ಮಂಡ್ಯ: ನಾಗಮಂಗಲ ಸಾರಿಗೆ ನೌಕರ ಚಾಲಕ ಕಂ ನಿರ್ವಾಹಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲದಲ್ಲಿ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಚಾಲಕ ಜಗದೀಶ್ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ವಿಶೇಷ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಹೇಳಿಕೆ ಪಡೆಯಲಿರುವ ಅಧಿಕಾರಿಗಳು: ಚಾಲಕ ಜಗದೀಶ್ ಚೇತರಿಕೆ ಹಿನ್ನೆಲೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದ್ದು, ಸಿಐಡಿ ಅಧಿಕಾರಿಗಳು ಹೇಳಿಕೆ ಪಡೆಯ ಲಿದ್ದಾರೆ. ಈಗಾಗಲೇ ಜಗದೀಶ್ ಕುಟುಂಬಸ್ಥರ ಹೇಳಿಕೆ ಪಡೆದಿರುವ ಅಧಿಕಾರಿಗಳು, ಜಗದೀಶ್ ಹೇಳಿಕೆ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಡೆತ್‌ನೋಟ್ ಬಗ್ಗೆಯೂ ವಿಚಾರಣೆ: ಚಾಲಕ ಜಗದೀಶ್ ಡೆತ್‌ನೋಟ್ ಬರೆದಿದ್ದ ಎನ್ನಲಾಗಿರುವ ಪತ್ರದ ಬಗ್ಗೆಯೂ ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ತನಿಖೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ವಿಡಿಯೋ, ಆಡಿಯೋ ಹರಿಬಿಟ್ಟಿರುವ ಹಿನ್ನೆಲೆ ಬಗ್ಗೆಯೂ ಹಾಗೂ ವಿಡಿಯೋ, ಆಡಿಯೋ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಜು.21ರೊಳಗೆ ವರದಿ ಸಲ್ಲಿಸಲು ಚಿಂತನೆ: ಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ ವರದಿಯನ್ನು ಜು.21ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ತೀವ್ರಗತಿ ತನಿಖೆ ನಡೆಯುತ್ತಿದೆ. ಇದರಲ್ಲಿ ಆತ್ಮಹತ್ಯೆ ಯತ್ನ ನಡೆದ ದಿನವೇ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿ ನೀಡಿದ ಹೇಳಿಕೆ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಐಜಿಪಿ, ಎಸ್ಪಿಗೆ ಸುರೇಶ್‌ಗೌಡ ದೂರು: ನಾಗಮಂಗಲ ಟೌನ್ ಪೊಲೀಸರ ವಿರುದ್ಧ ಮಾಜಿ ಶಾಸಕ ಕೆ.ಸುರೇಶ್‌ಗೌಡ ದೂರು ನೀಡಿದ್ದಾರೆ. ದಕ್ಷಿಣ ವಲಯ ಐಜಿಪಿಗೆ ಹಾಗೂ ಜಿಲ್ಲಾ ಎಸ್ಪಿಗೆ ಲಿಖೀತ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಚಾಲಕ ಜಗದೀಶ್ ಅವರನ್ನು ಭೇಟಿ ಮಾಡಿರುವ ಪೊಲೀಸ್ ಇಲಾಖೆ ಸುಪರ್ದಿಯಲ್ಲಿರುವ ಸಿಸಿಟಿವಿ ದ್ಯಶ್ಯಾವಳಿಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವ ಮೂಲಕ ಗೌರವ ಧಕ್ಕೆ ಉಂಟು ಮಾಡಿ ಕರ್ತವ್ಯ ಲೋಪವೆಸಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾಗಮಂಗಲ ಟೌನ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಉಪ ನಿರೀಕ್ಷಕರು ನೀಡಿದ್ದಾರೆ ಎಂದು ಆರೋಪಿಸಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೊನ್ನೆ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಕೆ.ಸುರೇಶ್‌ಗೌಡ ಹಾಗೂ ಬೆಂಬಲಿಗರು ಚಾಲಕ ಜಗದೀಶ್ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ತಡೆದಿದ್ದಾರೆ ಎನ್ನಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದಾದ ಬಳಿಕ ಜೆಡಿಎಸ್ ಕಾರ್ಯಕರ್ತರು ಆಡಿಯೋ ಬಿಡುಗಡೆ ಮಾಡಿ ಆರೋಪ ಮಾಡಿದ್ದರು.
ಜಗದೀಶ್ ಆರೋಗ್ಯದಲ್ಲಿ ಚೇತರಿಕೆ: ಪತ್ನಿ ಪಾವನ: ನನ್ನ ಪತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಐಸಿಯುನಿಂದ ವಿಶೇಷ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಪತ್ನಿ ಪಾವನ “ಉದಯವಾಣಿ’ಗೆ ತಿಳಿಸಿದರು. ಚೇತರಿಕೆ ಕಂಡಿರುವ ಜಗದೀಶ್ ಅವರು ಸ್ವಲ್ಪ ಮಾತನಾಡು ತ್ತಿದ್ದಾರೆ. ಆದರೆ, ಕಾರಣ ಏನು ಎಂಬುದು ಇನ್ನೂ ನನ್ನ ಬಳಿಯೂ ಹೇಳುತ್ತಿಲ್ಲ. ನಾನೂ ಹೆಚ್ಚೇನೂ ಕೇಳಿಲ್ಲ. ಘಟನೆ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ. ಅವರೇ ಹೇಳಬೇಕು ಎಂದು ತಿಳಿಸಿದರು.