ಮುಂಬಯಿ: ಬೊರಿವಲಿ ಜೈರಾಜ್ ನಗರದ ಪರಿಸರದಲ್ಲಿ ಕಾರಣಿಕ ಕ್ಷೇತ್ರ ಎಂದೇ ಬಿಂಬಿತಗೊಂಡಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆ. 15 ರಂದು ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 7.30 ರಿಂದ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಾಗದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ತನು-ತಂಬಿಲ ಜರಗಿತು. ಮಧ್ಯಾಹ್ನ 12.30 ರಿಂದ ವಿವಿಧ ಅಭಿಷೇಕಗಳು ನೆರವೇರಿ, ನಾಗಬನದಲ್ಲಿ ಅಲಂಕೃತಗೊಂಡ ನಾಗದೇವರಿಗೆ ಅರ್ಚಕ ವೃಂದದವರಿಂದ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು.
ಇದೇ ಸಂದರ್ಭದಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ಅವರು, ಭಕ್ತರು ತಮ್ಮ ನಾಗಾರಾಧನೆಯನ್ನು ಹೃದಯಲ್ಲಿ ಅರಳಿಸಿಕೊಳ್ಳಬೇಕು. ನಂಬಿಕೆಗಳು ಸಹಜವಾದರೂ ಇಂದು ಮಹಾನಗರದಲ್ಲಿ ದೊರೆಯುವಂತಹ ಕಲಬೆರಕೆ ಹಾಲನ್ನು ನಾಗದೇವರಿಗೆ ಅರ್ಪಿಸುವುದಕ್ಕಿಂತಲೂ ತಮ್ಮ ಭಕ್ತಿಯ ವಿಚಾರಧಾರೆಯನ್ನು ದೇವಸ್ಥಾನದ ಮಹತ್ವದ ಅನ್ನದಾನಕ್ಕೆ ಸಹಾಯ ಮಾಡುವ ಮೂಲಕ ಸಹಕರಿಸಬೇಕು. ಶ್ರೀ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವ ಭಕ್ತರಿಗೆ ಶ್ರೀ ನಾಗದೇವರು ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಮುದ್ರಾಡಿ ಬಕ್ರೆಮಠದ ಶ್ರೀ ಸಂತೋಷ್ ಕುಮಾರ್ ಭಟ್ ಅವರು ಆಶೀರ್ವಚನ ನೀಡಿ, ಪ್ರಕೃತಿ ಆರಾಧಕರೆಂದೇ ಪ್ರಸಿದ್ಧವಾದ ನಾಗದೇವರು ಭೂಮಂಡಲವನ್ನು ತನ್ನ ಜಡೆಯಲ್ಲಿ ಎತ್ತಿ ಸಮಸ್ತ ಭಕ್ತರನ್ನು ಆಶೀರ್ವದಿಸುತ್ತಿದ್ದಾರೆ. ಪ್ರಕೃತಿ ದೇವಿಯ ತಂಪಿನ ಜಾಗದಲ್ಲಿ ವಾಸಿಸುವ ಉದ್ದೇಶದಿಂದಲೇ ಊರಿನಲ್ಲಿ ಇಂದಿಗೂ ನಾಗ ಬನಗಳು ಬೆಟ್ಟಕಾಡುಗಳ ಮಧ್ಯೆ ಗೋಚರಿಸುತ್ತಿವೆ. ದೇಹವನ್ನು ತೆವಳಿಸಿಕೊಂಡು ಹೋಗುವ ಜೀವ ಜಂತುಗಳು ನಾಶವಾಗಬಾರದೆಂಬ ಉದ್ದೇಶದಿಂದ ತನು-ತಂಬಿಲ ಅರ್ಪಿಸುವುದು ಇಂದಿಗೂ ಆಚರಣೆಯಾಗಿದೆ.
ಶ್ರಾವಣ ಮಾಸದಲ್ಲಿ ಇಂತಹ ಸಾನ್ನಿಧ್ಯದಲ್ಲಿ ನಾಗದೇವರನ್ನು ಆರಾಧಿಸುವ ಮೂಲಕ ನಮ್ಮ ಪರಂಪರಾಗತ ದೋಷ ನಿವಾರಣೆಯಾಗುವುದರ ಜೊತೆಗೆ ಸಂತತಿ, ಸಂಮೃದ್ಧಿ ನೆರವೇರುತ್ತದೆ ಎಂದರು.
ಪರಿಸರದ ಅಸಂಖ್ಯಾತ ಭಕ್ತರು ನಾಗದೇವರಿಗೆ ವಿವಿಧ ಪೂಜಾ ಅಭಿಷೇಕ ಅರ್ಪಿಸಿ ಮಹಾಮಂಗಳಾರತಿಯ ಆನಂತರ ಪ್ರಸಾದ ಸ್ವೀಕರಿಸಿ ದೇವಸ್ಥಾನದಲ್ಲಿ ಅನ್ನದಾನ ಸ್ವೀಕರಿಸಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ವಂಶಸ್ಥ ಮೊಕ್ತೇಸರ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ ಶ್ರೀಧರ ಶೆಟ್ಟಿ ದಂಪತಿ, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ದಂಪತಿ, ಮೊಕ್ತೇಸರರಾದ ಶ್ರೀಮತಿ ಜಯಪಾಲಿ ಅಶೋಕ್ ಶೆಟ್ಟಿ, ಬಿ. ವಿ. ತಂತ್ರಿ ಮತ್ತು ಅರ್ಚಕವೃಂದದವರು, ದೇವಸ್ಥಾನದ ಆಡಳಿತ ವರ್ಗ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ರಾಜಕೀಯ ಧುರೀಣರು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