವಾಬ್ದಾರಿಯಿಂದ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಸದಸ್ಯೆ ವಂದನಾ ಕಾಮತ್‌ ಹೇಳಿದರು. ಮಾಹಿತಿ ಕೊಡುವುದಾಗಿ ಉತ್ತರಿಸಲಾಯಿತು.

ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಾಧಿಕಾರಿ ಮಧುಕರ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್‌ ಶೆಟ್ಟಿ ಜಿ.ಎಂ., ಸದಸ್ಯರಾದ ಶಾಂತಾ ಕಿರೋಡಿಯನ್‌, ಸುಬಾಷ್‌ ಶೆಟ್ಟಿ, ಶೈಲೇಶ್‌ ಕುಮಾರ್‌, ದಯಾವತಿ ಅಂಚನ್‌, ಮಂಜುನಾಥ ಕಂಬಾರ, ತಿಲಕ್‌ ಪೂಜಾರಿ ಉಪಸ್ಥಿತರಿದ್ದರು.

ಕಸ ಎಸೆದು ಹೋಗುತ್ತಾರೆ!
ನಗರ ಪಂಚಾಯತ್‌ ವ್ಯಾಪ್ತಿಯಲ್ಲದೆ ಹೊರಪ್ರದೇಶದ ಜನರು ನಮ್ಮ ತ್ಯಾಜ್ಯ ಸಂಗ್ರಹಣಾ ಘಟಕದ ಎದುರು ನಿರಾಯಾಸವಾಗಿ ಕಸ ಎಸೆದು ಹೋಗುತ್ತಾರೆ. ಇದನ್ನು ನಾಯಿಗಳು ಎಳೆದು ಹಾಕಿ ವಾತಾವರಣ ಕೆಡುತ್ತಿದೆ ಎಂದು ಬಾಲಚಂದ್ರ ಕಾಮತ್‌ ಸಭೆಗೆ ತಿಳಿಸಿದರು.

Advertisement

ವಸತಿ ಸಂಕೀರ್ಣದ ತ್ಯಾಜ್ಯ ಸಮಸ್ಯೆ: ಕೊಕ್ಕರ್‌ಕಲ್‌ ಬಳಿಯ ವಸತಿ ಸಂಕೀರ್ಣದ ಕೊಳಚೆ ನೀರನ್ನು ಸೂಕ್ತವಾಗಿ ನಿರ್ವಹಿಸದೇ ಇರುವುದರಿಂದ ಮಾಲಿನ್ಯ ಉಂಟಾಗುತ್ತಿದೆ. ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯೋಗೀಶ್‌ ಕೋಟ್ಯಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್‌ ಶೆಟ್ಟಿ ಆಗ್ರ ಹಿಸಿದರು. ಕ್ರಮ ಜರಗಿಸುವ ಭರವಸೆ ನೀಡಲಾಯಿತು.

ಉದ್ಯಾನ ಸಂಪೂರ್ಣ ಕೊಳಕು: ಕಾರ್ನಾಡು ಸದಾಶಿವ ರಾವ್‌ ನಗರದ ವಿಜಯಪುರ ಕಾಲನಿಯ ಸಮೀಪದ ಉದ್ಯಾನವನ ಸಂಪೂರ್ಣ ಕೊಳಚೆಯಾಗಿದೆ. ಸಿಸಿ ಕೆಮರಾ ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಸಂದೀಪ್‌ ಮತ್ತು ಭೀಮಾಶಂಕರ್‌ ಒತ್ತಾಯಿಸಿದರು. ತತ್‌ಕ್ಷಣ ಕ್ರಮ ಜರಗಿಸಲು ನಿರ್ಧರಿಸಲಾಯಿತು.

ಎಲ್ಲ ಅಂಗನವಾಡಿ ಸುಭದ್ರಗೊಳಿಸಿ
ಅಂಗನವಾಡಿಯೊಂದರ ರಿಪೇರಿ ಕೆಲಸಕ್ಕೆ ಸಭೆಯ ಮುಂದೆ ವರದಿ ಬಂದಾಗ ವಂದನಾ ಕಾಮತ್‌ ಮಧ್ಯೆ ಮಾತನಾಡಿ, ನಗರ ಪಂಚಾಯತ್‌ ವ್ಯಾಪ್ತಿಯ ಹೆಚ್ಚಿನ ಅಂಗನವಾಡಿಗಳು  ಸುಸಜ್ಜಿತವಾಗಿಲ್ಲ. ಸಣ್ಣ ಮಕ್ಕಳು ಕಲಿಕೆ ಆರಂಭಿಸುವ ಜಾಗದ ಸುರಕ್ಷೆಯನ್ನು ನಗರ ಪಂಚಾಯತ್‌ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.

