ಮಂಡ್ಯ: ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಸಮಾಜ ಸೇವಕ ಫೈಟರ್ ರವಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಪ್ರತೀ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಡೆಯುತ್ತಿದ್ದ ಮತಗಳು ಮೂರು ಸಾವಿರ ಗಡಿಯೊಳಗೆ ಮಾತ್ರ. ಅಷ್ಟೊಂದು ದುರ್ಬಲವಾಗಿತ್ತು. ಆದರೆ ಈ ಬಾರಿ ತ್ರಿಕೋನ ಸ್ಪರ್ಧೆಗೆ ಕಮಲ ಪಾಳೆಯ ಮುಂದಡಿ ಇಟ್ಟಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಫೈಟರ್ ರವಿ ಎಂಬ ಇಬ್ಬರ ನಾಯಕರ ಮೂಲಕ ಕಾಂಗ್ರೆಸ್-ಜೆಡಿಎಸ್‌ಗೆ ಶಾಕ್ ನೀಡಲು ಮುಂದಾಗಿದೆ.
ಆದರೆ ಇದೇ ಈಗ ಕೇಸರಿ ನಾಯಕರಿಗೆ ತಲೆ ನೋವು ತಂದಿದೆ. ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಶುರುವಾಗಿದೆ. ಕಳೆದ ಆರೇಳು ತಿಂಗಳಿನಿಂದ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಂಚಲನ ಮೂಡಿಸಿರುವ ಫೈಟರ್ ರವಿ(ಮಲ್ಲಿಕಾರ್ಜುನ್) ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಅನಂತರ ಕೆಲವು ತಿಂಗಳ ಹಿಂದೆ ಬಿಜೆಪಿ ಸೇರ್ಪಡೆಗೊಂಡ ಅವರು, ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿ ದ್ದರು. ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿಯೇ ಗುರುತಿಸಿಕೊಂಡು ಇತ್ತೀಚೆಗೆ ನಡೆದ ಮಹಿಳಾ ಸಮಾವೇಶ, ಸಂಕಲ್ಪ ಯಾತ್ರೆ ಸಹಿತ ಬಿಜೆಪಿಯ ವಿವಿಧ ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಯ ಮತ ಬ್ಯಾಂಕ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನಿಂದ ಉಚ್ಚಾಟನೆ ಗೊಂಡಿದ್ದ ಮಾಜಿ ಸಂಸದ ಎಲ್.ಆರ್.ಶಿವರಾ ಮೇಗೌಡ ಬಿಜೆಪಿ ಸೇರ್ಪಡೆಯಾಗಿ ಅಭ್ಯರ್ಥಿ ಯಾಗಲು ಸಜ್ಜಾಗಿದ್ದಾರೆ. ಇದರ ಬಗ್ಗೆ ಕಮಲ ನಾಯಕರ ಜತೆ ಮಾತುಕತೆ ನಡೆದಿದ್ದು, ಸದ್ಯದಲ್ಲಿಯೇ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ. ಬಹುತೇಕ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇದರಿಂದ ಫೈಟರ್ ರವಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟಿಕೆಟ್ ಸಿಗುವ ಭರವಸೆಯಲ್ಲಿಯೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ ಯಾಗುತ್ತಿದ್ದಾರೆ. ಎರಡು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ, 6 ತಿಂಗಳು ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಫೈಟರ್ ರವಿ ವಿರುದ್ಧ ರೌಡಿಶೀಟರ್ ಎಂಬ ಆರೋಪವೂ ಇದೆ. ಒಂದು ವೇಳೆ ಫೈಟರ್ ರವಿಗೆ ಟಿಕೆಟ್ ನೀಡಿದರೆ ವಿಪಕ್ಷಗಳ ಟೀಕೆಗೆ ಗುರಿಯಾಗಬಹುದು ಎಂಬ ಹಿನ್ನೆಲೆಯಲ್ಲಿ ಎಲ್ಲವನ್ನು ಲೆಕ್ಕ ಹಾಕಿರುವ ಕಮಲ ನಾಯಕರು ಶಿವರಾಮೇಗೌಡ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಶಿವರಾಮೇಗೌಡ ಬಿಜೆಪಿಗೆ ಬಂದರೆ ಫೈಟರ್ ರವಿ ಮುಂದಿನ ಆಯ್ಕೆ ಏನು ಎಂಬುದು ಪ್ರಶ್ನೆ ಯಾಗಿದೆ. ಈಗಾಗಲೇ ಮುಂದಿನ ಚುನಾವಣೆಗೆ ನಿಲ್ಲುವುದು ಖಚಿತ ಎಂದು ಘೋಷಣೆ ಮಾಡಿರುವ ಫೈಟರ್ ರವಿ ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು, ಇಲ್ಲ ಪಕ್ಷದಲ್ಲಿಯೇ ಉಳಿದುಕೊಂಡು ಅಭ್ಯರ್ಥಿಗೆ ಬೆಂಬಲ ನೀಡುವುದು ಅನಿವಾರ್ಯವಾಗಿದೆ.
ಇಬ್ಬರು ನಾಯಕರು ಬಿಜೆಪಿ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದು ಹೈಕಮಾಂಡ್‌ಗೂ ಗೊಂದಲ ಉಂಟು ಮಾಡಿದೆ. ಇಬ್ಬರಲ್ಲಿ ಬಿಜೆಪಿ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಕೆರಳಿಸಿದೆ.
-ಶಿವರಾಜು ಎಚ್.