ಶ್ರೀನಿವಾಸಪುರ: ತಾಲೂಕಿನ ಅರಿಕೆರೆ ನಾಗನಾಥೇಶ್ವರಸ್ವಾಮಿ ದೇಗುಲದ 20ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಬ್ರಹ್ಮರಥೋತ್ಸವ ಭಕ್ತರ ಜಯಘೋಷಗಳ ನಡುವೆ ನಡೆಸಲಾಯಿತು.
ಶಾಸಕ ಕೆ.ಆರ್.ರಮೇಶ್‌ಕುಮಾರ್ ರಥ ಎಳೆಯುವುದಕ್ಕೆ ಮುಂಚಿತವಾಗಿ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವ ದಿನ ದೇಗುಲದಲ್ಲಿ ಸುಪ್ರಭಾತ, ಗಣಪತಿ ಪ್ರಾರ್ಥನೆ, ಗೋಪೂಜೆ, ಗಂಗಾಪೂಜೆ, ಧ್ವಜಾರೋಹಣ ನಡೆಸಲಾಯಿತು. ನಂತರ ಕಳಶ ಸ್ಥಾಪನೆ, ಅಖಂಡ ರುದ್ರಹೋಮ, ರಥಾಂಗಹೋಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಭಾಗವಾಗಿ ಅರಿಕೆರೆ ಜಗನ್ನಾಥ ತಂಡದಿಂದ ನಾದಸ್ವರ ಕಛೇರಿ, ಜಯಣ್ಣ ವೃಂದದವರಿಂದ ತಮಟೆ ವಾದ್ಯ, ಚಿಂತಾಮಣಿ ಎಲ್.ವೈ. ಶ್ರೀನಿವಾಸರೆಡ್ಡಿ ಅವರ ಶಿಷ್ಯರಿಂದ ದೇವರ ನಾಮಗಳು, ಚಿಂತಾಮಣಿಯ ಸಾಯಿ ತೇಜಸ್ವಿನಿ ಹಾಗೂ ಕಾವ್ಯಶ್ರೀ ಅವರಿಂದ ಸಂಗೀತ ಕಛೇರಿ ಹಾಗೂ ಬಚ್ಚೋರಪಲ್ಲಿ, ಮತ್ತೋರಪಲ್ಲಿ, ಗೋಪಾಲಪುರ, ಗೊಲ್ಲಪಲ್ಲಿ ತಂಡಗಳಿಂದ ಭಜನೆ ನಡೆಯಿತು. ಸಂಜೆ ಭುವಿಕಾ ರಾಮಕೃಷ್ಣನ್ ತಂಡದಿಂದ ಭರತನಾಟ್ಯ, ರುದ್ರಾಭಿಷೇಕ, ಸಂಕಲ್ಪ, ಶಿವಕೋಟಿ ಭಜನೆ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಹರಕೆ ಹೊತ್ತ ಭಕ್ತರು ಪಾನಕ, ಮಜ್ಜಿಗೆ, ಕೋಸಂಬರಿ ಪ್ರಸಾದ ವಿತರಿಸಿದರು.
ಆಗಮಿಕರಾದ ಚಿಂತಾಮಣಿಯ ಎನ್.ಉಮಾಶಂಕರ್ ಶರ್ಮ, ಅರಿಕೆರೆ ಗ್ರಾಮದ ಅನಂತಮೂರ್ತಿ ಸ್ವಾಮಿ, ಭಾನುಪ್ರಕಾಶ್‌ಸ್ವಾಮಿ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್. ವೇಣುಗೋಪಾಲ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ಜಿಪಂ ಮಾಜಿ ಸದಸ್ಯ ಜಿ.ರಾಜಣ್ಣ ರಥಕ್ಕೆ ಪೂಜೆ ಸಲ್ಲಿಸಿದರು.