Advertisement

Nagamangala: ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ: ಉದ್ವಿಗ್ನ

12:33 AM Sep 12, 2024 | Team Udayavani |

ನಾಗಮಂಗಲ(ಮಂಡ್ಯ): ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಸೇರಿ ಹಲವು ಯುವಕರು ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

Advertisement

ಪಟ್ಟಣದ ಬದರಿಕೊಪ್ಪಲು ಮತ್ತು ನಾಗಮಂಗಲ ಪಟ್ಟಣದ ವಿನಾಯಕ ಬಳಗ ಯುವಕರ ಸಂಘದ ವತಿಯಿಂದ ಬುಧವಾರ ಗಣಪತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಯುತ್ತಿತ್ತು. ಪಟ್ಟಣದ ಮಂಡ್ಯ ವೃತ್ತ, ಮೈಸೂರು ರಸ್ತೆಯ ಬಳಿ ಮೆರವಣಿಗೆ ಸಾಗಿತ್ತು. ಮಂಡ್ಯ ವೃತ್ತಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಅನ್ಯಕೋಮಿನ ಕೆಲವು ಯುವಕರು ನಮ್ಮ ದರ್ಗಾದ ಬಳಿ ಮೆರವಣಿಗೆ ಮಾಡಬೇಡಿ, ಪಟಾಕಿ, ತಮಟೆ, ನಗಾರಿ ಬಾರಿಸಬೇಡಿ, ಜೈಕಾರ ಕೂಗಬೇಡಿ ಎಂದು ಗಣಪತಿ ಮೆರವಣಿಗೆ ನಡೆಸುತ್ತಿದ್ದ ಯುವಕರಿಗೆ ತಾಕೀತು ಮಾಡಿದ್ದಾರೆ. ಇದನ್ನು ಹಿಂದೂ ಯುವಕರು ಪ್ರಶ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅನ್ಯಕೋಮಿನ ಯುವಕರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆರಳಿದ ಹಿಂದೂ ಯುವಕರು ಜೈಶ್ರೀರಾಂ ಎಂದು ಘೋಷಣೆ ಕೂಗಿದ್ದಾರೆ.

ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ತೀವ್ರಗೊಳಿಸಿದ ಪರಿಣಾಮ ಪೊಲೀಸರು ಸೇರಿದಂತೆ ಯುವಕರು ಗಾಯಗೊಂಡಿದ್ದಾರೆ. ಎಚ್ಚೆತ್ತ ಪೊಲೀಸರು ಲಾಠಿ ಬೀಸಿ ಉದ್ರಿಕ್ತ ಗುಂಪನ್ನು ಚದುರಿಸಿದರೂ, ಅನ್ಯಕೋಮಿನ ಯುವಕರು ಲಾಂಗ್‌ ಮಚ್ಚುಗಳನ್ನು ಹಿಡಿದು ಬೀದಿಗಿಳಿದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗಣೇಶ ಮೂರ್ತಿ ನಿಲ್ಲಿಸಿ ಪ್ರತಿಭಟನೆ
ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಯುವಕರು ಪೊಲೀಸ್‌ ಠಾಣೆ ಮುಂದೆ ಗಣೇಶ ಮೂರ್ತಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಗಣಪತಿ ಉತ್ಸವ ನಡೆಯಲು ಬಿಡದೇ ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಿದ ಅನ್ಯಕೋಮಿನ ಯುವಕರನ್ನು ಬಂಧಿ ಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗಲಾಟೆಯಲ್ಲಿ ಪೊಲೀಸ್‌ ಅ ಧಿಕಾರಿಗಳೂ ಸೇರಿದಂತೆ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಘಟನೆಯಿಂದ ನಾಗಮಂಗಲ ಪಟ್ಟಣ ಪ್ರಕ್ಷುಬ್ಧಗೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.

ಮಚ್ಚು, ಲಾಂಗ್‌, ಪೆಟ್ರೋಲ್‌ ಬಾಂಬ್‌ ಹಿಡಿದು ಓಡಾಟ?
ಅನ್ಯಕೋಮಿನ ಯುವಕರು ಮಚ್ಚು, ಲಾಂಗ್‌ ಹಾಗೂ ಪೆಟ್ರೋಲ್‌ ಬಾಂಬ್‌ನಂಥ ಅಪಾಯಕಾರಿ ವಸ್ತುಗಳನ್ನು ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಮೆರವಣಿಗೆ ನಡೆಯಲು ಬಿಡುತ್ತಿಲ್ಲ. ಅಲ್ಲದೆ, ಹಿಂದೂಗಳ ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹಿಂದೂ ಯುವಕರು ಆರೋಪಿಸಿದ್ದಾರೆ. ಇದರಿಂದ ಕೆರಳಿದ ಕೆಲ ಹಿಂದೂ ಯುವಕರು ಮುಸ್ಲಿಮರಿಗೆ ಸೇರಿದ ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next