ಶಾಲಾ ಪರಿಸರಕ್ಕೆ ಭದ್ರತೆ ಕೊಡಿ
ನಾರಾಯಣ ಗುರು ಶಾಲಾ ವಲಯದ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಮಕ್ಕಳು ಶಾಲೆಗೆ ಬರುವಾಗ ಮತ್ತು ಹೋಗುವಾಗ ವೇಗವಾಗಿ ನಿರ್ಲಕ್ಷ್ಯದಿಂದ ವಾಹನಗಳು ಸಾಗುತ್ತಿದ್ದು, ಮಕ್ಕಳು ಭಯದಿಂದ ರಸ್ತೆ ಬದಿ ತೆರಳುವಂತಾಗಿದೆ ಎಂದು ಸದಸ್ಯ ಲೋಕೆಶ್‌ ಕೋಟ್ಯಾನ್‌ ಆಗ್ರಹಿಸಿದರು. ಸಭೆಯಲ್ಲಿದ್ದ ಪೊಲೀಸರು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆಯಿತ್ತರು.

ನ.ಪಂ. ಸಿಬಂದಿಗೆ ಹಣಕ್ಕೆ ಬೆದರಿಕೆ
ನ‌ಗರ ಪಂಚಾಯತ್‌ನಲ್ಲಿ ಕೆಲವು ಸಿಬಂದಿಗಳಿಗೆ ಹಣ ಕೊಡುವಂತೆ ಒತ್ತಡ ಹಾಕಿ ಬೆದರಿಕೆ ಕರೆ ಬರುತ್ತಿದೆ. ಸಿಬಂದಿ ಭಯದಿಂದ ಕೆಲಸ ಮಾಡುವಂತಾಗಿದೆ ಎಂದು ಸದಸ್ಯ ಬೋಳ ಬಾಲಚಂದ್ರ ಕಾಮತ್‌ ಸಭೆಗೆ ತಿಳಿಸಿದರು. ಯಾರಿಂದ ಈ ಕರೆ ಬರುತ್ತಿದೆ, ಕಾರಣ ಏನು, ಎಂಬಿತ್ಯಾದಿ ವಿವರಗಳನ್ನು ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರಿಗೆ ವಿವರ ನೀಡಿದಲ್ಲಿ ಪೊಲೀಸ್‌ ಮೂಲಕ ಕ್ರಮ ಕೈಗೊಳ್ಳುವ ಭರವಸೆ ಅಧ್ಯಕ್ಷರು ನೀಡಿದರು.

ಬಜೆಟ್‌ಗೆ ಸಾರ್ವಜನಿಕರ ಸಲಹೆ
– ನಗರ ಪಂಚಾಯತ್‌ನಲ್ಲಿ ಮುಂದೆ ಮಂಡಿಸಲಾಗುವ ಬಜೆಟ್‌ಗೆ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲು ನಿರ್ಧರಿಸಲಾಯಿತು.
– ಹಳೆಯಂಗಡಿ ಪಂಚಾಯತ್‌ನಿಂದ ಕುಡಿಯುವ ನೀರಿನ ಬಿಲ್ಲಿನ ಪಾವತಿಯಾಗದೆ ಇರುವುದರಿಂದ ಮುಂದಿನ ಕ್ರಮಕ್ಕೆ ಸಭೆ ನಿರ್ಧರಿಸಿತು.
– ಪಡುಬೈಲಿನ ಉಪ್ಪುನೀರು ತಡೆಗೋಡೆ ಕಾಮಗಾರಿ ಸ್ಥಗಿತಗೊಂಡಿದ್ದು, ಇರುವ ಕೃಷಿ ಭೂಮಿಯು ಹಾಳಾಗುವ ಭಯ ಇದೆ ಎಂದು ಸದಸ್ಯೆ ರಾಧಿಕಾ ಯಾದವ ಕೋಟ್ಯಾನ್‌ ಮಾಹಿತಿ ನೀಡಿದರು.
– ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯುವ ಕಾರ್ನಾಡು ಹರಿಹರ ಕ್ಷೇತ್ರದ ಶ್ರೀವಿಷ್ಣುಮೂರ್ತಿ ದೇವಸ್ಥಾನದ 100 ಮೀಟರ್‌ ರಸ್ತೆಗೆ ಡಾಮರು ನಡೆಸುವಂತೆ ಹರ್ಷರಾಜ್‌ ಶೆಟ್ಟಿ ಸಭೆಗೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next